ಬೆಂಗಳೂರು : ಕೋವಿಡ್ ಸಮಯದಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ದೇಹವನ್ನು ಅವರ ತವರೂರಿಗೆ ತರಲು ಬಿಜೆಪಿ ಕೇಂದ್ರ ಸರ್ಕಾರ ಅವಕಾಶ ನೀಡಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಇದನ್ನೂ ಓದಿ : ಬಿಜೆಪಿಗೆ ಅಡಿಪಾಯ ಹಾಕಿದವರನ್ನು ಮನೆಯಲ್ಲಿ ಕೂರಿಸಿದ್ದಾರೆ: ಡಿ.ಕೆ. ಶಿವಕುಮಾರ್

ನಾಮಪತ್ರ ಸಲ್ಲಿಕೆಗೆ ಹೊರಟ ಸಹೋದರ ಡಿ.ಕೆ.ಸುರೇಶ್ ಅವರಿಗೆ ಆಶೀರ್ವದಿಸಿದ ನಂತರ ಮಾಧ್ಯಮದ ಜೊತೆ ಅವರು ಮಾತನಾಡುತ್ತ ಸುರೇಶ ಅಂಗಡಿ ಕೋವಿಡ್ ನಿಂದ ಸತ್ತಾಗ ಕೇಂದ್ರ ಬಿಜೆಪಿ ಸರ್ಕಾರದ ನಡೆಯನ್ನು ನೆನಪಿಸಿದರು.

ಇದನ್ನೂ ಓದಿ : ಡಿಕೆಶಿ, ನಿಂಬಾಳ್ಕರ್ ವಿರುದ್ಧ ಬಿಜೆಪಿ ದೂರು

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆ ತಯಾರಿ ಬಗ್ಗೆ ಮಾತನಾಡಿದ ಅವರು, ಎಲ್ಲರ ಸರ್ಕಾರ ಶವಗಳನ್ನು ಜೆಸಿಬಿಯಲ್ಲಿ ಎಸೆಯುತ್ತಿರುವಾಗ, ಕೋವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಅವರ ಮನೆಯವರು ಮುಂದೆ ಬಾರದಿದ್ದಾಗ ಡಿ.ಕೆ ಸುರೇಶ್ ಪಿಪಿಇ ಕಿಟ್ ಧರಿಸಿ ಶವಗಳ ಅಂತ್ಯ ಸಂಸ್ಕಾರ ಮಾಡಿದರು. ಎಲ್ಲಾ ನಾಯಕರು ಮನೆಯಿಂದ ಆಚೆ ಬರಲು ಹಿಂಜರಿದಾಗ, ಸುರೇಶ್ ಕೋವಿಡ್ ಆಸ್ಪತ್ರೆಗಳಿಗೆ ಹೋಗಿ, ಸೋಂಕಿತರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಇದೆಲ್ಲವೂ ಇತಿಹಾಸ ಎಂದರು.

ಡಿ.ಕೆ. ಸುರೇಶ್ ಅವರು ಕೋವಿಡ್ ಕಷ್ಟಕಾಲದಲ್ಲಿ ರೈತರಿಂದ ಹಣ್ಣು ತರಕಾರಿ ಖರೀದಿ ಮಾಡಿ ಜನರಿಗೆ ಉಚಿತವಾಗಿ ಹಂಚಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ತಯಾರಿ ಬಗ್ಗೆ ಪ್ರತಿಕ್ರಿಯಿಸಿ, ನಾವು ಕೇವಲ ಇಂದು ಚುನಾವಣೆ ತಯಾರಿ ಮಾಡುತ್ತಿಲ್ಲ. ಸುರೇಶ್ ಅವರು ಗೆದ್ದ ಮೊದಲ ದಿನದಿಂದ ಪ್ರತಿ ನಿತ್ಯ ಕೆಲಸ ಮಾಡಿಕೊಂಡೇ ಬಂದಿದ್ದಾರೆ. ಜನರಿಗೆ ಮೆಡಿಕಲ್ ಕಿಟ್ ನೀಡಿ ಸಹಾಯ ಮಾಡಿದರು. ಅಂತಹ ಕಷ್ಟ ಕಾಲದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕ್ಷೇತ್ರದ ಜನರಿಗಾಗಿ ಶ್ರಮಿಸಿದ್ದಾರೆ. ಇದ್ಯಾವುದೂ ಚುನಾವಣೆ ಸಮಯದಲ್ಲಿ ಮಾಡಿದ ಕೆಲಸವಲ್ಲ. ಸುರೇಶ್ ಅವರು ಪ್ರತಿ ಹಳ್ಳಿ, ಹಳ್ಳಿ ಸುತ್ತಾಡಿ ಪಂಚಾಯ್ತಿ ಸದಸ್ಯನಂತೆ ಕೆಲಸ ಮಾಡಿದ್ದಾರೆ. ಹೀಗಾಗಿ ನಾವು ಈ ಬಾರಿಯ ಚುನಾವಣೆಯಲ್ಲಿ ನಾವು ವಿಶೇಷವಾದ ತಯಾರಿ ಮಾಡುವ ಅಗತ್ಯವಿಲ್ಲ. ನಮ್ಮ ಪರವಾಗಿ ಜನರು, ಕಾರ್ಯಕರ್ತರು ಇದ್ದಾರೆ ಎಂದರು.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡುತ್ತ, ನಾವು ದೇವೇಗೌಡರ ಕುಟುಂಬದ ವಿರುದ್ಧ ಅನೇಕ ಚುನಾವಣೆಗಳನ್ನು ಮಾಡಿದ್ದೇವೆ. ದೇವೇಗೌಡರ ವಿರುದ್ಧ ಓರ್ವ ಮಹಿಳೆಯನ್ನು ನಿಲ್ಲಿಸಿ ಗೆಲ್ಲಿಸಿದ್ದೇವೆ. ನಾನು ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದೇನೆ. 2013ರ ಉಪಚುನಾವಣೆಯಲ್ಲಿ ಇದೇ ರೀತಿ ಜೆಡಿಎಸ್ ಹಾಗೂ ಬಿಜೆಪಿ ಸೇರಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದಾಗ ಸುರೇಶ್ ಅವರು ಗೆದ್ದಿದ್ದರು. ಆಗ ಸಿದ್ದರಾಮಯ್ಯ ಅವರ ಸರ್ಕಾರ ಇದ್ದರೂ ನಾನು ಸಚಿವನಾಗಿರಲಿಲ್ಲ. ಆಗ ನನಗೆ ದೊಡ್ಡ ಸವಾಲಾಗಿತ್ತು. ಆಗಲೂ ನಾವು ಸಹೋದರಿ ಅನಿತಾ ಕುಮಾರಸ್ವಾಮಿ ಅವರನ್ನು 1.30 ಲಕ್ಷ ಮತಗಳಿಂದ ಮಣಿಸಿದೆವು. ನಂತರ ಜನ ಸುರೇಶ್ ಅವರನ್ನು ಸತತವಾಗಿ ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.