ಶಿವಮೊಗ್ಗ : ಮೀನು ನುಂಗಿ ಉಸಿರಾಟದ ತೊಂದರೆ ಅನುಭವಿಸಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ 11 ತಿಂಗಳ ಮಗುವನ್ನು ಶಿವಮೊಗ್ಗ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರು ಜೀವಾಪಾಯದಿಂದ ಪಾರು ಮಾಡಿದ್ದಾರೆ.

ಹೊನ್ನಾಳಿ ತಾಲ್ಲೂಕು ನ್ಯಾಮತಿ ಹತ್ತಿರದ ಗಂಜೇನಹಳ್ಳಿಯ ಯೋಗೀಶ್‌ ಮತ್ತು ರೋಜಾ ದಂಪತಿಯ 11 ತಿಂಗಳ ಮಗು ಪ್ರತೀಕ್‌ ಮನೆಯೊಳಗೆ ಆಟವಾಡುತ್ತಿದ್ದಾಗ ಮೀನನ್ನು ನುಂಗಿತ್ತು. ಇದನ್ನು ಗಮನಿಸಿದ ಪೋಷಕರು ತಕ್ಷಣವೇ ಮೀನನ್ನು ಹೊರ ತೆಗೆಯಲು ಪ್ರಯತ್ನ ನಡೆಸಿದ್ದರಾದರೂ ಯಶಸ್ವಿ ಆಗಿರಲಿಲ್ಲ. ಅಷ್ಟೊತ್ತಿಗಾಗಲೇ ಮಗುವಿನ ಸ್ಥಿತಿಯು ಗಂಭೀರವಾಗಿತ್ತು. ಬಳಿಕ ಪೋಷಕರು ಮಗುವನ್ನು ಸರ್ಜಿ ಆಸ್ಪತ್ರೆಗೆ ಕರೆ ತಂದಿದ್ದರು. ಕೂಡಲೇ ತಪಾಸಣೆ ನಡೆಸಿದ ತಜ್ಞ ವೈದ್ಯರು ತೀವ್ರ ನಿಗಾಘಟಕದಲ್ಲಿರಿಸಿ, ಗಂಟಲಲ್ಲಿ ಸಿಕ್ಕಿಕೊಂಡಿದ್ದ 11.3 ಸೆಂ.ಮೀ. ಉದ್ದದ ಮೀನನ್ನು ಹೊರ ತೆಗೆದಿದ್ದಾರೆ.

ಇದನ್ನೂ ಓದಿ: ಭಟ್ಕಳದಲ್ಲಿ ಕ್ಯಾನ್ಸರ್ ಅರಿವು ಕಾರ್ಯಕ್ರಮ

ಈ ಅಪರೂಪದ ಪ್ರಕರಣದಲ್ಲಿ ಮಗುವಿಗೆ ಮಕ್ಕಳ ತಜ್ಞ ವೈದ್ಯ ಡಾ.ಪ್ರದೀಪ್‌ ಚಿಕಿತ್ಸೆ ನೀಡಿದ್ದು, ಮಗು ಪ್ರಾಣಾಪಾಯದಿಂದ ಪಾರಾಗಿದೆ. ಚಿಕ್ಕಮಕ್ಕಳು ಈ ರೀತಿ ಆಹಾರ ಪದಾರ್ಥ, ಚಾಕೋಲೇಟ್‌, ಕಾಡಿಗೆ ಡಬ್ಬಿ, ಅಡಕೆ, ಗೋಲಿ, ಗಜಗ, ಶೇಂಗಾ ಬೀಜದಂತಹ ವಸ್ತುಗಳನ್ನು ಗಂಟಲಲ್ಲಿ ಸಿಕ್ಕಿಸಿಕೊಂಡು ಪ್ರಾಣಕ್ಕೆ ಎರವಾದಂತಹ ಘಟನೆಗಳು ಈ ಹಿಂದೆ ನಡೆದಿವೆ. ಪೋಷಕರು ಚಿಕ್ಕಮಕ್ಕಳ ಕೈಗೆ ಯಾವುದೇ ಘನ ವಸ್ತುಗಳನ್ನು ಸಿಗದಂತೆ ಇಡಬೇಕು ಎಂದು ತೀವ್ರ ನಿಗಾ ಘಟಕ ಹಾಗೂ ಶಸ್ತ್ರ ಚಿಕಿತ್ಸಾ ಘಟಕದ ತಜ್ಞ ವೈದ್ಯ ಡಾ.ವಿನೋದ್‌ ಸಲಹೆ ನೀಡಿದ್ದಾರೆ.