ಶಿವಮೊಗ್ಗ: ಪುತ್ರ ಕಾಂತೇಶಗೆ ಹಾವೇರಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಲಭಿಸದ ಹಿನ್ನೆಲೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿದ್ದಾರೆ.
ಹಿಂದುತ್ವದ ಪ್ರತಿಪಾದನೆ ಮಾಡುವ ನಿಟ್ಟಿನಲ್ಲಿ, ಕೇಂದ್ರದ ನಾಯಕರ ಗಮನ ಸೆಳೆಯುವ ನಿಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿದ್ದಾರೆ.

ಇದನ್ನೂ ಓದಿ : ಈಶ್ವರಪ್ಪ ಭೇಟಿ ಮಾಡಿದ ಜಾರಕಿಹೊಳಿ
ಶುಕ್ರವಾರ ಸಂಜೆ ನಗರದ ಬಂಜಾರಾ ಕನ್ವೆನ್ಶನ್ ಹಾಲ್‌ನಲ್ಲಿ ನಡೆದ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಅನೇಕರು ಈಶ್ವರಪ್ಪ ಪರ ನಿಲ್ಲುವುದಾಗಿ ಘೋಷಣೆ ಮಾಡಿದರು. ಕೊನೆಯಲ್ಲಿ ಮಾತನಾಡಿದ ಈಶ್ವರಪ್ಪ ಚುನಾವಣೆಯಲ್ಲಿ ಪಕ್ಷೇತರನಾಗಿ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಪ್ರಕಟಿಸಿದರು.

ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂತೇಶ್ ಯಡಿಯೂರಪ್ಪನವರ ಬಳಿ ಹಾವೇರಿಯಿಂದ ಸ್ಪರ್ಧೆ ಮಾಡುತ್ತೇನೆ ಎಂದಿದ್ದ. ಅವಕಾಶ ಮಾಡಿಕೊಟ್ಟರೆ, ನಿಮ್ಮ ಒಪ್ಪಿಗೆ ಇದ್ದರೆ ಹಾವೇರಿಯಿಂದ ನಿಲ್ಲುತ್ತೇನೆ ಎಂದಿದ್ದ. ಈ ವೇಳೆ ಹಾವೇರಿ ಟಿಕೆಟ್ ಕೊಡಿಸುವ ಹಾಗೂ ಅಲ್ಲಿ ಓಡಾಡಿ ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದಿದ್ದರು. ಆ ನಂತರ ಕಾಂತೇಶ್ ಓಡಾಡಲು ಆರಂಭಿಸಿದರು. ಆದರೆ ತದನಂತರ ಟಿವಿಯಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಶೋಭಾ ಕರಂದ್ಲಾಜೆ ಟಿಕೆಟ್‌ಗಾಗಿ ಬಿಎಸ್‌ವೈ ಹಠ ಹಿಡಿಯಲು ಆರಂಭಿಸಿದ್ದಾರೆ ಎಂಬ ಸುದ್ದಿ ಬಂತು. ಆಗ ಕಾರ್ಯಕರ್ತರು ನನ್ನನ್ನು ಕೇಳಿದಾಗ, ಬಿಎಸ್‌ವೈ ಹೇಳಿದ್ದಾರೆ, ಅವರ ಮಾತಿನ ಮೇಲೆ ನಂಬಿಕೆ ಇದೆ ಎಂದು ನಾನು ಕಾರ್ಯಕರ್ತರನ್ನು ಸಮಾಧಾನ ಮಾಡಿದ್ದೆ ಎಂದು ಹೇಳಿದರು.

ಹಿಂದುತ್ವ ಪರವಾಗಿ ನಿಂತವರು ಅನೇಕ ಮಂದಿ ಫೋನ್ ಮಾಡುತ್ತಿದ್ದಾರೆ. ನಿಮಗೆ ಅನ್ಯಾಯವಾಗಿದೆ ಎನ್ನುತ್ತಿದ್ಧಾರೆ ಎಂದ ಈಶ್ವರಪ್ಪ, ನಿಮ್ಮ ಮಗನನ್ನು ಎಂಪಿ ಮಾಡಿದ್ದೀರಿ, ಇನ್ನೊಬ್ಬನನ್ನು ಎಂಎಲ್‌ಎ ಮಾಡಿದ್ದೀರಿ, ಆರು ತಿಂಗಳು ರಾಜ್ಯದ ಅಧ್ಯಕ್ಷ ಸ್ಥಾನವನ್ನು ಆರು ತಿಂಗಳು ಖಾಲಿ ಬಿಟ್ಟಿರಿ ಯಾಕೆ? ಎಂದು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.
ತಮ್ಮ ಮಗನನ್ನು ಅಧ್ಯಕ್ಷ ಮಾಡುವ ಸಲುವಾಗಿ ಹಠ ಮಾಡಿ ಅಧ್ಯಕ್ಷಗಿರಿ ಕೊಡಿಸಿದರು. ಈ ವೇಳೆ ಹಿರಿಯರ ಮಾತನ್ನು ಯಾಕೆ ಕೇಳಲಿಲ್ಲ ಎಂದು ಅವರು ಪ್ರಶ್ನಿಸಿದರು.

ನನ್ನ ಪ್ರಾಣ ಹೋದರೂ ನರೇಂದ್ರ ಮೋದಿ ವಿರುದ್ಧ ಹೋಗಿಲ್ಲ. ನನ್ನ ಎದೆಯಲ್ಲಿ ಒಂದು ಕಡೆ ಶ್ರೀರಾಮನಿದ್ದಾನೆ. ಇನ್ನೊಂದು ಕಡೆ ನರೇಂದ್ರ ಮೋದಿ ಇದ್ದಾರೆ. ಆದರೆ ಯಡಿಯೂರಪ್ಪನವರ ಹೃದಯದಲ್ಲಿ ಎರಡು ಮಕ್ಕಳು ಇದ್ದಾರೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಇದ್ಯಾವ ನ್ಯಾಯಾರಿ? ನೋಡುತ್ತಾ ಸುಮ್ಮನೇ ಕೂರಬೇಕೆ? ನನ್ನ ರಕ್ತ ಈ ಸಂಘಟನೆ ಉಳಿಬೇಕು. ಒಂದು ವಂಶದ ಕೈಯಲ್ಲಿ ಅಧಿಕಾರ ಇರಬಾರದು ಎಂದು ಮೋದಿಯವರು ಹೇಳಿದ್ದಾರೆ. ಆ ರೀತಿಯಲ್ಲಿ ನನ್ನ ಕಣ್ಮುಂದಿನ ಒಂದು ವಂಶದ ಕೈಯಲಿ ಪಕ್ಷ ಇದ್ದಾಗ ಸುಮ್ಮನಿರಬೇಕಾ ಎಂದು ಪ್ರಶ್ನಿಸಿದರು.
ಪಕ್ಷವನ್ನ ತಾಯಿ ಎಂದುಕೊಂಡಿದ್ದೇನೆ. ನನ್ನ ತಾಯಿಯ ಕತ್ತು ಹಿಸುಕುವಾಗ ಸುಮ್ಮನೇ ಕೂರಬೇಕಾ? ಇದನ್ನು ಕೇಂದ್ರದ ನಾಯಕರು ನೋಡಲಿ, ಎಲ್ಲಾ ಟಿವಿಯಲ್ಲಿ ದೇಶದ ಜನರು ನೋಡಲಿ. ರಾಜ್ಯದಲ್ಲಿ ನಿಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿದ್ದೀರಿ. ಇಲ್ಲಿ ಯಾರು ಗೆಲ್ಲುತ್ತಾರೋ ಸೋಲುತ್ತಾರೋ. ಆದರೆ ಸೋತರೆ ಆ ಸೋಲಿಗೆ ಕಾರಣ ಯಡಿಯೂಪ್ಪನವರೇ ಎಂದರು.