ಭಟ್ಕಳ : ರಸ್ತೆಯಲ್ಲಿ ಕಸ ಹಾಕಿದ್ರೆ ಸಿಕ್ಕಿ ಬಿಳ್ತೀರಾ ಹುಷಾರ್ ! ಹೌದು… ತ್ಯಾಜ್ಯ ಸಮಸ್ಯೆ ನಿವಾರಣೆಗೆ ಕುಮಟಾದ ಹೆಗಡೆ ಪಂಚಾಯತ್ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ಬೆನ್ನಲ್ಲೇ ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ಕೂಡ ಸಿಸಿಟಿವಿ ಕ್ಯಾಮೆರಾ ಅಳವಡಿಸಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಹೆಬಳೆ ಪಂಚಾಯತ ವ್ಯಾಪ್ತಿಯ ಜಾಮಿಯಬಾದ್ ರಸ್ತೆಯಲ್ಲಿ ತೀವ್ರವಾಗಿ ಕಾಡುತ್ತಿರುವ ತ್ಯಾಜ್ಯ ಸಮಸ್ಯೆಯನ್ನು ನಿವಾರಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಪಂಚಾಯತ ಜಾಮಿಯಾಬಾದ್ ರಸ್ತೆ ಪಕ್ಕದಲ್ಲಿ ಕಸ ಬಿಸಾಡುವವರ ಮೇಲೆ ಹದ್ದಿನ ಕಣ್ಣಿಡಲು ಸಿಸಿಟಿವಿ ಕ್ಯಾಮೆರಾಗಳ ‘ಪಹರೆ’ಯ ವ್ಯವಸ್ಥೆ ಮಾಡುತ್ತಿದೆ.
ಇದನ್ನೂ ಓದಿ : ಕಸ ಎಸೆಯುವವರನ್ನು ಪತ್ತೆಹಚ್ಚಲು ಸಿಸಿಟಿವಿ ಅಳವಡಿಕೆ!
ಕ್ಯಾಮೆರಾಗಳಲ್ಲಿ ಸೆರೆಯಾಗುವ ದೃಶ್ಯಾವಳಿಗಳನ್ನು ಸಾಕ್ಷ್ಯವಾಗಿಟ್ಟುಕೊಂಡು, ನಿಯಮ ಉಲ್ಲಂಘಿಸುವವರಿಗೆ ದಂಡದ ಬಿಸಿ ಮುಟ್ಟಿಸುವ ಕಾರ್ಯಕ್ಕೆ ಹೆಬಳೆ ಪಂಚಾಯತ ಮುಂದಾಗಿದೆ.
ಪಂಚಾಯತ ನಿಯೋಜಿಸಲ್ಪಟ್ಟ ಪೌರ ಕಾರ್ಮಿಕರು ಮನೆ- ಮನೆಗಳಿಂದ ಕಸ ಸಂಗ್ರಹಿಸುತ್ತಿದ್ದರೂ, ಹೆಬಳೆ ಪಂಚಾಯತ ವ್ಯಾಪ್ತಿಯಲ್ಲಿ ಕಸ ಬೀಳುವುದು ಕಡಿಮೆಯಾಗಿಲ್ಲ. ಹಾಗಾಗಿ ಗ್ರಾಮ ಪಂಚಾಯತ್ ನೈರ್ಮಲ್ಯ ಕಾಪಾಡಲು ಸಿಸಿಟಿವಿ ಕ್ಯಾಮೆರಾಗಳ ಮೊರೆ ಹೋಗಿದೆ. ತ್ಯಾಜ್ಯ ಸಮಸ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಕ್ಯಾಮೆರಾಗಳ ಕಣ್ಗಾವಲು ಹಾಕಲಾಗುತ್ತಿದೆ. ಆ ಮೂಲಕ ರಾತ್ರಿ ಅಥವಾ ಮುಂಜಾನೆ ವೇಳೆ ಕಸದ ಮೂಟೆ, ಕವರ್ಗಳನ್ನು ಹೊತ್ತು ತಂದು ಬಿಸಾಡುವ ವಾಣಿಜ್ಯ ಮಳಿಗೆದಾರರು, ನಿವಾಸಿಗಳನ್ನು ಪತ್ತೆ ಮಾಡಿ ದಂಡ ವಿಧಿಸಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಹೆಬಳೆ ಗ್ರಾಮ ಪಂಚಾಯತ ಪಿಡಿಓ ಮಂಜುನಾಥ ಗೊಂಡ, ಈಗಾಗಲೇ ೬೦ ಸಾವಿರ ಹಣ ಮಂಜೂರಿ ಮಾಡಿ ೫ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದೇವೆ. ಕಸದ ಸಮಸ್ಯೆ ಹೋಗಲಾಡಿಸಲು ಮುಂದಿನ ದಿನಗಳಲ್ಲಿ ನಮ್ಮ ಪಂಚಾಯತನ ಇನ್ನೂ ಕೆಲವು ಭಾಗಗಳಲ್ಲಿ ಸಿಸಿಟಿವಿ ಅಳವಡಿಸಿ ಎಲ್ಲಿಯೂ ಕಸ ಎಸೆಯದಂತೆ ನೋಡಿಕೊಳ್ಳವ ಯೋಜನೆ ಹಾಕಿದ್ದೇವೆ ಎಂದರು.
ಹೆಬಳೆ ಪಂಚಾಯತ ಸದಸ್ಯ ಸೈಯದ್ ಅಲಿ ಮಾತನಾಡಿ, ನಮ್ಮ ಪಂಚಾಯತಿಯ ಎರಡು ವಾರ್ಡಗಳಿಗೆ ಕಸದ ವಾಹನ ತೆರಳಿದರೂ ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಕಸದ ರಾಶಿ ಎಸೆದು ಕಸ ವಿಲೇವಾರಿ ಘಟಕದಂತೆ ಮಾರ್ಪಾಡು ಮಾಡಿದ್ದರು. ಈಗ ಅದನ್ನು ತಡೆಗಟ್ಟಲು ಸಿಸಿಟಿವಿ ಅಳವಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ಕಸ ಎಸೆಯುವುದು ಕಂಡು ಬಂದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಪ್ರತಿ ದಿನ ಬರುವ ಕಸದ ವಾಹನಕ್ಕೆ ಕೊಟ್ಟು ರಸ್ತೆ ಬದಿಗಳಲ್ಲಿ ಎಸೆಯಬಾರದು ಎಂದು ವಿನಂತಿ ಮಾಡಿಕೊಂಡರು.
ಈಗಾಗಲೇ ಜಾಮಿಯಬಾದ್ ರಸ್ತೆಯಲ್ಲಿ ಮೂರು ಹಾಗೂ ತೆಂಗಿನ ಗುಂಡಿ (ಕಡಿ ಮಿಷನ್) ರಸ್ತೆಯಲ್ಲಿ ಎರಡು ಒಟ್ಟು ಐದು ಸಿಸಿಟಿವಿ ಅಳವಡಿಸಿದ್ದೇವೆ. ಸಿಸಿಟಿವಿ ಅಳವಡಿಸಿದ ಬಳಿಕವೂ ಕಸ ಎಸೆದವರಿಗೆ ೫೦೦ ರೂ. ದಂಡ ವಿಧಿಸಲಾಗುವುದು ಮತ್ತು ಅದೇ ವ್ಯಕ್ತಿ ಇನ್ನೊಮ್ಮೆ ಕಸ ಎಸೆದಿರುವುದು ಕಂಡು ಬಂದರೆ ಆತನಿಗೆ ೧೦೦೦ ರೂ. ದಂಡ ಹಾಗೂ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ.
– ಮಂಜುನಾಥ ಗೊಂಡ, ಪಿಡಿಒ, ಹೆಬಳೆ