ಕಾರವಾರ : ನಗರದ ಹುಬ್ಬುವಾಡದಿಂದ ಹರಿದೇವ ನಗರದವರೆಗೆ ಕಾರವಾರ – ಇಳಕಲ್ ರಾಜ್ಯ ಹೆದ್ದಾರಿಯ ಸಂಪೂರ್ಣ ಹಾಳಾಗಿದೆ. ವಾಹನ ಸವಾರರು, ಪ್ರಯಾಣಿಕರು ಈ ರಾಜ್ಯ ಹೆದ್ದಾರಿಯಲ್ಲಿ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಕೆಲವು ವರ್ಷಗಳ ಹಿಂದೆಯಷ್ಟೇ ಕೋಟ್ಯಂತರ ರೂ. ಹಣ ಹಾಕಿ ನಿರ್ಮಿಸಿದ ಹೆದ್ದಾರಿಯ ಕೆಲವು ಕಡೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳದಿರುವುದು ಈ ಸ್ಥಿತಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಸಂಬಂಧಪಟ್ಟ ಇಲಾಖೆಯು ಎಚ್ಚೆತ್ತುಕೊಂಡು ದುರಸ್ತಿ ಕೈಗೊಳ್ಳಬೇಕಿದೆ.
ಇದನ್ನೂ ಓದಿ : ಮುರುಡೇಶ್ವರ ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲು
ಕಾರವಾರ ಇಳಕಲ್ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಹಬ್ಬುವಾಡ – ಹರಿದೇವ ನಗರ ರಸ್ತೆಯಲ್ಲಿ ಸಂಚಾರ ತೀವ್ರ ಕಷ್ಟಕರವಾಗಿದೆ. ಅಪಾರ ಪ್ರಮಾಣದಲ್ಲಿ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿವೆ. ವಾಹನ ಸವಾರರು ರಾತ್ರಿ ವೇಳೆಯಲ್ಲಿ ಬೀಳುತ್ತಿದ್ದಾರೆ. ಹಗಲಿನಲ್ಲಿ ಹೊಂಡಗಳನ್ನು ತಪ್ಪಿಸಲು ಹೋಗಿ ಎದುರಿನ ವಾಹನಕ್ಕೆ ಬಡಿದು ಸ್ಕಿಡ್ ಆಗಿ ಬಿದ್ದು ಅಪಘಾತ ಸಂಭವಿಸುತ್ತಿವೆ. ದಿನೇ ದಿನೇ ಈ ಹಬ್ಬುವಾಡ- ಹರಿದೇವನಗರ ರಸ್ತೆಯ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೂ ಮೃತ್ಯುಕೂಪವಾಗಿ ಪರಿಣಮಿಸಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕೈಗಾ ಹಾಗೂ ರೈಲ್ವೆ ನಿಲ್ದಾಣ ಸಂಪರ್ಕಿಸುವ ಈ ಹೆದ್ದಾರಿಯಲ್ಲಿ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಬೈಕ್, ಸ್ಕೂಟಿ, ರಿಕ್ಷಾ, ಕಾರು ಮೊದಲಾದ ವಾಹನಗಳ ಬಿಡಿಭಾಗಗಳು ಪ್ರತಿದಿನ ಕೆಟ್ಟು ಹೋಗುತ್ತಿವೆ. ತಮ್ಮ ವಾಹನಗಳು ದುರಸ್ತಿ ಮಾಡುವುದೇ ಜನರಿಗೆ ದೊಡ್ಡ ಸವಾಲಿನ ಪ್ರಶ್ನೆಯಾಗಿದೆ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರ ಸಾವು ನೋವುಗಾಗಿ ದಾರಿ ಕಾಯುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ದುರಸ್ತಿ ಕಾರ್ಯ ಮಾಡದೆ ಹಾಗೇ ಬಿಟ್ಟಿದ್ದರಿಂದ ಈ ರಸ್ತೆ ಮಾರ್ಗವಾಗಿ ಹೋಗುವ ಶಾಲಾ- ಕಾಲೇಜು ವಿದ್ಯಾರ್ಥಿಗಳು, ವಯಸ್ಸಾದವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಒಂದು ವೇಳೆ ಇಲ್ಲಿ ಸಾವು ನೋವು ಸಂಭವಿಸಿದರೆ ಸರ್ಕಾರ ಹಾಗೂ ಇಲಾಖೆಯ ಅಧಿಕಾರಿಗಳು ಹೊಣೆಯಾಗಲಿದ್ದಾರೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರಾಜ್ಯ ಹೆದ್ದಾರಿಯ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ.
– ರಾಜಾ ನಾಯ್ಕ ಕಡವಾಡ, ಕಾರವಾರ ನಗರ ಘಟಕ ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ