“ಸರ್ಕಾರಿ ಶಾಲೆ ಅಭಿಮಾನ – ಸುಣ್ಣಬಣ್ಣ ಅಭಿಯಾನ”

ಶಿವಮೊಗ್ಗ : ಸಮಾಜ ಸೇವೆಯಲ್ಲಿ ಮಾನವೀಯತೆಯು ಪ್ರಮುಖ ಪಾತ್ರ ವಹಿಸುತ್ತದೆ. ಸಮಾಜ ಸೇವೆಯಲ್ಲಿ ತೊಡಗಿಕೊಂಡವರಿಗೆ ಮಾನವೀಯ ಪ್ರೇರಣೆ ಯಾಗಿರುತ್ತದೆ ಎಂದು ಡಿ ವೈ ಎಸ್ ಪಿ ಗಜಾನನ ವಾಮನ ಸುತಾರ ಹೇಳಿದರು.

ಹೊಸನಗರ ತಾಲೂಕಿನ ರಿಪ್ಪನಪೇಟೆ ಪಟ್ಟಣದ ಸಮೀಪದ ಚಂದವಳ್ಳಿ ಸರ್ಕಾರಿ ಶಾಲೆಯಲ್ಲಿ ಪೋಸ್ಟ್ ಮ್ಯಾನ್ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಸರ್ಕಾರಿ ಕನ್ನಡ ಶಾಲೆಯ ಅಭಿಮಾನ-ಸುಣ್ಣ ಬಣ್ಣದ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾನವನ ಜೀವಿತದಲ್ಲಿ ಅತ್ಯಂತ ಪವಿತ್ರವಾದ ಸ್ಥಳ ಶಾಲೆಯಾಗಿದ್ದು, ಶಾಲೆಯಲ್ಲಿ ಕಲಿತ ಪಾಠ- ಪ್ರವಚನಗಳು, ಬದುಕಿನ ದಿಕ್ಕನ್ನೇ ಬದಲಾಯಿಸುವಂತಹ ಅದ್ಭುತ ಶಕ್ತಿ ಹೊಂದಿರುತ್ತದೆ. ಕನ್ನಡ ಶಾಲೆಯ ಬಗ್ಗೆ ಅಭಿಮಾನ ಹೊಂದಿ ಅದರಲ್ಲೂ ಸರ್ಕಾರಿ ಶಾಲೆಗಳ ಬಗ್ಗೆ ಗಮನಹರಿಸಿ ಸುಣ್ಣಬಣ್ಣದ ಜೊತೆಗೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ಪೋಸ್ಟ್ ಮ್ಯಾನ್ ಗಳೆಯರ ಬಳಗದ ಕನ್ನಡ ಶಾಲೆಯ ಅಭಿಮಾನ – ಸುಣ್ಣ ಬಣ್ಣದ ಅಭಿಯಾನ ಕಾರ್ಯಕ್ರಮ ನಿರಂತರವಾಗಿರಲಿ. ಹಾಗೆಯೇ ಅವರುಗಳು ಶೈಕ್ಷಣಿಕ ಅಭಿವೃದ್ಧಿಗೆ ಸಮಾಜಕ್ಕೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

“ಸರ್ಕಾರಿ ಶಾಲೆ ಅಭಿಮಾನ ಸುಣ್ಣಬಣ್ಣ ಅಭಿಯಾನ”ಕ್ಕೆ ಅನುಕರಣೆ ಪ್ರತಿಷ್ಠಾನದ” ಮೂಲಕ ರಾಜ್ಯದ ನೂರಾರು ಶಾಲೆಯನ್ನು ಅಂದಗಾಣಿಸಿ ಯುವ ಪೀಳಿಗೆಗೆ ಆದರ್ಶವಾಗಿರುವ ಅಕ್ಕ ಅನು ಚಾಲನೆ ನೀಡಿದರು.

ನಂತರ ಮಾತನಾಡಿದ ಅಕ್ಕ ಅನು, ಈ ಅಭಿಯಾನ ಯುವ ಪೀಳಿಗೆಗೆ ಮಾದರಿಯಾಬೇಕು. ಸರ್ಕಾರಿ ಕನ್ನಡ ಶಾಲೆಗಳು ಪ್ರಸ್ತುತ ದಿನಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಜನರಲ್ಲಿ ಅರಿವು ಮೂಡಿಸಬೇಕು. ಈ ಶಾಲೆಗಳಿಗೆ ದಾಖಲಾಗುವವರಲ್ಲಿ ಅತಿ ಹೆಚ್ಚಿನವರು ಬಡ ವಿದ್ಯಾರ್ಥಿಗಳಾಗಿರುವುದರಿಂದ ಅವರಿಗೆ ಶಿಕ್ಷಣದ ಹಕ್ಕು ಕೊಡಿಸುವುದರ ಜತೆಗೆ ಸರ್ಕಾರಿ ಶಾಲೆ ಉಳಿಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಹೊಸನಗರ ತಾಪಂ ಕಾರ್ಯ ನಿರ್ವಾಹಣಾಧಿಕಾರಿ ವೈ ನರೇಂದ್ರ ಕುಮಾರ್ , ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಆರ್ ಕೃಷ್ಣಮೂರ್ತಿ, ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್, ಗ್ರಾಪಂ ಸದಸ್ಯ ಕೃಷ್ಣೋಜಿರಾವ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೋಸ್ಟ್ ಮ್ಯಾನ್ ಬಳಗದ ರಫ಼ಿ ರಿಪ್ಪನ್‌ಪೇಟೆ ವಹಿಸಿದ್ದರು. ಬಳಗದ ಸಬಾಸ್ಟಿನ್ ಮ್ಯಾಥ್ಯೂಸ್, ಉಮೇಶ್ ಜಾಗದ್ದೆ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಕೆಂಚನಾಲ ಗ್ರಾಪಂ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯ ಜಗದೀಶ್, ಚಂದಳ್ಳಿ ಗ್ರಾಮದ ಹಿರಿಯ ಮುಖಂಡರು ಇದ್ದರು. ಶಿಕ್ಷಕಿ ತಾಜುನ್ ಬಿ. ನಿರೂಪಿಸಿದರು.