ಕುಮಟಾ: ಲೋಕಸಭಾ ಚುನಾವಣೆಯಲ್ಲಿ ಆಶೀರ್ವದಿಸಿದರೆ ಗೃಹಲಕ್ಷ್ಮೀಯಿಂದ ಮಹಾಲಕ್ಷ್ಮಿಗೆ ಬಡ್ತಿ ನೀಡಿ, ಮತ್ತೈದು ಗ್ಯಾರಂಟಿ ಯೋಜನೆಯನ್ನ ಜಾರಿಗೆ ತರುತ್ತೇವೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.

ಇದನ್ನೂ ಓದಿ : ಬರಗದ್ದೆ ಸೊಸೈಟಿ ಅವ್ಯವಹಾರ: ೭ ಜನರ ವಿರುದ್ಧ ದೂರು ದಾಖಲು

ವಾಲಗಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬಹಿರಂಗ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ನಾವು ಕೆಲಸ ಮಾಡಿ ಮತ ಕೇಳುತ್ತೇವೆ. ಬಿಜೆಪಿಗರಿಂದ ೧೦ ವರ್ಷ ಕಳೆದರೂ ೧೫ ಪೈಸೆ ಕೂಡ ಬಡವರ ಖಾತೆಗೆ ಬಂದಿಲ್ಲ. ಬಡವರು ಬಡವರಾಗೇ ಉಳಿಯುತ್ತಿದ್ದಾರೆ. ರೈತರ ಸಾಲ ಸಾಲವಾಗೇ ಉಳಿಯುತ್ತಿದೆ. ನೀವು ಮತ ನೀಡಿ ಗೆಲ್ಲಿಸಿದರೆ ಅತಿಕ್ರಮಣದಾರರಿಗೆ ನ್ಯಾಯ ಕೊಡಲು ನಿಮ್ಮ ಧ್ವನಿಯಾಗಿ ಸಂಸತ್‌ನಲ್ಲಿ ಹೋರಾಡುವೆ ಎಂದರು.
೩೦ ವರ್ಷಗಳಿಂದ ಕಾಂಗ್ರೆಸ್ ಸಂಸದರು ಕ್ಷೇತ್ರದಲ್ಲಿ ಇರಲಿಲ್ಲ. ಆ ಮೂರು ದಶಕಗಳಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕ್ಷೇತ್ರದ ಮನೆಮಗಳಂತೆ ನನಗೆ ಈ ಬಾರಿ ಚುನಾವಣೆಯಲ್ಲಿ ಒಂದು ಅವಕಾಶ ನೀಡಿ ಆಶೀರ್ವದಿಸಿ. ಹಸ್ತದಿಂದಲೇ ನಮ್ಮ ಉದ್ಧಾರ, ಹಸ್ತದಿಂದಲೇ ಭವಿಷ್ಯ ಎಂದರು.

ಇದನ್ನೂ ಓದಿ : ಹೆಗಡೆ ಗ್ರಾಮದಲ್ಲಿ ವಾಲಿಬಾಲ್ ಪಂದ್ಯಾವಳಿ ಮೇ ೧೦-೧೨
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಮತದ ಮಹತ್ವ ಎಲ್ಲರೂ ಅರಿಯಬೇಕಿದೆ. ಆ ಒಂದು ಮತವನ್ನ ಕಾಂಗ್ರೆಸ್ ಪರವಾಗಿ, ಡಾ.ಅಂಜಲಿ ಅವರ ಪರವಾಗಿ ಚಲಾಯಿಸಬೇಕಿದೆ. ವಿದ್ಯಾವಂತರಾದರೂ ದೇಶದಲ್ಲಿ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ ಯುವನ್ಯಾಯದ ಮೂಲಕ ಸರ್ಕಾರಿ ಉದ್ಯೋಗಾವಕಾಶ ಕಲ್ಪಿಸುವ ಯೋಜನೆಯನ್ನ ಕಾಂಗ್ರೆಸ್ ಘೋಷಿಸಿದೆ. ಭೀಕರ ಬರಗಾಲವಿದ್ದರೂ ಕೇಂದ್ರ ಸರ್ಕಾರ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು. ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿದರು. ದೇವಗಿರಿ ಜಿಲ್ಲಾ ಪಂಚಾಯತ ವತಿಯಿಂದ ಡಾ.ಅಂಜಲಿ ಅವರಿಗೆ ಉಡಿ ತುಂಬಿ ಗೌರವಿಸಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಅನೇಕರು ಪಕ್ಷ ಸೇರ್ಪಡೆಗೊಂಡರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಎಚ್.ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್, ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಹನುಮಂತ ಪಟಗಾರ ಇದ್ದರು.