ಭಟ್ಕಳ : ಕಾಂಗ್ರೆಸ್ ಅಭ್ಯರ್ಥಿ ಕಾಂಗ್ರೆಸ್
ಗ್ಯಾರಂಟಿಯನ್ನೇ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಆದರೆ ನಮಗೆ ಮೋದಿ ಎಂಬ ಗ್ಯಾರೆಂಟಿ ಇದೆ. ಪ್ರಧಾನಿ ಮೋದಿ ನೀಡಿದ ಯೋಜನೆಯ ಗ್ಯಾರೆಂಟಿ ಮಹಿಳೆಯರನ್ನು ತಲುಪಬೇಕು ಎಂದು ಉ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಹೆಗಡೆ ಕರೆ ನೀಡಿದರು.

ಇದನ್ನೂ ಓದಿ : ಉತ್ತರ ಕನ್ನಡ ಸಹಿತ ಹಲವೆಡೆ ಮುಂದಿನ 5 ದಿನ ಭಾರೀ ಮಳೆ

ಇಲ್ಲಿನ ಮಣ್ಕುಳಿಯಲ್ಲಿರುವ ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ಗುರುವಾರ ಜಿಲ್ಲಾ ಮಟ್ಟದ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಮಹಿಳೆ ಎಂದರೆ ಭೋಗಿಸುವುದು. ಆದರೆ ಸನಾತನ ಧರ್ಮದಲ್ಲಿ ಪೂಜಿಸುವ ಸ್ಥಾನದಲ್ಲಿ ಮಹಿಳೆಯನ್ನು ಇಡಲಾಗಿದೆ. ದಿನಕ್ಕೆ ಎರಡು ಗಂಟೆ ಪಕ್ಷಕ್ಕಾಗಿ ಸಮಯಕ್ಕೆ ನೀಡಿ ಈ ಬಾರಿ ಬಿಜೆಪಿ ಗೆಲ್ಲಿಸಬೇಕು ಎಂದರು.

ಇದನ್ನೂ ಓದಿ : ಕೆಎಸ್ಸಾರ್ಟಿಸಿ ಚಾಲಕರು ಡಬಲ್ ಡ್ಯೂಟಿ ಮಾಡುವಂತಿಲ್ಲ

ಸನಾತನ ಧರ್ಮದಲ್ಲಿ ಹೆಣ್ಣು ತಾಯಿ ಸ್ಥಾನದಿಂದ ಹಿಡಿದು ಒಬ್ಬ ವ್ಯಕ್ತಿಯ ಎಲ್ಲಾ ಸ್ತರದಲ್ಲಿಯೂ ಅವಶ್ಯಕ. ಸಮಾಜದಲ್ಲಿ ಬದಲಾವಣೆ ತರುವ ಕೆಲಸ ಮಹಿಳೆಯಿಂದ ಮಾತ್ರ ಸಾಧ್ಯ. ಮನೆಯಲ್ಲಿ ಮಹಿಳೆಯು ಸುಸಂಸ್ಕೃತೆಯಾಗಿದ್ದರೆ ಮನೆ ಬೆಳಗುತ್ತದೆ. ಅದೇ ರೀತಿ ಒಂದು ಪಕ್ಷಕ್ಕಾಗಿ ಮಹಿಳೆ ದುಡಿದರೆ ಪಕ್ಷ ಬೆಳಗುತ್ತದೆ ಎಂದರು.


ಮೋದಿ ಪ್ರಧಾನಿ ಆಗುವದಕ್ಕಿಂತ ಮೊದಲು ದೇಶವನ್ನು‌ ತುಚ್ಛವಾಗಿ ನೋಡಲಾಗುತ್ತಿತ್ತು. ಆದರೆ ಮೋದಿ ಪ್ರಧಾನಿ‌ ಆದ ಮೇಲೆ ದೇಶವು ವಿಶ್ವದಲ್ಲಿಯೇ ಹೆಸರು ಮಾಡಿದೆ. ೨೦೦೪ರಿಂದ ೨೦೧೪ರವರೆಗೆ 10 ವರ್ಷ ಎಲ್ಲಾ ರೀತಿಯಲ್ಲೂ ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ೨೦೧೪ರ ಬಳಿಕ ಹೆಸರೇ ಇಲ್ಲದಂತಾಗಿದೆ ಎಂದರು.
ಯಾವುದೇ ಜಾತಿ ಧರ್ಮಕ್ಕೆ ಮೀಸಲಾಗದ ರೀತಿಯಲ್ಲಿ ಪ್ರಧಾನಿ ಮೋದಿ ಅವರು ಯೋಜನೆಯನ್ನು ರೂಪಿಸಿದ್ದಾರೆ. ಮತಗಟ್ಟೆಯಲ್ಲಿಯು ಮಹಿಳೆಯರನ್ನು ಹೆಚ್ಚು ಹೆಚ್ಚು ಸಂಪರ್ಕಿಸಿ ಮೋದಿ ಅವರ ಕಾರ್ಯವನ್ನು ತಲುಪಿಸುವ ಕೆಲಸ ಮಾಡಬೇಕು. ಪ್ರತಿ ಮನೆಯ ತಾಯಿಯಂದಿರನ್ನು ಭೇಟಿ ಮಾಡಬೇಕು. ೪೦ ದಿವಸಗಳ ಕಾಲ ಪ್ರಚಾರಕ್ಕೆ ಅವಕಾಶ ಇದೆ. ಈ ನಿಟ್ಟಿನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುವ ಜವಾಬ್ದಾರಿ ನಮ್ಮದು. ಪ್ರತಿ ಬೂತನಲ್ಲಿ‌ ಕನಿಷ್ಠ ಎರಡು ಮೂರು ಮಹಿಳೆಯರನ್ನು ಪಕ್ಷಕ್ಕೆ ಕೆಲಸ ಮಾಡಬೇಕು. ಈ ಬಾರಿ ನಮ್ಮ ಮತವು ಅಯೋಧ್ಯೆಯ ರಾಮನನ್ನು ಮತ್ತು ಸಮಸ್ತ ಹಿಂದು ಧರ್ಮಕ್ಕೆ ತಲುಪಲಿದೆ ಎಂದರು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಭಟ್ಕಳದಂತಹ ತಾಲೂಕಿನಲ್ಲಿ ಮಹಿಳಾ ಮೋರ್ಚಾದಲ್ಲಿ ಕಾರ್ಯಕಾರಣಿ ಸಭೆ ನಡೆದಿರುವುದು ಸಂತಸ. ನಮ್ಮ ದೇಶ ಮುನ್ನಡೆಸುವವರ ಜೊತೆಗೆ ಎಲ್ಲರೂ ದುಡಿಯಬೇಕು, ಕೆಲಸ ಮಾಡಬೇಕು ಎಂಬ ಆಶಯ ನಮ್ಮ ಮೋದಿ ಅವರದ್ದು. ಬಿಜೆಪಿ ಪಕ್ಷದ ಶಾಲು ಧರಿಸಿದರೆ ನಮ್ಮಲ್ಲಿ ಧೈರ್ಯ ಹೆಚ್ಚಾಗಲಿದೆ ಎಂದರು.


ಸಭೆಯಲ್ಲಿದ್ದ ಮಹಿಳೆಯರು ನಿಮ್ಮ ನಿಮ್ಮ ಬೂತ್ ನ ಮಹಿಳೆಯರನ್ನು ಪಕ್ಷದ ಸಿದ್ಧಾಂತದೊಳಗೆ ಸೇರಿಸಿಕೊಳ್ಳಬೇಕು. ಮಹಿಳಾ ಮಂಡಲ, ಮಹಾಶಕ್ತಿ ಕೇಂದ್ರ ಬೂತ್ ಮಟ್ಟದ ಎಲ್ಲರೊಂದಿಗೆ ಸಂಪರ್ಕ ನಿರಂತರವಾಗಿರಬೇಕು. ೩೩% ಮೀಸಲಾತಿಯನ್ನು ಮೋದಿ ನೀಡಿದ್ದಾರೆ. ಇದರಿಂದಲೇ ತಿಳಿಯುತ್ತದೆ ಬಿಜೆಪಿ ಪಕ್ಷ ಮಹಿಳೆಯರಿಗೆ ಎಷ್ಟು ಗೌರವ ನೀಡುತ್ತಾರೆ. ತಳಮಟ್ಟದಲ್ಲಿ ಮಹಿಳೆಯರ ಕೆಲಸವನ್ನು ಗುರುತಿಸುವ ಕೆಲಸ ಪಕ್ಷ ಮಾಡಲಿದೆ. ಮುಂದೊಂದು ದಿನ ಒಳ್ಳೆಯ ಹುದ್ದೆ ಸಿಗಲಿದೆ. ಎಲ್ಲಾ ಕಾರ್ಯಕರ್ತರ ಮೇಲೆ ಪಕ್ಷದ ಪ್ರಮುಖರ ನಿಗಾ ಜೊತೆಗೆ ಸಮೀಕ್ಷೆ ನಡೆಯಲಿದೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಪಕ್ಷ ಗೆಲ್ಲಲು ಕೆಲಸ ಮಾಡಬೇಕು ಎಂದರು.


ಪ್ರಾಸ್ತಾವಿಕವಾಗಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಮ ಮಾತನಾಡಿ, ನನಗೆ ಈ ಹುದ್ದೆಯನ್ನು ನನ್ನ ಮೇಲೆ ನಂಬಿಕೆಯಿಟ್ಟು ಕೊಟ್ಟಿದ್ದಾರೆ. ಶ್ರದ್ಧೆಯಿಂದ ಪಕ್ಷದ ಕೆಲಸ ಮಾಡಲಿದ್ದೇನೆ. ಶಾಸಕ, ಸಂಸದ ಅಥವಾ ಇನ್ಯಾವುದೇ ಹುದ್ದೆಗೆ ಕೆಲಸ ಮಾಡದೇ ಸಂಘಟನಾತ್ಮಕ ಜವಾಬ್ದಾರಿಯನ್ನು ಅರಿಯಲು ಅವಕಾಶ ಸಿಕ್ಕಿದೆ. ಮಹಿಳೆಯರು ಎನ್ನುವುದು ಒಂದು ಶಕ್ತಿ. ಎಲ್ಲರೂ ಒಗ್ಗಟ್ಟಾಗಿ ದೇಶಕ್ಕೆ ಅವಶ್ಯಕವಾದ ಪಕ್ಷ ಬಿಜೆಪಿಗೆ ಕೆಲಸ ಮಾಡಲೇಬೇಕು. ಮಹಿಳೆಯರ ಪಾತ್ರ ರಾಜಕೀಯದಲ್ಲಿ ಪ್ರಮುಖವಾಗಿದೆ. ಅಪವಾದ ನಿಂದನೆಯನ್ನು ಮೆಟ್ಟಿ ನಿಂತು ಉತ್ತಮ ಸ್ಥಾನವನ್ನು ಅಲಂಕರಿಸಬೇಕು. ಮಹಿಳೆಯರಿಗೆ ಹೆಚ್ಚಿನ ಗೌರವಿಸುವ ಪಕ್ಷ ಬಿಜೆಪಿ ಆಗಿದೆ. ನಾರಿ ಶಕ್ತಿಯ ಅನುಭವ ದೇಶಕ್ಕೆ ತಿಳಿಸಬೇಕು ಎಂದರು.

ವೋಟ್ ಮಾಡಿ : ಉತ್ತರ ಕನ್ನಡ ಕ್ಷೇತ್ರದ ಸಂಸದರು ಯಾರಾಗಬೇಕು?

ವೇದಿಕೆಯಲ್ಲಿ ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ, ಉ.ಕ. ಲೋಕಸಭಾ ಕ್ಷೇತ್ರ ಸಂಚಾಲಕ ಗೋವಿಂದ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಭಟ್ಕಳ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಭಟ್ಕಳ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಜಾತಾ ಬಾಂದೇಕರ, ಭಟ್ಕಳ ಮಂಡಲ ನಿಕಟಪೂರ್ವ ಅಧ್ಯಕ್ಷ ಸುಬ್ರಾಯ ದೇವಾಡಿಗ ಇದ್ದರು.