ಭಟ್ಕಳ: ಸಮುದ್ರದಲ್ಲಿ ಬೋಟುಗಳ ನಡುವೆ ಡಿಕ್ಕಿ ಸಂಭವಿಸಿದೆ. ಮೀನುಗಾರಿಕೆಗೆ ತೆರಳಿದ್ದ ಬೋಟಿಗೆ ಸಮುದ್ರ ಮಧ್ಯೆ ಇನ್ನೊಂದು ಬೋಟು ಡಿಕ್ಕಿ ಹೊಡೆದ ಪರಿಣಾಮ ಒಂದು ಬೋಟು ಮುಳುಗಡೆಯಾಗಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಬೋಟಿನಲ್ಲಿದ್ದ ಐದು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.


ಮಲ್ಪೆ ವಡಭಂಡೇಶ್ವರ ಗೋಪಾಲ ಸುವರ್ಣ ಎಂಬವರ ಮಾಲ್ತಿದೇವಿ ಬೋಟು ಮೇ ೧೬ರಂದು ರಾತ್ರಿ ಮಲ್ಪೆಬಂದರಿನಿಂದ ಮೀನುಗಾರಿಕೆಗಾಗಿ ಭಟ್ಕಳ ಕಡೆಗೆ ತೆರಳಿತ್ತು. ಇದರಲ್ಲಿ ತಾಂಡೇಲ ಸುರೇಶ್ ಕುಂದ‌ರ್, ಮೀನುಗಾರರಾದ ಶಂಕರ ಕುಂದರ್, ಶಂಕರ ಪೂಜಾರಿ, ಯೋಗೇಂದ್ರ, ಫರೀದ ಅಬ್ದುಲ್ ಘನಿ ಶೇಖ್ ಇದ್ದರು.

ಇದನ್ನೂ ಓದಿ : ಸಿಡಿಲು ಬಡಿದು ಆಟವಾಡುತ್ತಿದ್ದ ಬಾಲಕ ಸಾವು

ಮೇ ೧೭ರಂದು ಬೆಳಗಿನ ಜಾವ ಭಟ್ಕಳ ಸಮೀಪ ಸುಮಾರು ೧೨ ಮಾರು ದೂರದಲ್ಲಿ ಹೋಗುತ್ತಿದ್ದ ಬೋಟಿಗೆ ಶ್ರೀದುರ್ಗಾ ಬೋಟು ಡಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಸಮುದ್ರದಲ್ಲಿ ಬೋಟುಗಳ ನಡುವೆ ಡಿಕ್ಕಿ ಪರಿಣಾಮ ಮಾಲ್ತಿದೇವಿ ಬೊಟಿನ ಮಧ್ಯ ಭಾಗದ ಅಡಿ ಹಲಗೆಯು ಎದ್ದು ಹೋಗಿದ್ದು, ನೀರು ಒಳಗೆ ಬರಲು ಆರಂಭಿಸಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಡಿಕ್ಕಿ ಹೊಡೆದ ದುರ್ಗಾ ಬೋಟು ಮತ್ತು ಹತ್ತಿರದಲ್ಲೇ ಇದ್ದ ಪಾಂಚಜನ್ಯ ಬೋಟಿನವರು ಮಾಲ್ತಿದೇವಿ ಬೋಟನ್ನು ಹಗ್ಗದಿಂದ ಕಟ್ಟಿ ಗಂಗೊಳ್ಳಿ ಬಂದರಿಗೆ ಎಳೆದು ತರುವಾಗ ಗಂಗೊಳ್ಳಿ ಅಳಿವೆಯಿಂದ ಸುಮಾರು ೮ರಿಂದ ೧೦ ಮಾರು ದೂರ ಹಗ್ಗ ತುಂಡಾಗಿದೆ. ಪರಿಣಾಮ ಮಾಲ್ತಿದೇವಿ ಬೋಟು ನೀರಿನಲ್ಲಿ ಶೇ.90ರಷ್ಟು ಮುಳುಗಡೆಗೊಂಡಿತು. ಈ ವೇಳೆ ಬೋಟಿನಲ್ಲಿದ್ದ ಎಲ್ಲಾ ಮೀನುಗಾರರನ್ನು ದುರ್ಗಾ ಮತ್ತು ಪಾಂಚಜನ್ಯ ಬೋಟಿನವರು ರಕ್ಷಿಸಿದ್ದಾರೆ. ಯಾವುದೇ ಜೀವ ಹಾನಿಯಾಗಿರುವುದಿಲ್ಲ ಎಂದು ತಿಳಿದುಬಂದಿದೆ.


ಬೋಟಿನಲ್ಲಿದ್ದ ೧.೯೦ ಲಕ್ಷ ರೂ. ಮೌಲ್ಯದ ೫೦೦ ಲೀಟ‌ರ್ ಡಿಸೇಲ್, ಎಂಟು ಟ್ರಾಲ್ ಬಲೆ, ಅಶೋಕ್ ಲೈಲ್ಯಾಂಡ್ ಇಂಜಿನ್, ಇತರೇ ಉಪಕರಣಗಳು ಸೇರಿದಂತೆ ಒಟ್ಟು ೨೦ ಲಕ್ಷ ರೂ. ನಷ್ಟ ಉಂಟಾಗಿದೆ. ಬಲೆ ಮತ್ತು ಇನ್ನಿತರ ಸಲಕರಣೆಗಳು ನೀರಿನಲ್ಲಿ ತೇಲಿ ಹೋಗಿರುವುದಾಗಿ ಕರಾವಳಿ ಕಾವಲು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.