ಭಟ್ಕಳ: ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಠ್ಠಳ್ಳಿಯಲ್ಲಿ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು. ತರಕಾರಿಯನ್ನು ಒಳಗೊಂಡಂತೆ ವಿವಿಧ ವಸ್ತುಗಳ ಮಾರಾಟ ಮಾಡುವಲ್ಲಿನ ಮಕ್ಕಳ ಕೌಶಲ್ಯ ಯಾವುದೇ ವ್ಯಾಪಾರಸ್ಥನ ಸಾಮರ್ಥ್ಯಕ್ಕಿಂತ ಕಡಿಮೆ ಏನು ಇರಲಿಲ್ಲ. ತಾವು ಖರೀದಿಗಿಟ್ಟ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಎಲ್ಲ ಕೌಶಲಗಳು ನೈಜ ಸಂತೆಯನ್ನು ಮೀರಿಸುವಂತೆ ನಡೆಯುವ ಮೂಲಕ ಈ ಅಪರೂಪದ ಮಕ್ಕಳ ಸಂತೆ ಗಮನ ಸೆಳೆಯಿತು.
ವಿಡಿಯೋ ನೋಡಿ : https://fb.watch/qkDXLsHnHz/?mibextid=Nif5oz
ಶಾಲಾ ಮಕ್ಕಳಿಗೆ ವ್ಯವಹಾರಿಕ ಜ್ಞಾನ ಮತ್ತು ಸಂವಹನ ಕೌಶಲವನ್ನು ಬೆಳೆಸುವ ಉದ್ದೇಶದಿಂದ ಮುಠ್ಠಳ್ಳಿಯ ಶಾಲೆ ಮೈದಾನದಲ್ಲಿ ಆಯೋಜಿಸಿದ್ದ ಈ ಸಂತೆಯಲ್ಲಿ ಮಕ್ಕಳು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು. ತರಕಾರಿ, ಹಣ್ಣು ಹಾಗೂ ಇತರ ದಿನಬಳಕೆ ವಸ್ತುಗಳನ್ನು ಮಾರಾಟ ಮಾಡಿ ಲಾಭ-ನಷ್ಟದ ಪರಿಕಲ್ಪನೆ ಮತ್ತು ಸಾರ್ವಜನಿಕರೊಂದಿಗೆ ವ್ಯವಹರಿಸುವ ವಿಧಾನದ ಬಗ್ಗೆ ತಿಳಿದುಕೊಂಡರು.
ಇದನ್ನೂ ಓದಿ : ದೇವಿಮನೆ ಕ್ಷೇತ್ರ ಅಭಿವೃದ್ಧಿ ಶ್ಲಾಘನೀಯ : ಮಾಜಿ ಶಾಸಕ ಸುನೀಲ ನಾಯ್ಕ
ವಾರದ ಸಂತೆಯೊಳಗಿನ ಎಲ್ಲಾ ಅಂಶಗಳು ಮಕ್ಕಳ ಸಂತೆಯಲ್ಲಿ ಮಿಳಿತವಾಗಿತ್ತು. ಸುಮ್ಮನೆ ಕುತೂಹಲಕ್ಕೆಂದು ಬಂದ ಸಾಕಷ್ಟು ಗ್ರಾಮದ ನಿವಾಸಿಗಳು ಬ್ಯಾಗ್ ಹಿಡಿದು ಮಕ್ಕಳೊಂದಿಗೆ ಚರ್ಚಿಸಿ ವ್ಯಾಪಾರ ಮಾಡುವ ಮೂಲಕ ವಾರದ ಸಂತೆಯನ್ನು ಮಕ್ಕಳ ಸಂತೆಯಲ್ಲೆ ಮುಗಿಸುವ ಧಾವಂತ ತೋರಿದ್ದು ವಿಶೇಷ ಆಗಿತ್ತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ರಜನಿ ನಾಯ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ಚಂದಾವರ, ಪಂಚಾಯತ್ ಕಾರ್ಯದರ್ಶಿ ಮಂಜುನಾಥ ಚಿಕ್ಕನಮನೆ, ಸಿ ಆರ್ ಪಿ ಜಯಶ್ರೀ ಆಚಾರಿ, ಎಸ್ ಡಿ ಎಂ ಸಿ ಅಧ್ಯಕ್ಷ ಅನಂತ ನಾಯ್ಕ್, ಎಸ್ ಡಿ ಎಮ್ ಸಿ ಉಪಾಧ್ಯಕ್ಷೆ ಯಶೋಧಾ ನಾಯ್ಕ್, ಪಂಚಾಯತ್ ಮಾಜಿ ಅಧ್ಯಕ್ಷ ಶೇಷಗಿರಿ ನಾಯ್ಕ್, ಮಕ್ಕಳ ಪಾಲಕ-ಪೋಷಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.