ಭಟ್ಕಳ: ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತರೊ ಅಲ್ಲಿಯವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ದಿನಕಳೆದಂತೆ ವಿಧಾನಗಳು ಬದಲಾಗುತ್ತವೆ ಅಷ್ಟೇ. ಸ್ವಲ್ಪ ಯಾಮಾರಿದರೂ ಲಕ್ಷಾಂತರ ರೂ. ಹಣ ಕಳೆದುಕೊಳ್ಳಬೇಕಾಗುತ್ತದೆ. ಇಂತಹುದೇ ಮೋಸ ಹೋಗುವುದರಿಂದ ಭಟ್ಕಳದ ಉದ್ಯಮಿಯೋರ್ವರು ಪಾರಾಗಿದ್ದ ಘಟನೆ ಸೋಮವಾರ ನಡೆದಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಪಟ್ಟಣದ ಓರ್ವ ಉದ್ಯಮಿಗೆ ಕಳೆದ ಎರಡು ದಿನಗಳಿಂದ ಕರೆಯೊಂದು ಬರುತಿತ್ತು. ಅದನ್ನು ನಿರ್ಲಕ್ಷಿಸುತ್ತಾ ಬಂದಿದ್ದರು. ಆದರೆ ಸೋಮವಾರ ಕೊಂಚ ಬಿಡುವು ಇದ್ದ ಕಾರಣ ಕರೆ ಸ್ವೀಕರಿಸಿದ್ದಾರೆ. ಆತ್ತ ಕಡೆಯಿಂದ ಮಾತನಾಡಿದ ಯುವತಿ ನೀವು ಕಳುಹಿಸಿದ ಪಾರ್ಸೆಲ್ ವಿಳಾಸದ ಸ್ಥಳಕ್ಕೆ ತಲುಪಲು ನಿರಾಕರಣೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಸ್ಟಮರ್ ಕೇರ್ ಸಂಪರ್ಕಿಸಿ ಅಥವಾ ನಮ್ಮ ವೆಬ್‌ಸೈಟ್ ಲಾಗಿನ್ ಮಾಡಿ ಎಂದಿತ್ತು. ಕುತೂಹಲಗೊಂಡ ಉದ್ಯಮಿ ಏನಿರಬಹುದು ಎಂದು ಕಸ್ಟಮರ್ ಕೇರ್‌ಗೆ ಕರೆ ಮಾಡಿದ್ದಾರೆ. ಅಲ್ಲಿ ಅವರು ನಿಮ್ಮ ಮೊಬೈಲ್ ಸಂಖ್ಯೆ ತಿಳಿಸುವಂತೆ ಹೇಳಿದ್ದಾರೆ. ಆಶ್ಚರ್ಯ ಎಂಬಂತೆ ಕೂಡಲೇ ಕರೆ ಮಾಡಿದ ವ್ಯಕ್ತಿ ಪಾನ್ ನಂ., ಆಧಾರ ಕಾರ್ಡ್ ನಂ, ವಿಳಾಸ ಎಲ್ಲವನ್ನೂ ಸರಿಯಾಗಿ ಹೇಳಿದ್ದಾರೆ. ನೀವು ಮೇ ೩ರಂದು ನಮ್ಮ ಸಂಸ್ಥೆಯ ಮೂಲಕ ಮುಂಬೈನಿಂದ ಥೈವಾನ್‌ಗೆ ಪಾರ್ಸೆಲ್ ಕಳುಹಿಸಿದ್ದೀರಿ. ಅದನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ತಡೆಹಿಡಿದಿದ್ದಾರೆ. ಅದನ್ನು ನಿಗದಿತ ಸ್ಥಳಕ್ಕೆ ಕೊಂಡೊಯ್ಯದಂತೆ ಸೂಚಿಸಿದ್ದಾರೆ ಎಂದಿದ್ದಾರೆ.
ಇದನ್ನು ಕೇಳಿ ಒಮ್ಮೆ ವಿಚಲಿತರಾದರೂ ತಾನು ಯಾವುದೇ ಪಾರ್ಸೆಲ್ ಕಳುಹಿಸಿಲ್ಲ. ಅಲ್ಲದೆ ನಾನು ಇರುವದು ಕರ್ನಾಟಕದಲ್ಲಿ ಇದು ಹೇಗೆ ಸಾಧ್ಯ ಎಂದಿದ್ದಾರೆ. ಆಗ ಅವರು ಇಲ್ಲಿ ನಿಮ್ಮದೇ ಐಡಿಯಲ್ಲಿ, ನಿಮ್ಮದೇ ದಾಖಲೆಯಲ್ಲಿ ಪಾರ್ಸೆಲ್ ಕಳುಹಿಸಲಾಗಿದೆ. ನಾವು ಇಲ್ಲಿ ನೀಡಿದ ದೂರವಾಣಿ, ವಿಳಾಸವನ್ನು ಪರಿಶೀಲಿಸಿ ನಿಮಗೆ ಕರೆ ಮಾಡಿದ್ದೇವೆ. ಅದರಲ್ಲಿ ಅಕ್ರಮ ವಸ್ತು ಪತ್ತೆಯಾಗಿದೆ. ನಿಮ್ಮ ಬಂಧನ ಖಚಿತ ಎಂದು ಹೆದರಿಸಿದ್ದಾರೆ.
ಇಷ್ಟರಲ್ಲೆ ಇದು ಮೋಸ ಮಾಡುವ ಹೊಸ ವಿಧಾನ ಎಂದು ಅರಿತು ಈಗೇನು ಮಾಡಬೇಕು ಎಂದು ಸುಮ್ಮನೆ ಕೇಳಿದ್ದಾರೆ. ನಾವು ಇದನ್ನು ಇಲ್ಲಿಯೇ ಸೆಟಲ್ ಮಾಡುತ್ತೇವೆ. ೨ ಲಕ್ಷ ರೂ.ಗಳನ್ನು ನೀವು ನಮಗೆ ಕಳುಹಿಸಿ. ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಒಂದು ವೇಳೆ ಹಣ ಪಾವತಿ ಮಾಡದಿದ್ದರೆ ಏನಾಗುತ್ತದೆ ಎಂದು ಮತ್ತೆ ಉದ್ಯಮಿ ಅವರಿಗೆ ಕೇಳಿದ್ದಾರೆ. ಈಗಾಗಲೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಮಾಹಿತಿ ಹೋಗಿದ್ದು ಅಲ್ಲಿಂದ ಕಸ್ಟಮ್ಸ್ ಅಧಿಕಾರಿಗಳು ಬರಬಹುದು ಎಂದು ಹೆದರಿಸಿದ್ದಾರೆ. ಹೀಗೆ ಬಿಟ್ಟರೆ ದಿನವಿಡೀ ಇವರು ಮಾತನಾಡುತ್ತಾ ಇರುತ್ತಾರೆ ಎಂದು ಈ ಬಾರಿ ಏರು ಧ್ವನಿಯಲ್ಲಿ ಉದ್ಯಮಿ ಮಾತನಾಡಿದ್ದಾರೆ. ಏನಾದರೂ ಆಗಲಿ ತಾನು ನೋಡಿಕೊಳ್ಳುತ್ತೇನೆ ಎಂದು ಗದರಿಸುತ್ತಿರುವಂತೆ ಅತ್ತ ಕಡೆಯಿಂದ ಕಾಲ್ ಕಟ್ ಆಗಿದೆ. ಒಟ್ಟಿನಲ್ಲಿ ಮೋಸ ಹೋಗುವುದರಿಂದ ಭಟ್ಕಳದ ಉದ್ಯಮಿ ಪಾರಾಗಿದ್ದಾರೆ.
ಉದ್ಯಮಿ ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಭಟ್ಕಳದ ಓರ್ವ ವ್ಯಕ್ತಿ ಮೊಬೈಲ್ ಹ್ಯಾಕ್ ಮಾಡಿ ಅವರ ಖಾತೆಯಲ್ಲಿದ್ದ ಸುಮಾರು ೪,೪೦,೦೦೦ ರೂ. ನಗದನ್ನು ಎಗರಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ : ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ರೂ. ಕ್ಷಣಾರ್ಧದಲ್ಲಿ ಮಾಯ