ಭಟ್ಕಳ: ಜಾಲಿ ಪಟ್ಟಣ ಪಂಚಾಯತನ್ನು ಉದ್ದೇಶಿತ ಭಟ್ಕಳ ನಗರಸಭೆಗೆ ಸೇರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಜಾಲಿ‌ ಭಾಗದ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ಪಟ್ಟಣ ಪಂಚಾಯತಗೆ ಮುತ್ತಿಗೆ ಹಾಕಿ ಸ್ಥಳಕ್ಕೆ ತಹಸೀಲ್ದಾರ ಬರಬೇಕೆಂದು ಆಗ್ರಹಿಸಿ ಪ್ರತಿಭಟಿಸಿದ ಘಟನೆ ಬುಧವಾರದಂದು ನಡೆದಿದೆ. ಈಗಾಗಲೇ ಗ್ರಾಮ ಪಂಚಾಯತನಿಂದ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಸಿ ಆರೇಳು ವರ್ಷ ಕಳೆಯುವ ಮೊದಲೇ ಮತ್ತೊಂದು ತೀರ್ಮಾನಕ್ಕೆ ಬಂದಿರುವುದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಪಟ್ಟಣ ಪಂಚಾಯತ ಆಗಿ ಮೇಲ್ದರ್ಜೆಗೆ ಏರಿಸಿದ ಮೇಲೆ ಅಭಿವೃದ್ಧಿ ಶೂನ್ಯವಾಗಿದೆ. ಕನಿಷ್ಠ ಗ್ರಾಮ ಪಂಚಾಯತಗೆ ಇರುವ ಸೌಲಭ್ಯ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಇಲ್ಲ. ಗ್ರಾಮದಲ್ಲಿ ಎಲ್ಲರೂ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದು, ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ. ಪಟ್ಟಣ ಪಂಚಾಯತ ವಿಧಿಸುವ ಅಧಿಕ ತೆರಿಗೆ ಹಣ ಭರಿಸಲು ಆಗದೆ ಜನರಿಗೆ ಸಮಸ್ಯೆ ಆಗಿದೆ. ಗ್ರಾಮದಲ್ಲಿ ಬಹುತೇಕ ಕೃಷಿ ಭೂಮಿಯಿದ್ದು, ನಗರೀಕರಣದಿಂದ ಕೃಷಿ ಕೆಲಸಕ್ಕೆ ಹೊಡೆತ ಬೀಳಲಿದೆ. ಕರೆಂಟ್ ಬಿಲ್, ನೀರಿನ ಬಿಲ್ ಇನ್ನಷ್ಟು ದುಬಾರಿಯಾಗಲಿದ್ದು, ಬದುಕುವುದೇ ಕಷ್ಟವಾಗಲಿದೆ. ಈಗಾಗಲೇ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಬಂದ ಮೇಲೆ ರಿಯಲ್ ಎಸ್ಟೇಟ್ ಕುಳಗಳ ದಬ್ಬಾಳಿಕೆ ಮಿತಿ ಮೀರಿದೆ. ಬಹುತೇಕ ಕೃಷಿ ಭೂಮಿ ಅಸ್ತಿತ್ವ ಕಳೆದುಕೊಂಡಿದ್ದು, ಅಳಿದುಳಿದ ಕೃಷಿ ಭೂಮಿಗೂ ಸಂಕಷ್ಟ ಎದುರಾಗಲಿದೆ. ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸದೇ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯವಾಗದೇ ಇರುವಾಗ ಏಕಾಏಕಿ ನಗರ ಸಭೆಯಾಗಿ ಮಾಡಲು ಹೊರಟಿರುವುದು ಹಾಸ್ಯಾಸ್ಪದ, ನಗರ ಸಭೆಯಾಗಿ ಮಾಡುವ ಪ್ರಸ್ತಾವನೆಯನ್ನು ಇಲ್ಲಿಗೆ ನಿಲ್ಲಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ವಿಡಿಯೋ ನೋಡಿ:  https://fb.watch/qcLZ3KIaj2/?mibextid=Nif5oz

ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಗ್ರಾಮದ ಬಡವರ ತಲೆ ಮೇಲೆ ಮತ್ತಿಷ್ಟು ಹೊರೆ ಹೇರಬೇಡಿ. ನಮಗೂ ಬದುಕಲು ಬಿಡಿ. ನಿಮ್ಮ ಮೇಲೆ ಭರವಸೆ ಇಟ್ಟು ಬದುಕು ಸಾಗಿಸುತ್ತಿದ್ದೇವೆ ಎಂದು ಸಾರ್ವಜನಿಕರು ಆಗ್ರಹಪಡಿಸಿದರು.

ಜಾಲಿ‌ ಪಟ್ಟಣ ಪಂಚಾಯತ ಚುನಾಯಿತ ಜನಪ್ರತಿನಿಧಿ ದಯಾನಂದ ನಾಯ್ಕ ನೇತೃತ್ವದಲ್ಲಿ ಜಾಲಿ ಪಟ್ಟಣ ಪಂಚಾಯತಗೆ ಮುತ್ತಿಗೆ ಹಾಕಿ ಮಹಿಳೆಯರು ಮತ್ತು ಸಾರ್ವಜನಿಕರು ಮನವಿ ಸಲ್ಲಿಸುವ ಪೂರ್ವದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎನ್. ಮಂಜಪ್ಪ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಹಾಕಿದ್ದು ಈ ವಿಚಾರದಲ್ಲಿ ಗ್ರಾಮಸ್ಥರಿಗೂ ಮುಖ್ಯಾಧಿಕಾರಿ ನಡುವೆ ಮಾತಿನ ಚಕಮಕಿ ನಡೆಯಿತು. ಸರಕಾರದ ಅಧಿಸೂಚನೆಯಂತೆ ನಗರಸಭೆಗೆ ಏರಿಸುವ ವಿಚಾರದಲ್ಲಿ ಸಾರ್ವಜನಿಕರಿಗೆ ಅಥವಾ ಚುನಾಯಿತ ಜನಪ್ರತಿನಿಧಿಗಳ ಗಮನಕ್ಕೆ ತರದೇ ಏಕಾಏಕಿ ಮಾಹಿತಿಯನ್ನು ಸರಕಾರಕ್ಕೆ ನೀಡಿದ್ದು ಅದು ಎಷ್ಟರ ಮಟ್ಟಿಗೆ ಸರಿ ಎಂದು ದಯಾನಂದ ನಾಯ್ಕ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಮಂಜಪ್ಪ, ಸರಕಾರ ಮತ್ತು ಜಿಲ್ಲಾಧಿಕಾರಿಗಳ ಸೂಚನೆಯಂತೆ ನಗರಸಭೆಗೆ ಸಂಬಂಧಿಸಿದಂತೆ ಮಾಹಿತಿ ನೀಡಬೇಕಾದ ಜವಾಬ್ದಾರಿಯನ್ನು ನಾನು ಮಾಡಿದ್ದೇನೆ. ನಗರಸಭೆಗೆ ಏರಿಸುವ ವಿಚಾರದಲ್ಲಿ ಸಾರ್ವಜನಿಕರ ಗಮನಕ್ಕೆ ಸರಕಾರವು ಮುಂದೆ ಅವಕಾಶ ತರಲಿದ್ದು ಈ ವೇಳೆ ಪಟ್ಟಣ ಪಂಚಾಯತನಿಂದ ನಗರಸಭೆಗೇರಿಸುವುದರ ಬಗ್ಗೆ ತಕರಾರು ಅಥವಾ ವಿರೋಧವನ್ನು ಆಗ ಮಾಡಬೇಕಾಗಿದೆ ಹೊರತೂ ಈಗ ಈ ವಿಚಾರದಲ್ಲಿ ಅಧಿಕಾರಿಗಳು ಏನೂ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಫೆ.21-22: ಮಣಕುಳಿ ನಾಗಮಾಸ್ತಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠೆ ಕಾರ್ಯಕ್ರಮ

ಆದರೆ ಈ ಹಿಂದೆ ಜಾಲಿ ದೇವಿ‌ನಗರ ನಾಮಫಲಕ ವಿಚಾರದಲ್ಲಿ ಮುಖ್ಯಾಧಿಕಾರಿ ರಾತ್ರೋರಾತ್ರಿ ನಾಮಫಲಕ ತೆರವು ಮಾಡಿದ್ದಾರೆಂಬ ಆರೋಪವನ್ನು ಮತ್ತೆ ಪುನರುಚ್ಛರಿಸಿದ ಸಾರ್ವಜನಿಕರು ತಮ್ಮ ಗಮನಕ್ಕೆ ತಾರದೆ ಏಕಾಏಕಿ ನಗರಸಭೆ ಮಾಡಿದ್ದಲ್ಲಿ ಅದಕ್ಕೆ ಹೈರಾಣ ಆಗುವವರು ತಾವು ಹೊರತಾಗಿ ಅಧಿಕಾರಿಗಳಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಗ್ರಾಮಸ್ಥರ ಪ್ರಶ್ನಾವಳಿಗೆ ಮುಖ್ಯಾಧಿಕಾರಿ ಉತ್ತರಿಸಲಾಗದೇ ಚಡಪಡಿಸಿದರು. ಸ್ಥಳಕ್ಕೆ ಪಂಚಾಯತ ಆಡಳಿತಾಧಿಕಾರಿ, ತಹಶೀಲ್ದಾರ ಬರಬೇಕೆಂದು ಪ್ರತಿಭಟನೆಗೆ ಮುಂದಾದರು.
ಸತತ ಎರಡು ಗಂಟೆಗಳ ಪ್ರತಿಭಟನೆ ಬಳಿಕ ಸ್ಥಳಕ್ಕೆ ಬಂದ ತಹಸೀಲ್ದಾರ ತಿಪ್ಪೇಸ್ವಾಮಿ ಸಾರ್ವಜನಿಕರ ಮನವಿ ಸ್ವೀಕರಿಸಿದರು. ಪಟ್ಟಣ ಪಂಚಾಯತನಿಂದ ನಗರಸಭೆಗೆ ಮೇಲ್ದರ್ಜೆಗೆರಿಸುವುದು ಬೇಕೋ ಬೇಡವೋ ಎಂಬುದನ್ನು ಸರ್ಕಾರ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಿದ್ದು, ಈ ವೇಳೆ ಸಾರ್ವಜನಿಕರು ತಮ್ಮ ಅಭಿಪ್ರಾಯ ತಿಳಿಸಬಹುದು ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಸುಬ್ರಾಯ ನಾಯ್ಕ, ಪುಷ್ಪಾ ನಾಯ್ಕ, ನೇತ್ರಾವತಿ ನಾಯ್ಕ, ಮಹೇಶ ಮೊಗೇರ, ಹನುಮಂತ ನಾಯ್ಕ, ಹರೀಶ ಆಚಾರ್ಯ, ಗಣಪತಿ ಗೊಂಡ, ವಿವೇಕ ನಾಯ್ಕ, ಸುಮಂತ ಆಚಾರ್ಯ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.