ಕುಮಟಾ: ಆರ್ದ್ರಾ ನಕ್ಷತ್ರದ ಮಳೆ ತಾಲೂಕಿನಾದ್ಯಂತ ಎರಡು ದಿನಗಳಿಂದ ಬಿರುಸಿನಿಂದ ಸುರಿಯುತ್ತಿದೆ.
ಮಳೆಯ ಜೊತೆಗೆ ಆಗಾಗ ಜೋರಾದ ಗಾಳಿಯು ಬೀಸುತ್ತಿದೆ. ಇದರಿಂದಾಗಿ ಕೆಲವೆಡೆ ಮರಗಳು ಮನೆ ಹಾಗೂ ವಿದ್ಯುತ್ ತಂತಿಗಳ ಮೇಲೆ ಬಿದ್ದಿದೆ. ಆದರೆ ಯಾರಿಗೂ ಯಾವ ಅಪಾಯವೂ ಆಗಿಲ್ಲ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಮಳೆಯ ನೀರು ಸರಾಗವಾಗಿ ಹರಿದುಹೋಗುವ ಮಾರ್ಗವನ್ನು ಅನೇಕ ಕಡೆ ಜನರು ಪಾಗಾರ ಕಟ್ಟಿ ಇಲ್ಲವೇ ಸ್ಥಳವನ್ನು ಎತ್ತರಿಸಲು ತಾರಿಗಟ್ಟಲೆ ಮಣ್ಣನ್ನು ಹಾಕಿ ಬಂದ್ ಮಾಡಿದ್ದಾರೆ. ಈ ಅಪರಾಧದಿಂದ ತಗ್ಗಿನ ಪ್ರದೇಶದಲ್ಲಿರುವ ಮನೆಗಳ ಸುತ್ತ ಈಗ ಮಳೆ ನೀರು ನಿಂತುಕೊಂಡಿದೆ.

ಇದನ್ನೂ ಓದಿ :  ಗಾಳಿಮಳೆಗೆ ವಿವಿಧೆಡೆ ಆಸ್ತಿಪಾಸ್ತಿಗಳಿಗೆ ಹಾನಿ

ಕೂಜಳ್ಳಿ ಹಾಗೂ ವಾಲ್ಗಳ್ಳಿ ಮಧ್ಯದ ಹಾರೋಡಿ ಬಳಿ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಜಾಗದಲ್ಲಿ ಮಳೆಯ ನೀರು ಹೋಗುವ ಸ್ಥಳದಲ್ಲಿ ಮಣ್ಣು ಬರಾವ್ ಮಾಡಿದ್ದರಿಂದ ನೀರು ರಸ್ತೆಯ ಮೇಲೆ ಹರಿಯುವಂತಾಗಿದೆ. ಇದರಿಂದ ಬೈಕ್ ಸೇರಿದಂತೆ ಸಣ್ಣ ವಾಹನಗಳ ಸರಾಗ ಒಡಾಟಕ್ಕೆ ವ್ಯತ್ಯಯವಾಗಿದೆ. ಈ ಸಮಸ್ಯೆ ೩ ವರ್ಷದಿಂದ ಇದ್ದು, ಇದನ್ನು ಈವರೆಗೂ ಯಾವ ಇಲಾಖೆಯು ಸರಿಪಡಿಸಿಲ್ಲದಿರುವುದು ವಿಷಾದದ ಸಂಗತಿ.

ಇದನ್ನೂ ಓದಿ : ಜೂನ್‌ ೨೬ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ

ಬುಧವಾರ ಮಳೆಯೊಂದಿಗೆ ಬೀಸಿದ ಗಾಳಿಗೆ ಹೊಲನಗ್ಗೆ ಗ್ರಾಮ ಪಂಚಾಯತ ವ್ಯಾಪ್ತಿಯ ಹಣ್ಣೆಮಠ ಎಂಬಲ್ಲಿ ನಾರಾಯಣ ತಿಮ್ಮಪ್ಪ ಮುಕ್ರಿ ಅವರ ಮನೆಯ ಸ್ನಾನದ ಕೋಣೆಯ ಮೇಲೆ ತೆಂಗಿನಮರ ಮುರಿದು ಬಿದ್ದು ೧೦ ಸಾವಿರ ರೂ. ಹಾನಿ ಅಂದಾಜಿಸಲಾಗಿದೆ. ಬಿರುಸಿನಿಂದ ಸುರಿಯುತ್ತಿರುವ ಮಳೆಯಿಂದ ದೇವಗಿರಿ ಗ್ರಾಮ ಪಂಚಾಯತ ವ್ಯಾಪ್ತಿಯ ನಿವಾಸಿ ಮಾದೇವಿ ವೆಂಕಟೇಶ ವೈದ್ಯ ಅವರ ಮನೆಯ ಮೇಲೆ ಹಲಸಿನಮರ ಮುರಿದು ಬಿದ್ದು ಸುಮಾರು ೭೦ ಸಾವಿರ ಹಾನಿಯಾಗಿದೆ ಎಂದು ಸ್ಥಳೀಯ ಕಂದಾಯ ಅಧಿಕಾರಿಗಳು ಪಂಚನಾಮೆ ನಡೆಸಿ ಅಂದಾಜಿಸಿದ್ದಾರೆ.