ಭಟ್ಕಳ : ಜೂನ್ ೧೧ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದ ಬಿಜೆಪಿ ಕಾರ್ಯಕರ್ತ ಆಸರಕೇರಿಯ ಸಚಿನ್ ಮಹಾಲೆ(೪೪) ಅವರ ಶ್ರದ್ಧಾಂಜಲಿ ಸಭೆ ಜೂನ್ ೧೬ರಂದು ಇಟ್ಟುಕೊಳ್ಳಲಾಗಿದೆ.

ಭಟ್ಕಳ ಬಿಜೆಪಿ ಮಂಡಲ ವತಿಯಿಂದ ಈ ಕಾರ್ಯಕ್ರಮ ನಡೆಯಲಿದೆ. ನಗರದ ಮಣ್ಕುಳಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ರವಿವಾರ ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಪಕ್ಷದ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು, ಸಚಿನ್ ಮಹಾಲೆಯವರ ಸ್ನೇಹಿತರು, ಹಿತೈಷಿಗಳು ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಕೋರಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಶಿವಮೊಗ್ಗದಲ್ಲಿ ನಿಧನ :
ಮುದ್ರಣ ಉದ್ಯಮ ನಡೆಸುತ್ತಿದ್ದ ಸಚಿನ್ ಮಹಾಲೆಯವರು ಶಿವಮೊಗ್ಗಕ್ಕೆ ತೆರಳಿದಾಗ ಅನಾರೋಗ್ಯಕ್ಕೀಡಾದರು. ತಂದೆ-ತಾಯಿಯವರ ಶ್ರಾದ್ಧಕ್ಕಾಗಿ ಕುಟುಂಬ ಸಹಿತ ಹೋಗಿದ್ದರು. ಶಿವಮೊಗ್ಗದಲ್ಲಿ ಸಹೋದರ, ಹಿರಿಯ ಪತ್ರಕರ್ತ ವಿವೇಕ ಮಹಾಲೆಯವರ ಮನೆಯಲ್ಲಿದ್ದರು. ಅನಾರೋಗ್ಯ ಕಾಣಿಸಿಕೊಂಡಾಗ  ಶಿವಮೊಗ್ಗದ ಖಾಸಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ೧೫ ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣದ ಹೋರಾಟ ನಡೆಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಜೂನ್ ೧೧ರಂದು ಕೊನೆಯುಸಿರೆಳೆದರು.

ಭಟ್ಕಳದಲ್ಲಿ ಅಂತ್ಯಕ್ರಿಯೆ :
ಶಿವಮೊಗ್ಗದಲ್ಲಿ ನಿಧನರಾದ ಸಚಿನ್ ಮಹಾಲೆಯವರ ಪಾರ್ಥೀವ ಶರೀರವನ್ನು ರಾತ್ರಿ ೯.೩೦ಕ್ಕೆ ಭಟ್ಕಳಕ್ಕೆ ತರಲಾಯಿತು. ಆಸರಕೇರಿಯಲ್ಲಿರುವ ಸ್ವಗೃಹದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ನಂತರ ಬಂದರ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಶವಸಂಸ್ಕಾರ ನೆರವೇರಿಸಲಾಯಿತು. ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನೂರಾರು ಜನರು ಕಂಬನಿ ಮಿಡಿದರು. ಸುರಿಯುವ ಮಳೆಯ ನಡುವೆಯೂ ನೂರಾರು ಜನರು ತಡರಾತ್ರಿಯವರೆಗೆ ಪಾಲ್ಗೊಂಡಿದ್ದು, ಅವರು ಗಳಿಸಿದ ಜನರ ಪ್ರೀತಿಗೆ ಸಾಕ್ಷಿಯಾಗಿತ್ತು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್ ಎಸ್ ಹೆಗಡೆ, ಜಿಲ್ಲಾ ಬಿಜೆಪಿ ಮುಖಂಡ ಗೋವಿಂದ ನಾಯ್ಕ ,ಭಟ್ಕಳ ತಾಲೂಕು ಬಿಜೆಪಿ ಅಧ್ಯಕ್ಷ ಲಕ್ಷ್ನೀನಾರಾಯಣ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಮುಖಂಡರಾದ ಸುಬ್ರಾಯ ದೇವಾಡಿಗ, ರಾಜೇಶ ನಾಯ್ಕ, ಭಾಸ್ಕರ ದೈಮನೆ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ರವಿ ಜಾಲಿ, ಕಾನೂನು ಪ್ರಕೋಷ್ಠದ ಸಂಚಾಲಕ ಸುರೇಶ ಕೋಣೆಮನೆ, ಮಂಜು ಅಳಿಕುಸ, ದಾಸಾ ತಲಗೋಡ, ಯಶೋಧರ ನಾಯ್ಕ, ಅರುಣ ಚೌಥನಿ, ಚಂದ್ರು ಗೊಂಡ, ವಿಜೇತ್ ಶೆಟ್ಟಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ, ಸುನಿತಾ ನಾಯ್ಕ, ನಾಮಧಾರಿ ಗುರುಮಠದ ಗೌರವಾಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ದಿನೇಶ್ ನಾಯ್ಕ ಮುಂಡಳ್ಳಿ, ಭಟ್ಕಳ   ಆರ್ ಎಸ್ ಎಸ್ ಸಂಘಚಾಲಕ ಹನುಮಂತ ಜೀ, ಪ್ರಮುಖರಾದ ಸುರೇಂದ್ರ ಜೀ, ಕ್ರಷ್ಣ ಮೂಡಭಟ್ಕಳ, ಹನುಮಂತ ಮೂಡಭಟ್ಕಳ, ಅರುಣಕುಮಾರ ಭಟ್ರಮನೆ, ವಿಶ್ವ ಹಿಂದು ಪರಿಷತ್ ಪ್ರಮುಖ ರಾಮಣ್ಣ ಬಳೆಗಾರ, ಮಾರಿಕಾಂಬ ದೇವಸ್ಥಾನದ ಆಡಳಿತ ಕಮಿಟಿಯ ಅಧ್ಯಕ್ಷ ಪರಮೇಶ್ವರ ನಾಯ್ಕ, ಶ್ರೀಧರ ನಾಯ್ಕ , ಹಿರಿಯ ಪತ್ರಕರ್ತ ರಾಧಾಕ್ರಷ್ಣ ಭಟ್, ವಿವಿಧ ಸಮಾಜದ ಮುಖಂಡರು, ಕಾರ್ಯಕರ್ತರು, ಅಂತಿಮದರ್ಶನ ಪಡೆದರು.

ಭಟ್ಕಳ ನಗರದ ಎಲ್ಲರಿಗೂ ಚಿರಪರಿಚಿತರಾಗಿದ್ದ ಸಚಿನ್ ಮಹಾಲೆ, ಸಹೋದರ ವಿವೇಕ ಮಹಾಲೆ ೧೯೯೬ರಲ್ಲಿ ಸ್ಥಾಪಿಸಿದ್ದ  ಚಂಪಕ್ ಸ್ಕ್ರೀನ್ಸ್ ಮತ್ತು ಪ್ರಿಂಟರ್ಸ್ ಉದ್ಯಮಕ್ಕೆ ಸಾಥ್ ಕೊಟ್ಟಿದ್ದರು. ೨೦೦೬ರಲ್ಲಿ ಅದರ ಮಾಲೀಕರಾಗಿ ಕಳೆದ ೧೮ ವರ್ಷಗಳಿಂದ ಮುನ್ನಡೆಸಿಕೊಂಡು ಬಂದಿದ್ದರು. ಇವರಿಗೆ ಪತ್ನಿ ಶ್ರೇಯಾ, ಪುತ್ರ ತುಷಾರ, ಸಹೋದರ ವಿವೇಕ, ಸಹೋದರಿ ಶಿಲ್ಪಾ ಮತ್ತು ಅಪಾರ ಬಂಧು ಬಳಗವಿದೆ.

ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ :
ಸಚಿನ್ ಮಹಾಲೆಯವರು ಭಟ್ಕಳ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಹಿರಿಯ ಕಾರ್ಯಕರ್ತರಾಗಿದ್ದರು.  ಬಿಜೆಪಿಯಲ್ಲಿ ಸದಾ ಕಾರ್ಯಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದರು.  ಬಿಜೆಪಿ ಭಟ್ಕಳ ಮಂಡಲದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು. ಭಟ್ಕಳ ಮಂಡಲದಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಶಕ್ತಿಕೇಂದ್ರದ ಪ್ರಮುಖ, ನಗರ ಕಾರ್ಯದರ್ಶಿ, ಮಂಡಲ ಖಜಾಂಚಿ ಸಹಿತ  ಬಿಜೆಪಿಯ ಹಲವಾರು ಜವಾಬ್ದಾರಿ ನಿರ್ವಹಿಸಿದ್ದರು. ನಗರ ವ್ಯಾಪ್ತಿಯಲ್ಲಿ ಪಕ್ಷದ ಸಂಘಟನೆಗೆ ತಮ್ಮನ್ನು ತೊಡಗಿಸಿಕೊಂಡಿದ್ದರು.

ಯಾವುದೇ ಚುನಾವಣೆ ಸಂದರ್ಭದಲ್ಲಿ ಕಾರ್ಯಾಲಯಕ್ಕೆ ಒಬ್ಬ ಚುನಾವಣೆ ಪ್ರಮುಖರ  ವಿಷಯ ಜಿಲ್ಲೆ ಅಥವಾ ಮಂಡಲದಲ್ಲಿ ಚರ್ಚೆಗೆ ಬಂದಾಗ ಮೊದಲು ಬರುವ ಹೆಸರೇ ಸಚಿನ್ ಮಹಾಲೆಯದ್ದು. ಕಳೆದ ೩೦ ವರ್ಷಗಳಿಂದ ಚುನಾವಣೆ ಸಂದರ್ಭದಲ್ಲಿ  ಕಾರ್ಯಾಲಯದಲ್ಲಿ ಶಿಸ್ತು, ವ್ಯವಸ್ಥೆ, ಬಂದಂಥವರಿಗೆ  ಮಾಹಿತಿ ನೀಡುವುದು, ಕಾರ್ಯಕ್ರಮ ಜೋಡಣೆ, ಸಭೆ ಮಾಹಿತಿಯನ್ನ ಪ್ರತಿ ಶಕ್ತಿಕೇಂದ್ರದಿಂದ ಬೂತ್ ಮಟ್ಟದವರೆಗೆ ತಲುಪಿಸುವುದು… ಹೀಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾರ್ಯಾಲಯಕ್ಕೆ ಒಂದು ಕಳೆ ತಂದು ಯಶಸ್ವಿ ಚುನಾವಣೆಗೆ ಕಾರಣೀಕರ್ತರಾಗುತಿದ್ದರು. ಪಕ್ಷದ ಯಾವುದೇ ಕಾರ್ಯಕ್ರಮದಲ್ಲೂ ಮುಂಚಿತವಾಗಿ ಮೊದಲು ಬಂದು ತಯಾರಿ ಮಾಡುತ್ತಿದ್ದರು. ಅದೆಷ್ಟೋ ಸಣ್ಣ ಸಭೆಗಳು ಅವರ ಅಂಗಡಿಯಲ್ಲೇ ನಡೆಯುತ್ತಿದ್ದವು.

ಸಾಮಾಜಿಕ ಕಾರ್ಯಗಳಲ್ಲೂ ಸದಾ ಮುಂಚೂಣಿಯಲ್ಲಿ ಇರುತ್ತಿದ್ದ ಇವರು ಎಲ್ಲರ ಆತ್ಮೀಯ ಒಡನಾಡಿಯಾಗಿದ್ದರು. ರಾಜಾಂಗಣ ನಾಗಬನ ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು.