ಭಟ್ಕಳ: ದೇಶದಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ ಈ ಬಾರಿಯ ಚುನಾವಣೆ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಚುನಾವಣೆಯಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮನಾಭ ಪೂಜಾರಿ ಹೇಳಿದರು.

ಇದನ್ನೂ ಓದಿ : ದೇಶದ ಆಸ್ತಿ ಮಾರುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ : ಸೊರಕೆ

ಅವರು ರವಿವಾರ ಭಟ್ಕಳದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷವು ಯಾವತ್ತೂ ದ್ವೇಷ ಸಾಧಿಸಿಲ್ಲ. ಇದು ಪ್ರೀತಿಯ ಸಂದೇಶ ಸಾರುವುದರ ಮೂಲಕ ದೇಶವನ್ನು ವಿಶ್ವಗುರುವನ್ನಾಗಿಸುವ ಕನಸು ಕಾಣುತ್ತಿದೆ. ಸಮಾಜದಲ್ಲಿರುವ ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ದೇಶಕಟ್ಟುವ ಪ್ರಯತ್ನದಲ್ಲಿದೆ ಎಂದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್  ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಉ.ಕ. ಕ್ಷೇತ್ರದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಸಂಸದರಿದ್ದು ಯಾವುದೇ ಪ್ರಯೋಜವಾಗಿಲ್ಲ. ಇಲ್ಲಿನ ರಸ್ತೆಗಳನ್ನು ಕಂಡರೆ ಇಲ್ಲಿ ಒಂದಿಂಚೂ ಅಭಿವೃದ್ಧಿಯಾಗಿಲ್ಲ. ಈ ಮೂವತ್ತು ವರ್ಷಗಳಲ್ಲಿ ಸಂವಿಧಾನವನ್ನು ವಿರೋಧಿಸುತ್ತ, ಧರ್ಮ-ಜಾತಿಗಳ ನಡುವೆ ಕಂದಕವನ್ನುಂಟು ಮಾಡುವ ಕೆಲಸ ಮಾಡಿದೆ. ಅಭಿವೃದ್ಧಿಯ ವಿಷಯದಲ್ಲಿ ಪ್ರಶ್ನೆಗಳನ್ನು ಕೇಳಿದರೆ ಅವರ ಬಳಿ ಯಾವುದೇ ಉತ್ತರವಿಲ್ಲ ಎಂದು ಪರೋಕ್ಷವಾಗಿ ಅನಂತ್ ಕುಮಾರ್ ಹೆಗಡೆಯವರ ಹೆಸರು ಉಲ್ಲೇಖಿಸಿದೆ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಕಳೆದ ಎರಡು ದಿನಗಳಿಂದ ಉ.ಕ. ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದೇನೆ. ಜನರ ಬದುಕು, ಇಲ್ಲಿನ ಹಳ್ಳಿಗಾಡು ಪ್ರದೇಶ, ಇಲ್ಲಿನ ಪರಿಸ್ಥಿತಿ ಕಂಡರೆ ನನಗೆ ದುಖಃ ಮತ್ತು ಬೇಸರವಾಗುತ್ತಿದೆ. ಈ ಜಿಲ್ಲೆ ಇಷ್ಟೊಂದು ಹಿಂದೆ ಬೀಳಲು ಯಾರು ಕಾರಣರು? ಕಳೆದ ೩೦ ವರ್ಷಗಳಿಂದ ಇಲ್ಲಿ ಸಂಸದರಾಗಿದ್ದವರು ಹಾಗೂ ಅವರ ಪಕ್ಷವೇ ಇದಕ್ಕೆ ನೇರ ಹೊಣೆಯಾಗಿದೆ ಎಂದ ಅವರು, ಸದ್ಯ ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷದ ಪರ ಗಾಳಿ ಬೀಸುತ್ತಿದೆ. ದೇಶದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದರು.

ಕಾರ್ಕಳ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಉದಯಕುಮಾರ್ ಶೆಟ್ಟಿ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ ಮಾತನಾಡಿದರು. ಪಕ್ಷದ ಮುಖಂಡರಾದ ಗೋಪಾಲ ನಾಯ್ಕ, ಈಶ್ವರ ಮೊಗೇರ, ಸುರೇಶ ನಾಯ್ಕ, ಮಂಜಪ್ಪ ನಾಯ್ಕ, ರಮೇಶ ನಾಯ್ಕ, ದೇವಿದಾಸ ಆಚಾರಿ, ಸುಧಾಕರ ನಾಯ್ಕ ಮತ್ತಿತರರು ಇದ್ದರು.