ಕುಮಟಾ: ಪರೇಶ ಮೇಸ್ತ ಸಾವಿನ ನಂತರ ಕಾಂಗ್ರೆಸ್ ಕೈಗೊಂಬೆಯಂತೆ ವರ್ತಿಸುತ್ತಿದ್ದ ಪೊಲೀಸ್ ಅಧಿಕಾರಿ ಹೇಮಂತ ನಿಂಬಾಳ್ಕರ ಅವರಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಲು ಕಾರಣವಾಯಿತು ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಕುಮಟಾ ವಿಧಾನಸಭಾ ಕ್ಷೇತ್ರದ ಬಡಾಳ, ಹಳದೀಉರ, ಕುಮಟಾ ಪಟ್ಟಣ, ಬಾಡ, ಮಿರ್ಜಾನ, ಗೋಕರ್ಣ ಹಾಗೂ ಹನೇಹಳ್ಳಿ ಗ್ರಾಮದಲ್ಲಿ ಅವರು ತಮ್ಮ ಪರ ಮಿಂಚಿನ ಪ್ರಚಾರ ನಡೆಸಿ ಮಾತನಾಡಿದರು.
ಸಾವಿರಾರು ಮುಗ್ಧ ಹಿಂದೂ ಯುವಕರನ್ನು ಹೇಮಂತ ನಿಂಬಾಳ್ಕರ್ ಟಾರ್ಗೆಟ್ ಮಾಡಿಕೊಂಡು ಪ್ರಕರಣ ದಾಖಲಿಸಿದರು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಮಾಯಕ ಯುವಕರ ಮೇಲಿನ ಪ್ರಕರಣ ವಾಪಸ್ಸು ಪಡೆಯಿತು. ಹಿಂದೂ ವಿರೋಧಿಯಾಗಿರುವ ಕಾಂಗ್ರೆಸ್ಸನ್ನು ಬುಡಸಮೇತ ಕಿತ್ತೊಗೆಯಬೇಕು ಎಂದರು.
ಇದನ್ನೂ ಓದಿ : ಹರಿಪ್ರಕಾಶ ಕೋಣೆಮನೆ ನೇತೃತ್ವದಲ್ಲಿ ಮಹಾಸಂಪರ್ಕ ಅಭಿಯಾನ
ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ತಿಳಿಸಿ, “ಮೇರಾ ಬೂತ್ ಸಬಸೇ ಮಜಬೂತ್” ಮಾಡಬೇಕು. ಜೊತೆಗೆ ಕೇಂದ್ರ ಸರ್ಕಾರದ ಉಜ್ವಲ್ ಯೋಜನೆ, ಆಯುಷ್ಮಾನ್ ಭಾರತ್, ಮುದ್ರಾ ಯೋಜನೆ, ಜನಧನ ಖಾತೆ, ಪ್ರಧಾನಮಂತ್ರಿ ಬೆಳೆ ವಿಮೆ ಸೇರಿದಂತೆ ಇನ್ನಿತರ ಯೋಜನೆಗಳನ್ನು ಮತದಾರರಿಗೆ ವಿವರಿಸುವ ಮೂಲಕ ನರೇಂದ್ರ ಮೋದಿ ಏಕೆ ಮೂರನೇ ಬಾರಿ ಪ್ರಧಾನಮಂತ್ರಿಯಾಗಬೇಕು ಎಂಬುದನ್ನು ಮನದಟ್ಟು ಮಾಡಿಕೊಡಬೇಕು. ಮನೆ ಮನೆ ಸಂಪರ್ಕ ಮಾಡಿ, ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಮತ ನೀಡುವಲ್ಲಿ ನಮ್ಮ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಪ್ರಧಾನಮಂತ್ರಿಗಳು ಕೇಂದ್ರ ಸರ್ಕಾರದ ಮೂಲಕ ನಮ್ಮ ಜೆಲ್ಲೆಗೆ ಬೆಳೆ ವಿಮೆ ಯೋಜನೆಯಲ್ಲಿ ೧೦೦ ಕೋಟಿ ರೂ. ನೀಡಿದ್ದಾರೆ. ಕೊರೊನಾ ವ್ಯಾಕ್ಸಿನ್ ನೀಡಿ, ನಮ್ಮ ದೇಶದ ಜನರ ಜೀವ ಉಳಿಸಿದ್ದಾರೆ. ಅದರ ಋಣ ತೀರಿಸಬೇಕಾಗಿದೆ. ಪ್ರತಿ ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಲಭಿಸಬೇಕೆಂದು ಪಣತೊಟ್ಟ ನರೇಂದ್ರ ಮೋದಿ ಮನೆ ಮನೆಗೆ ಗಂಗೆ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ. ದೇಶಕ್ಕೆ, ಧರ್ಮಕ್ಕೆ ಒಳ್ಳೆಯದಾಗಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಗಡಿ ರಕ್ಷಣೆ, ಸೈನಿಕರಿಗೆ ಶಕ್ತಿ ತುಂಬಿ ದೇಶದಲ್ಲಿ ಭಯೋತ್ಪಾದನೆ ಸರ್ವನಾಶ ಮಾಡಲು ಮೋದಿಯವರು ಕಾರಣರಾಗಿದ್ದಾರೆ. ಶರವೇಗದಲ್ಲಿ ಅಭಿವೃದ್ಧಿ ಕಾರ್ಯ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಇಡೀ ಜಗತ್ತು ಬೆರಗಾಗುವಂತೆ ಮಾಡಿದ್ದಾರೆ ಎಂದರು.
ಇದನ್ನೂ ಓದಿ : ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಗೆಲುವಿನ ವಿಶ್ವಾಸ
ನಮ್ಮ ಪೂರ್ವಜರ ೫೦೦ ವರ್ಷಗಳ ನಿರಂತರ ಹೋರಾಟ, ತ್ಯಾಗ, ಬಲಿದಾನದ ಪ್ರತೀಕವಾದ ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಾಯಿತು. ನ್ಯಾಯಾಲಯದಲ್ಲಿರುವ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರದಲ್ಲಿ ಬಾಲ ರಾಮ ಪ್ರತಿಷ್ಠಾಪನೆಯಾಗಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಾರಣರಾಗಿದ್ದಾರೆ. ಮೇ ೭ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಮಲದ ಬಟನ್‌ಗೆ ಮತ ಹಾಕುವುದರ ಮೂಲಕ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸಿ, ಮೂರನೆಯ ಬಾರಿಗೆ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಲು ಎಲ್ಲರೂ ಕೈಜೋಡಿಸಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ವಿನಂತಿಸಿಕೊಂಡರು.
ವೇದಿಕೆಯಲ್ಲಿ ಶಾಸಕ ದಿನಕರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ, ಬಿಜೆಪಿ ಮುಖಂಡ ಶಿವಾನಂದ ಹೆಗಡೆ ಕಡತೋಕ, ವೆಂಕಟ್ರಮಣ ಹೆಗಡೆ ಕವಲಕ್ಕಿ, ನಿಕಟ ಪೂರ್ವ ಅಧ್ಯಕ್ಷ ವೆಂಕಟೇಶ ನಾಯಕ, ಸುಬ್ರಾಯ ವಾಳ್ಕೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ಮತ್ತಿತರರು ಇದ್ದರು.