ಕುಮಟಾ: ಇಬ್ಬರ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು, ಇದರಲ್ಲಿ ತೀವ್ರವಾಗಿ ಗಾಯಗೊಂಡ ಓರ್ವನನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಬಾಡ ಗ್ರಾಮ ಪಂಚಾಯತದ ಮಾದರಿ ರಸ್ತೆಯಲ್ಲಿ ನಡೆದಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಈ ಘಟನೆಯಲ್ಲಿ ಸ್ಥಳೀಯ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹಾಬಲೇಶ್ವರ ನಾಯ್ಕ ಕಲ್ಲನಮನೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿರತೆ ದಾಳಿಯಿಂದ ಬಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಜನರು ಈಗ ಭಯಗೊಂಡಿದ್ದಾರೆ. ಚಿರತೆಯನ್ನು ಹಿಡಿಯಲು ಈಗ ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆ ಹಿರಿಯ ಅಧಿಕಾರಿಗಳು ಮಾದರಿ ರಸ್ತೆಯಲ್ಲಿ ಮುಕ್ಕಾಂ ಹೂಡಿದ್ದಾರೆ.
ಇದನ್ನೂ ಓದಿ : ಹೊನ್ನಾವರದ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ
ಮಹಾಬಲೇಶ್ವರ ನಾಯ್ಕ ಅವರು ತಮ್ಮ ಮನೆಯ ಹೊರಗಡೆ ಇದ್ದಾಗ ಚಿರತೆ ಏಕಾಏಕಿ ಇವರ ಮೇಲೆ ದಾಳಿ ಮಾಡಿತು. ಈ ಸಂದರ್ಭದಲ್ಲಿ ಅವರ ಎಡ ತೋಳಿಗೆ ಗಾಯವಾಗಿದೆ. ಅವರು ಅಲ್ಲಿಂದ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಈ ವಿಷಯ ತಿಳಿದ ಅಕ್ಕಪಕ್ಕ ಮನೆಯವರು ಮಹಾಬಲೇಶ್ವರ ನಾಯ್ಕ ಅವರನ್ನು ಚಿಕಿತ್ಸೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ಕರೆತಂದರು.
ಇದನ್ನೂ ಓದಿ : ಉಪನ್ಯಾಸಕ, ಪತ್ರಕರ್ತ ಎಸ್.ಎಂ. ನೀಲೇಶಗೆ ಡಾಕ್ಟರೇಟ್
ಮಹಾಬಲೇಶ್ವರ ನಾಯ್ಕ ಅವರ ಮೇಲೆ ಚಿರತೆ ದಾಳಿ ಮಾಡಿದ ವಿಷಯ ಊರಿಗೆಲ್ಲಾ ಗೊತ್ತಾಯಿತು. ಇದೇ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡ ಜಗನ್ನಾಥ ನಾಯ್ಕ ಅವರು ಚಿರೆತೆಯನ್ನು ಬೆದರಿಸಿ ಓಡಿಸುವ ಉದ್ದೇಶದಿಂದ ಅನೇಕ ಯುವಕರೊಂದಿಗೆ ಬಡಿಗೆ, ಸೊಟ್ಟೆಗಳನ್ನು ಹಿಡಿದು ಮಹಾಬಲೇಶ್ವರ ನಾಯ್ಕ ಅವರ ಮನೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಚಿರತೆ ಇವರ ಮೇಲೂ ದಾಳಿ ಮಾಡಿದೆ. ಈ ದಾಳಿಯಲ್ಲಿ ಹರಿಶ್ಚಂದ್ರ ನಾಯ್ಕ ಎಂಬುವವರಿಗೆ ಗಾಯವಾಗಿದೆ. ಜಗನ್ನಾಥ ನಾಯ್ಕ ಅವರು ಹರಿಶ್ಚಂದ್ರ ನಾಯ್ಕ ಅವರೊಂದಿಗೆ ಮಹಾಬಲೇಶ್ವರ ನಾಯ್ಕ ಅವರ ಮನೆಯ ಒಳ ಸೇರಿಕೊಂಡು ಜೀವ ಉಳಿಸಿಕೊಂಡಿದ್ದಾರೆ.
ನಾನು ಹರಿಶ್ಚಂದ್ರ ನಾಯ್ಕ ಅವರನ್ನು ನನ್ನತ್ತ ಸೆಳೆದುಕೊಳ್ಳದಿಂದ್ದರೆ ಚಿರತೆ ಅವರನ್ನು ಖಂಡಿತವಾಗಿಯೂ ಮುಗಿಸುತ್ತಿತ್ತು. ಹರಿಶ್ವಂದ್ರ ನಾಯ್ಕ ಅವರೊಂದಿಗೆ ನಾನು ಕೋಣೆಯೊಂದರಲ್ಲಿ ಸೇರಿಕೊಂಡು ಬಾಗಿಲನ್ನು ಭದ್ರ ಮಾಡಿಕೊಂಡೆ. ಆದರೂ ಚಿರತೆ ನಾವಿರುವ ಕೋಣೆಯ ಕಿಟಕಿ ಬಳಿ ಬಂದು ನಮ್ಮ ಮೇಲೆ ದಾಳಿ ನಡೆಸಲು ೨-೩ ಸಲ ಯತ್ನಿಸಿತು. ಕಿಟಕಿಗೆ ಕಬ್ಬಿಣದ ಸರಳಿರುವುದರಿಂದ ನಾವು ಬಚಾವಾಗಿ ಉಳಿದುಕೊಂಡಿದ್ದೇವೆ.
– ಜಗನ್ನಾಥ ನಾಯ್ಕ
ಕುಮಟಾ ವಲಯ ಅರಣ್ಯಾಧಿಕಾರಿ ಎಸ್.ಟಿ.ಪಟಗಾರ ಹಾಗೂ ಎ.ಸಿ.ಎಫ್. ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಗಾಯಾಳು ಕ್ಷೇಮ ವಿಚಾರಿಸಿದ್ದಾರೆ. ಅಲ್ಲದೆ ಘಟನೆ ನಡೆದ ಮನೆಗೆ ಡಿ.ಎಫ್.ಓ, ಎ.ಸಿ.ಎಫ್, ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಹಿಡಿಯಲು ನುರಿತವರನ್ನು ಸ್ಥಳಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಸಕ ದಿನಕರ ಶೆಟ್ಟಿ ಆಸ್ಪತ್ರೆಗೆ ಭೇಟಿ :
ಚಿರತೆ ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಹಾಬಲೇಶ್ವರ ನಾಯ್ಕ ಅವರನ್ನು ಶಾಸಕ ದಿನಕರ ಶೆಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಧೈರ್ಯ ತುಂಬಿದರು. ಶಾಸಕರೊಂದಿಗೆ ಜಿಲ್ಲಾ ಬಿಜೆಪಿ ಮುಖಂಡ ಗಜಾನನ ಗುನಗಾ, ಬಿ.ಡಿ.ಪಟಗಾರ ಹಾಗೂ ಇತರರು ಇದ್ದರು.
ಇತ್ತಿಚೆಗೆ ಹೊಲನಗದ್ದೆ ಗ್ರಾ.ಪಂ ಹಾಗೂ ಚಿತ್ರಗಿ ಬಳಿ ಚಿರತೆ ಕಾಣಿಸಿಕೊಂಡು ಜನ ಭಯ ಬೀಳುವಂತೆ ಮಾಡಿತ್ತು. ನಂತರ ಅರಣ್ಯ ಇಲಾಖೆಯವರು ಚಿತ್ರಗಿ ಗುಡ್ಡದ ಮೇಲೆ ಬೋನ್ ಇಟ್ಟು ಚಿರತೆಯೊಂದನ್ನು ಹಿಡಿದಿದ್ದನ್ನು ಸ್ಮರಿಸಬಹುದು.