ಕಾರವಾರ : ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಚುನಾವಣಾ ಆಯೋಗವು ೮೫ ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರಿಗೆ ಮನೆಯಿಂದ ಮತದಾನ ಮಾಡಲು ನೀಡಿರುವ ವಿಶೇಷ ಸೌಲಭ್ಯ ಬಳಸಿಕೊಂಡು ಜಿಲ್ಲೆಯ ಹಿರಿಯ ನಾಗರಿಕರು ತಮ್ಮ ಹಕ್ಕು ಚಲಾಯಿಸಿ ಹೆಮ್ಮೆಯಿಂದ ಬೀಗಿದರು.

ಇದನ್ನೂ ಓದಿ : ವಿಶ್ವ ಭೂಮಿ ದಿನಾಚರಣೆ ಉದ್ಘಾಟನೆ

ಜಿಲ್ಲೆಯ ಲೋಕಸಭಾ ವ್ಯಾಪ್ತಿಯಲ್ಲಿ ಮನೆಯಿಂದ ಮತದಾನ ಮಾಡಲು ಒಪ್ಪಿಗೆ ಪತ್ರ ನೀಡಿರುವ ೮೫ ವರ್ಷ ಮೇಲ್ಪಟ್ಟ ೩೦೪೬ ಹಾಗೂ ೧೯೭೭ ವಿಕಲಚೇತನ ಮತದಾರರ ಮನೆಗಳಿಗೆ ವೇಳಾಪಟ್ಟಿ ಮತ್ತು ರೂಟ್ ಮ್ಯಾಪ್ ಸಿದ್ಧಪಡಿಸಿಕೊಂಡಿರುವ ಮತಗಟ್ಟೆ ಸಿಬ್ಬಂದಿ ತೆರಳಿ ಮತದಾನ ಪ್ರಕ್ರಿಯೆಗಳನ್ನು ನಡೆಸಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಕಾರವಾರ ವಿಧಾನಸಭಾ ವ್ಯಾಪ್ತಿಯ ಸೆಕ್ಟರ್ ೧೧ ರ ವ್ಯಾಪ್ತಿಯಲ್ಲಿ, ಕಾರವಾರ ನಗರದ ಆಯುಷ್ ಆಸ್ಪತ್ರೆ ಬಳಿಯ ನಾಗಿ ಸುಕ್ರಿ ಶಿರಾಲಿಕರ್ ಎಂಬ ೮೭ ವರ್ಷದ ವೃದ್ದೆ ಯಾರ ನೆರವು ಪಡೆಯದೇ, ಅಧಿಕಾರಿಗಳು ತಿಳಿಸಿದ ಮಾದರಿಯಲ್ಲಿಯೇ ಮತಪತ್ರ ಬಿಡಿಸಿ, ಮತ ಹಾಕಿದರು. ಸಂಬಂಧಪಟ್ಟ ಲಕೋಟೆಯಲ್ಲಿ ಮತಪತ್ರವನ್ನು ಹಾಕಿ, ಮತಪೆಟ್ಟಿಗೆಗೆ ಕವರನ್ನು ಹಾಕಿದರು. ನಂತರ ಮಾತನಾಡಿದ ಅವರು ಅನಾರೋಗ್ಯದ ಕಾರಣ ನಡೆಯಲು ಸಾಧ್ಯವಿಲ್ಲ. ಮನೆ ಬಳಿಗೆ ಬಂದು ನನ್ನ ಮತ ಪಡೆದದ್ದು ‘ಬಾಳಾ ಛಲೋ ಆತ್ರಿ’ ಎಂದರು. ಹೆಮ್ಮೆಯಿಂದ ಮತದಾನ ಮಾಡಿದ ತಮ್ಮ ಬೆರಳ ಗುರುತನ್ನು ತೋರಿಸಿ ಸಂಭ್ರಮಿಸಿದರು.

ಇದೇ ಪ್ರದೇಶದ ವ್ಯಾಪ್ತಿಯ ೯೨ ವರ್ಷದ ವಯೋವೃದ್ದೆ ಸೋಮಾಯಿ ಲೋಕಪ್ಪ ಚಂಡೆಕರ್ ಕೂಡ ಯಾರ ಸಹಾಯವೂ ಪಡೆಯದೆ ಮತದಾನ ಮಾಡಿದರು. ತಮಗೆ ಮತದಾನ ಮಾಡಿಸಲು ಬಂದ ಸಿಬ್ಬಂದಿಗೆ ಪ್ರೀತಿಯಿಂದ ಕೈಮುಗಿದರು. ಇದಕ್ಕೆ ಗೌರವ ಪ್ರತಿಕ್ರಿಯೆಯಾಗಿ ಸಿಬ್ಬಂದಿಯೊಬ್ಬರು ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಮನೆಯಿಂದ ಮತದಾನ ಮಾಡಿದ್ದು ಛಲೋ ಆತ್ರಿ ಎಂದ ಸೋಮಾಯಿ ಲೋಕಪ್ಪ ಚಂಡೆಕರ್, ತಮ್ಮ ಬೆರಳಿನ ಶಾಹಿಯನ್ನು ತೋರಿಸಿ ನಕ್ಕರು.

ಸಾಯಿ ಮಂದಿರದ ಬಳಿಯ 30 ವರ್ಷದ ಸಂತೋಷ್ ಎಂಬ ವಿಕಲಚೇತನ ಯುವಕ ಹಾಸಿಗೆ ಮೇಲೆ ಮಲಗಿಯೇ ತನ್ನ ತಾಯಿಯಿ ನೆರವಿನಿಂದ ಮತ ಚಲಾಯಿಸಿ ಸಂತಸ ವ್ಯಕ್ತಪಡಿಸಿದರು.

ಮನೆಯಿಂದ ಮತದಾನ ಮಾಡುವ ಮತಗಟ್ಟೆ ಸಿಬ್ಬಂದಿ ತಂಡದಲ್ಲಿ ಸೆಕ್ಟರ್ ಅಧಿಕಾರಿ, ಪೋಲಿಂಗ್ ಅಧಿಕಾರಿಗಳು, ಮೈಕ್ರೋ ಆಬ್ಸರ್ವರ್, ಬಿ.ಎಲ್.ಒ, ಪೊಲೀಸ್ ಸಿಬ್ಬಂದಿ, ವಿಡಿಯೋಗ್ರಾಫರಗಳಿದ್ದರು. ತಮಗೆ ನಿಯೋಜಿಸಿದ್ದ ಪ್ರತ್ಯೇಕ ವಾಹನದಲ್ಲಿ ಮತದಾನ ಪ್ರಕ್ರಿಯೆಗೆ ಅಗತ್ಯವಿದ್ದ ಎಲ್ಲಾ ಪರಿಕರಗಳೊಂದಿಗೆ ನಿಯೋಜಿತ ಮನೆಗಳಿಗೆ ಭೇಟಿ ನೀಡಿದರು. ಮನೆಯಿಂದ ಮತದಾನ ಮಾಡುವ ಕಾರ್ಯವಿಧಾನದ ಬಗ್ಗೆ ಮತದಾರ ಕುಟುಂಬದವರಿಗೆ ವಿವರಿಸಲಾಯಿತು. ಮತದಾರನ ಮೇಲೆ ಯಾರೊಬ್ಬರೂ ಪ್ರಭಾವ ಬೀರದಂತೆ, ಮತದಾನ ಮಾಡುವ ಸಂದರ್ಭದಲ್ಲಿ ಕುಟುಂಬ ಸದಸ್ಯರನ್ನು ಮತದಾನ ಮಾಡುವ ಕೊಠಡಿಯಿಂದ ಹೊರೆಗೆ ನಿಲ್ಲಿಸಲಾಯಿತು. ಗೋಪ್ಯತೆ ಕಾಪಾಡುವ ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಯಿತು.

ಕಾರವಾರ ವಿಧಾನಸಭಾ ವ್ಯಾಪ್ತಿಯ ಸೆಕ್ಟರ್ ೧೧ರ ವ್ಯಾಪ್ತಿಯಲ್ಲಿ ನಡೆದ ಮತದಾನ ಸಂದರ್ಭದಲ್ಲಿ, ಸೆಕ್ಟರ್ ಅಧಿಕಾರಿ ಸುನೀಲ್ ಅಂಕೋಲೆಕರ್, ಮತಗಟ್ಟೆ ಅಧಿಕಾರಿಗಳಾದ ಸಂತೋಷ್ ಗಾಂವಕರ್, ಸುದೀಪ್ ನಾಯಕ್, ಮೈಕ್ರೋ ಅಬ್ಸರ್ವರ್ ಕೆ.ದಿನಕರ್, ಮಹಿಳಾ ಪೊಲೀಸ್ ರೂಪಾ ಸಲಗೊಂಡ, ಸಹಾಯಕ ಸಿಬ್ಬಂದಿ ಮಹಾದೇವ ನಾಯಕ್ ಭಾಗವಹಿಸಿದ್ದರು.