ಶಿವಮೊಗ್ಗ : ದಕ್ಷಿಣ ಭಾರತದ ಜೈನರ ಪವಿತ್ರ ಯಾತ್ರ ಕ್ಷೇತ್ರವಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅತಿಶಯ ಶ್ರೀಕ್ಷೇತ್ರ ಹೊಂಬುಜದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವಕ್ಕೆ ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಭಾನುವಾರ ಘಟಸ್ಥಾಪನೆಯ ಮೂಲಕ ಚಾಲನೆ ನೀಡಿದರು.


ದೇಶದ ಹಾಗೂ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತವೃಂದದವರು ಪೂಜಾ ಮಹೋತ್ಸವಗಳಲ್ಲಿ ಪಾಲ್ಗೊಂಡಿದ್ದರು. ನವರಾತ್ರಿಯ ಅಂಗವಾಗಿ ಶ್ರೀಗಳು, ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರಲ್ಲಿ ಪ್ರಾರ್ಥನೆ ಸಲ್ಲಿಸಿ ಎಲ್ಲರ ಸನ್ಮಂಗಲಕ್ಕಾಗಿ ಆರಿಕೆ ಮಾಡಿಕೊಂಡಿರುವುದಾಗಿ ತಿಳಿಸಿದರು.

ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಸಾನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಪ್ರತಿದಿನ ಧಾರ್ಮಿಕ ವಿಧಿ-ವಿಧಾನ ಪೂಜಾ ಮಹೋತ್ಸವಗಳು ನೆರವೇರಲಿವೆ.
ಅ. 20ರ ಶುಕ್ರವಾರ-ಸರಸ್ವತಿ ಪೂಜೆ, ಅ. 22ರ ಭಾನುವಾರ-ಜೀವದಯಾಷ್ಟಮಿ, ಅ. 23ರ ಸೋಮವಾರ-ಆಯುಧಪೂಜೆ, ಅ. 24ರ ಮಂಗಳವಾರ-ವಿಜಯದಶಮಿ ಉತ್ಸವ, ಶ್ರೀದೇವಿ ಪಲ್ಲಕ್ಕಿ ಉತ್ಸವ, ಶ್ರೀಗಳವರ ಸಿಂಹಾಸನಾರೋಹಣ ಹಾಗೂ ಶ್ರೀಗಳವರ ಪಾದಪೂಜೆ ಕಾರ್ಯಕ್ರಮಗಳು ನೆರವೇರಲಿವೆ.