ಭಟ್ಕಳ: ನಾನು ವಿಷ್ಣು ನಾಯ್ಕ ಅವರ ಗರಡಿಯಲ್ಲಿ ಬೆಳೆದ ಸಾಹಿತಿ ಎಂಬ ಹೆಮ್ಮೆ ನನಗಿದೆ ಎಂದು ಸಾಹಿತಿ ಡಾ.ಸಯ್ಯದ ಜಮೀರುಲ್ಲ ಷರೀಫ್ ಹೇಳಿದರು.
ಅವರು ಇಲ್ಲಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ‌ ತಾಲೂಕು ಕಸಾಪ ಘಟಕದಿಂದ ಇತ್ತೀಚೆಗೆ ನಿಧನರಾದ ಸಾಹಿತಿ ವಿಷ್ಣು ನಾಯ್ಕರ ನುಡಿನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಜೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಇದನ್ನೂ ಓದಿ : ಇಕೋ ಪಾರ್ಕ್ ನಿರ್ಮಿಸಿದ ಬೆಣಂದೂರು ಸರ್ಕಾರಿ ಶಾಲೆ
ವಿಷ್ಣು ನಾಯ್ಕ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಾವು ಬೆಳೆಯುತ್ತ ಇತರರನ್ನೂ ಬೆಳೆಸುವಂತಹ ಎತ್ತರದ ವ್ಯಕ್ತಿತ್ವ ಹೊಂದಿದವರು. ಭಟ್ಕಳದ ನೆಲದಲ್ಲಿ ನನ್ನನ್ನು ಗುರುತಿಸಿ ಷರೀಫ್ ನಿಮ್ಮನ್ನು ಕಂಡಾಗ ಭಟ್ಕಳದ ನೆಲದಲ್ಲಿ ಸಾಹಿತ್ಯದ ಓಯಾಸಿಸ್ ಕಂಡಂತಾಯಿತು ಎಂದು ನುಡಿದು ಸಾಹಿತ್ಯ ಕೃಷಿಗೆ ಉತ್ತೇಜಿಸಿದ್ದರು. ಅಂಕೋಲೆಯ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದಾಗ ಆ ವೇದಿಕೆಯಲ್ಲಿ ಅವಕಾಶ ಕಲ್ಪಿಸಿ ಪ್ರೋತ್ಸಾಹ‌ ನೀಡಿದವರು. ನನ್ನನ್ನು ಶಾಮಿಯಾನದ ಕವಿ ಎಂದು ಹೆಸರಿಸಿದರವರೇ ಅವರು. ಜಿಲ್ಲೆಯಲ್ಲಿ ದಿನಕರ ದೇಸಾಯಿಯವರ ನಂತರ ಅವರ ಛಾಯೆಯಾಗಿ ಬೆಳೆದ ವಿಷ್ಣು ನಾಯ್ಕ ಅವರ ಪ್ರೋತ್ಸಾಹದಲ್ಲಿ ಜಿಲ್ಲೆಯ ಈಗಿನ ಎಲ್ಲ ಹೆಸರಾಂತ ಸಾಹಿತಿಗಳ ಜೊತೆಯಲ್ಲಿ ನಾನೂ ಕೂಡ ಬೆಳೆಯಲು ಕಾರಣರಾದವರು ಎಂದರು.

ಈ ವಿಡಿಯೋ ನೋಡಿ : ಬೆಣಂದೂರು ಶಾಲೆಯಲ್ಲಿ ಇಕೋ ಪಾರ್ಕ್  https://fb.watch/qs7R6zrstV/?mibextid=Nif5oz
ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಒಬ್ಬ ವ್ಯಕ್ತಿ ಸಾಹಿತ್ಯ ಕ್ಷೇತ್ರದಲ್ಲಿ ಯಾವೆಲ್ಲ ರೀತಿಯಲ್ಲಿ ಕೆಲಸ ಮಾಡಬಹುದು ಎಂಬುದಕ್ಕೆ ವಿಷ್ಣು ನಾಯ್ಕರ ಸಾಧನೆ ಎಲ್ಲರಿಗೂ ಪ್ರೇರಣೆ. ಪುರಾಣದಲ್ಲಿ ವಿಷ್ಣುವಿನ ಹತ್ತು ಅವತಾರಗಳ ಕುರಿತು ನಾವೆಲ್ಲ ಓದಿರುವಂತೆ ಸಾಹಿತ್ಯ ಕ್ಷೇತ್ರದಲ್ಲಿ ಅವರು ಶಿಕ್ಷಕ, ಉಪನ್ಯಾಸಕ, ಸಂಪನ್ಮೂಲ ವ್ಯಕ್ತಿ, ಲೇಖಕ, ಕವಿ, ಅಂಕಣಕಾರ, ನಾಟಕಕಾರ, ಪ್ರಕಾಶಕ, ಸಂಘಟಕ, ನಾಟಕಕಾರ, ಮಾರ್ಗದರ್ಶಕ, ಅಭಿನಯ, ಜೊತೆಗೆ ಸುಮನಸಿನ ವ್ಯಕ್ತಿಯಾಗಿ ಹತ್ತು ಹಲವು ಸ್ವರೂಪದಲ್ಲಿ ಕಾರ್ಯ ನಿರ್ವಹಿಸಿರುವುದು ಇತಿಹಾಸ. ಅವರ ಸಮಯ ಪ್ರಜ್ಞೆಯ ಮತ್ತು ಕಂಚಿನ ಕಂಠದ ಮಾತುಗಾರಿಕೆ ಎಲ್ಲರನ್ನೂ ಸೆಳೆಯುವಂಥದ್ದು. ಭಟ್ಕಳದ ನೆಲದಲ್ಲಿಯೇ ಉ.ಕ. ಜಿಲ್ಲಾ‌ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಸಂದಿರುವುದು ಭಟ್ಕಳ ತಾಲೂಕಿನ ಹೆಮ್ಮೆ ಎಂದರು. ವಿಷ್ಣು ನಾಯ್ಕರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದಾಗ ಅವರೊಂದಿಗೆ ಕಾರ್ಯಕ್ರಮ‌ ಸಂಘಟಿಸಿದ ನೆನಪುಗಳನ್ನು ಅವರು ಸ್ಮರಿಸಿದರು.


ಸಾಹಿತಿ ಮಾನಾಸುತ ಶಂಭು ಹೆಗಡೆ ಸ್ವರಚಿತ ಕವಿತೆ ವಾಚಿಸಿ ವಿಷ್ಣು ನಾಯ್ಕರಿಗೆ ಕಾವ್ಯನಮನ ಸಲ್ಲಿಸಿದರು.
ಶಿಕ್ಷಕ ಚಿದಾನಂದ‌ ಪಟಗಾರ ಮಾತನಾಡಿ, ತಾನು ಓರ್ವ ಭಾಷಣಕಾರನಾಗಿ, ರಾಜ್ಯ ಮಟ್ಟದವರೆಗಿನ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯಲು ಮತ್ತು ವಿವಿಧೆಡೆ ಉಪನ್ಯಾಸ ನೀಡಲು ವಿಷ್ಣು ನಾಯ್ಕರ ದಿನಕರ‌ ದೇಸಾಯಿಯವರ ಚುಟುಕುಗಳ ವಿವರಣೆಯನ್ನೊಳಗೊಂಡ ಕೃತಿಯೇ ನೆರವಾಯಿತು ಎಂದರು.


ಸಾಹಿತಿ, ಭಟ್ಕಳ ತಾಲೂಕು ಕಸಾಪ ಕೋಶಾಧ್ಯಕ್ಷ ಶ್ರೀಧರ ಶೇಟ್ ಅವರು, ವಿಷ್ಣು ನಾಯ್ಕ ಅವರ ಬದುಕು ಬರಹದ ಕುರಿತು ವಿವರಿಸಿದರು. ತಮ್ಮ ನಿವಾಸ ಪರಿಮಳದಂಗಳವನ್ನೇ ಸಾಹಿತ್ಯ ಸಾಂಸ್ಕೃತಿಕ‌ ಕೇಂದ್ರವಾಗಿಸಿ ನನ್ನಂತ ನೂರಾರು‌ ಕವಿಗಳನ್ನು ಪೋಷಿಸಿದ್ದನ್ನು ಸ್ಮರಿಸುತ್ತ ಕಾರ್ಯಕ್ರಮ ನಿರ್ವಹಿಸಿದರು.


ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ ವಂದಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ, ಕಸಾಪದ ಸಂಘ ಸಂಸ್ಥೆಯ ಪ್ರತಿನಿಧಿ ವೆಂಕಟೇಶ ನಾಯ್ಕ ಆಸರಕೇರಿ, ಶಿಕ್ಷಕ ಸಿ.ಡಿ.ಪಡುವಣಿ, ಮುಂತಾದವರು ಉಪಸ್ಥಿತರಿದ್ದರು.