ಕುಮಟಾ : ಜಗತ್ತಿನಲ್ಲಿ ಅಸಮರ್ಥರು ಯಾರೂ ಇಲ್ಲ. ಎಲ್ಲರೂ ಸಮರ್ಥರೇ. ಆದರೆ ಅವರವರಿಗೆ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಲು ಕಲಿಯಬೇಕು. ಹೀಗಾದಾಗ ಮಾತ್ರ ಪ್ರತಿಯೊಬ್ಬರೂ ಸಮರ್ಥರಾಗಲು ಸಾಧ್ಯ ಎಂದು ಕುಂದಾಪುರದ ಹಟ್ಟಿಅಂಗಡಿಯ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆ ಹಟ್ಟಿಯಂಗಡಿಯ ಪ್ರಾಂಶುಪಾಲ ಶರಣಕುಮಾರ ಅಭಿಪ್ರಾಯಪಟ್ಟರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಅವರು ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಾಧನೆಗೆ ಪುರಸ್ಕಾರ ಹಾಗೂ ಸಾಧನೆಗೆ ಮಾರ್ಗದರ್ಶನ ಮಾಡಿದ ಗುರುವೃಂದಕ್ಕೆ ಹಮ್ಮಿಕೊಂಡ ಅಭಿನಂದನಾ ಸಮಾರಂಭ ‘ಅಭಿಪ್ರೇರಣಾ ಮಹೋತ್ಸವ’ ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ : ಶಾಲೆಯ ಉಳಿವಿಗಾಗಿ ಭೂಮಿ ದಾನ ಮಾಡಿದ ಉದ್ಯಮಿ ಮಾದೇವ ನಾಯ್ಕ

ಬದುಕಿನಲ್ಲಿ ಅವಕಾಶಗಳು ಸಿಗುವುದು ತೀರಾ ಕಡಿಮೆ. ಸಿಕ್ಕಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲು ಕಲಿಯಬೇಕು. ಹಾಗಾದಾಗ ಮಾತ್ರ ಸಾಧನೆಯಾಗುತ್ತದೆ. ಜಗತ್ತಿನಲ್ಲಿ ಸಾಧಕರಾಗಲು ಎಲ್ಲರಿಗೂ ಸಾಧ್ಯವಿದೆ. ಆದರೆ ನಿರಂತರ ಪರಿಶ್ರಮ, ಅವಕಾಶಗಳ ಸದ್ಬಳಕೆ, ಜಡತ್ವವನ್ನು ತೊರೆದು ಕಾರ್ಯಮಾಡುವಿಕೆಯ ಅವಶ್ಯಕತೆ ಇರುತ್ತದೆ ಎಂದರು.

ಇದನ್ನೂ ಓದಿ : ಕಾರಿಗೆ ಹಗ್ಗ ಕಟ್ಟಿ ಎಳೆದೊಯ್ದು ಪ್ರತಿಭಟನೆ ನಡೆಸಿದ ಬಿಜೆಪಿ

ಸಾಧನೆ ಮಾಡಿದ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂಬ ಉದ್ದೇಶದಿಂದ ಸಂಸ್ಥೆ ಸಮಾರಂಭವನ್ನು ಹಮ್ಮಿಕೊಂಡಿದೆ. ಶಿಕ್ಷಕರನ್ನು ಅಭಿನಂದಿಸುತ್ತಿರುವುದು ಶ್ಲಾಘನೀಯವಾದದ್ದು ಎಂದು ಶರಣಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ಡಯಟ್ ಪ್ರಾಂಶುಪಾಲ ಹಾಗೂ ಡಿಡಿಪಿಐ ಎನ್. ಜಿ ನಾಯಕ ಮಾತನಾಡಿ, ಉತ್ತರ ಕನ್ನಡದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್ ಅತ್ಯುತ್ತಮ ಸಂಸ್ಥೆಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಸಹಸ್ರಾರು ವಿದ್ಯಾರ್ಥಿಗಳಿಗೆ ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿರುವ ಸಂಸ್ಥೆ ಇದು. ವಿದ್ಯಾರ್ಥಿಗಳು ಸಂಸ್ಥೆಯ ಪ್ರೀತಿಯನ್ನು ಅನುಭವಿಸಿದ್ದಾರೆ. ವಿದ್ಯಾರ್ಥಿಗಳನ್ನು ಸಾಧಕರಾಗಿ ರೂಪಿಸುವಲ್ಲಿ ಶಿಕ್ಷಕರ ಶ್ರಮ ಬಹಳಷ್ಟು ಇದೆ. ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯೂ ಮಹತ್ವದ್ದು, ಪಾಲಕರ ಕೊಡುಗೆಯನ್ನು ಎಂದಿಗೂ ಮರೆಯುವಂತಿಲ್ಲ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಕಾರ್ಯದರ್ಶಿ ಮುರಳೀಧರ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತೀಯ ಸಂಸ್ಕೃತಿ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ನಿಟ್ಟಿನಲ್ಲಿ ಸಂಸ್ಥೆ ನಿರಂತರವಾಗಿ ಕಾರ್ಯ ಮಾಡುತ್ತಿದೆ. ನಾವು ಎಂದಿಗೂ ರ‌್ಯಾಂಕಿನಲ್ಲಿ ಹಿಂದೆ ಬಿದ್ದಿಲ್ಲ. ನಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನಾವು ಮಾಡಿಕೊಂಡು ಬಂದಿದ್ದೇವೆ. ಈ ಎಲ್ಲಾ ಸಾಧನೆಗಳೂ ನಮಗೆ ಬೈ ಪ್ರಾಡೆಕ್ಟ್ ಇದ್ದಂತೆ. ಭಾರತೀಯ ಸಂಸ್ಕಾರ ಸಂಸ್ಕೃತಿಗಳ ಕಲಿಕೆಯೇ ನಮ್ಮ ಉದ್ದೇಶ ಎಂದು ಸಂಸ್ಥೆಯ ಉದ್ದೇಶ ತಿಳಿಸಿದರು.
ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಎಲ್ಲೆಡೆ ನಡೆಯುತ್ತದೆ. ಆದರೆ ಸಾಧನೆ ಹಿಂದಿನ ಶಕ್ತಿಯಾಗಿರುವ ಶಿಕ್ಷಕರನ್ನು ಕಳೆದ 20 ವರ್ಷಗಳಿಂದ ನಾವು ಗೌರವಿಸುತ್ತಾ ಬಂದಿದ್ದೇವೆ. ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಇವರೆಲ್ಲರನ್ನು ಗೌರವಿಸುವ ಅಪೇಕ್ಷೆ ನಮ್ಮದು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದಲ್ಲಿ ರ‌್ಯಾಂಕ್ ಪಡೆದ ೧೨ ವಿದ್ಯಾರ್ಥಿಗಳು, ೯೫% ಕ್ಕಿಂತ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಎಸ್. ಎಸ್. ಎಲ್.ಸಿ. ವಿದ್ಯಾರ್ಥಿಗಳನ್ನು ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಸರಸ್ವತಿ ಪಿ.ಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರನ್ನೂ ಅಭಿನಂದಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ವಿಠಲ ನಾಯಕ ಸಭಾಧ್ಯಕ್ಷತೆ ವಹಿಸಿದ್ದರು. ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ವಿಶ್ವಸ್ಥರಾದ ದಾಮೋದರ ಭಟ್ಟ, ರಾಮಕೃಷ್ಣ ಗೋಳಿ, ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ, ಮುಖ್ಯ ಶಿಕ್ಷಕಿ ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ ವೇದಿಕೆಯಲ್ಲಿ ಇದ್ದರು.

ಮುಖ್ಯ ಶಿಕ್ಷಕಿ ಸುಮಾ ಪ್ರಭು ಎಸ್ ಎಸ್ ಎಲ್ ಸಿ ಸಾಧಕರ ವಿವರವನ್ನು ಸಭೆಗೆ ತಿಳಿಸಿದರು. ಪ್ರಾಂಶುಪಾಲ ಕಿರಣ ಭಟ್ಟ ಸ್ವಾಗತಿಸಿ, ಪಿ.ಯು.ಸಿ. ವಿಭಾಗದ ಸಾಧನೆಯನ್ನು ತೆರೆದಿಟ್ಟರು. ಹಿರಿಯ ವಿಶ್ವಸ್ಥ ರಮೇಶ ಪ್ರಭು ಸಭಾವಂದನೆಗೈದರು. ನೂರಾರು ವಿದ್ಯಾರ್ಥಿಗಳು, ಸಂಸ್ಥೆಯ ಹಿತೈಷಿಗಳು, ಸಾಧಕ ವಿದ್ಯಾರ್ಥಿಗಳ ಪಾಲಕರು ಹಾಜರಿದ್ದರು.