ಕುಮಟಾ: ಮಾತೃ-ಪಿತೃ-ಆಚಾರ್ಯ-ಸಮಾಜ ಋಣ ಈ ರೀತಿಯಾಗಿ ವಿವಿಧ ಋಣಗಳು ಮನುಷ್ಯನ ಮೇಲಿವೆ. ಋಣ ತೀರಿಸಿದರೆ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಹಿಂದೂ ಸಂಪ್ರದಾಯದಲ್ಲಿ ಉಲ್ಲೇಖಿಸಿದ ಮಾತು ಎಂದು ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ಕಾರ್ಯಕ್ರಮ ನಿರೂಪಕ, ವೈದ್ಯ, ಚಿಂತಕ ಡಾ. ನಾ. ಸೋಮೇಶ್ವರ ಹೇಳಿದರು.

ಅವರು ಸದಭಿರುಚಿಯ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸುತ್ತಾ ಬಂದಿರುವ ಸೌರಭ ಟ್ರಸ್ಟ್ ನವರು ಕುಮಟಾದ ಹವ್ಯಕ ಸಭಾ ಮಂಟಪದಲ್ಲಿ ‘ರಜತ ಸಂಭ್ರಮ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವು ಆ ಋಣ ತೀರಿಸಲು ವಿವಿಧ ರೀತಿಯ ಪ್ರಯತ್ನವನ್ನು ಮಾಡುತ್ತೇವೆ. ಸಮಾಜ ನಮಗೆ ಎಲ್ಲವನ್ನೂ ಕೊಟ್ಟಿದೆ. ಸಮಾಜಕ್ಕಾಗಿ ಕೆಲಸ ಮಾಡುವ ಸೌರಭದಂತಹ ಸಂಘಟನೆಯ ಮೂಲಕ ಅದರ ಸದಸ್ಯರು ಸಮಾಜ ಋಣ ತೀರಿಸಲು ಮುಂದಾಗಿರುವುದು ಇತರರಿಗೆ ಆದರ್ಶ ಕಾರ್ಯವಾಗಿದೆ ಎಂದು ಹೇಳಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಭಾರತೀಯ ಸಂಸ್ಕೃತಿಯ ಉತ್ಕೃಷ್ಟವಾದ ಗುರು ಶಿಷ್ಯರ ಬಾಂಧವ್ಯ ಇಲ್ಲಿ ಪ್ರಧಾನವಾಗಿದೆ. ಪಂ.ಗಣಪತಿ ಭಟ್ಟ ಹಾಸಣಗಿ ಗುರುಗಳ ಮಾರ್ಗದರ್ಶನದಲ್ಲಿ ಬೆಳೆದವರು. ತಮ್ಮದೇನೂ ಇಲ್ಲ, ಎಲ್ಲವೂ ತಾಯಿ ಶಾರದೆಗೆ ಅರ್ಪಣೆ ಎಂಬುದಾಗಿ ಸಂಗೀತದ ಆರಾಧನೆ ಮಾಡಿಕೊಂಡು ಬಂದಿದ್ದಾರೆ. ಇಂತಹವರಿಗೆ ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ದೊರೆತಿರುವುದು ಸಂತಸದ ವಿಚಾರ. ಇವರಿಗೆ ಪದ್ಮ ಪ್ರಶಸ್ತಿ ಏಕೆ ಬಂದಿಲ್ಲ ಎಂಬುದೇ ಪ್ರಶ್ನೆಯಾಗಿದೆ. ಆದಷ್ಟು ಶೀಘ್ರವಾಗಿ ಅವರಿಗೆ ಪದ್ಮ ಪ್ರಶಸ್ತಿ ದೊರೆಯುವಂತಾಗಲಿ ಎಂಬುದು ನಮ್ಮೆಲ್ಲರ ಆಗ್ರಹವಾಗಿದೆ ಎಂದು ಡಾ. ಸೋಮೇಶ್ವರ ಹೇಳಿದರು.

ಇದನ್ನೂ ಓದಿ : ಏಷ್ಯನ್ ಚಾಂಪಿಯನಶಿಪ್‌ನಲ್ಲಿ ರಾಜೇಶ ಮಡಿವಾಳ ಬೆಳ್ಳಿ ಪದಕ

ಈ ಸಂದರ್ಭದಲ್ಲಿ ತಾನಸೇನ್ ಪ್ರಶಸ್ತಿ ಪುರಸ್ಕೃತ ನಾಡಿನ ಹಿರಿಯ ಹಿಂದುಸ್ತಾನಿ ಗಾಯಕ ಪಂ. ಗಣಪತಿ ಭಟ್ಟ ಹಾಸಣಗಿಯವರಿಗೆ “ಸೌರಭ ರಾಷ್ಟ್ರೀಯ ಸಮ್ಮಾನ್” ಪ್ರಶಸ್ತಿ ಪ್ರದಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪಂ. ಗಣಪತಿ ಭಟ್ಟ ಹಾಸಣಗಿ, ನಾನು ಕಾಲೇಜು ದಿನಗಳಲ್ಲಿಯೇ ಸಂಗೀತ ಕಲಿಯಲು ಮುಂದಾದೆ. ನನ್ನೊಳಗಿದ್ದ ಬೇಡಗಳನ್ನು ತೆಗೆದು, ಬೇಕಾಗಿದ್ದನ್ನು ತಿದ್ದಿ ತೀಡಿ ಈ ರೀತಿಯಾಗಿ ರೂಪಿಸಿರುವುದರಲ್ಲಿ ಗುರುಗಳ ಕಾರ್ಯ ಮಹತ್ವದ್ದು. ಹಾಗಾಗೀ ನನ್ನ ಹೆಚ್ಚುಗಾರಿಕೆ ಏನೂ ಇಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಸೌರಭದ ಅಧ್ಯಕ್ಷ ಶ್ರೀಕಾಂತ ಭಟ್ಟ, ಆರ್ಥಿಕ, ರಾಜಕೀಯ, ಇತರ ಯಾವುದೇ ಉದ್ದೇಶವಿಲ್ಲದೆ, ಕಲಾಸಕ್ತರ, ಕಲಾವಿದರ, ಪ್ರಾಯೋಜಕರ ನೆರವಿನಿಂದ ನಮ್ಮ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುತ್ತಾ ಬಂದಿದ್ದೇವೆ ಎಂಬ ಸಂತೃಪ್ತಿ ನಮ್ಮ ಸಂಘಟನೆಗಿದೆ. ಈ ಸಂಘಟನೆಯು ಯಶಸ್ವಿಯಾಗಿ ರಜತ ಸಂಭ್ರಮ ಆಚರಿಸಿದ್ದು ನಿಮ್ಮೆಲ್ಲರ ಸಹಕಾರದಿಂದ ಎಂದು ಎಲ್ಲರ ಸಹಕಾರ ಸ್ಮರಿಸಿದರು.

ಉಪಾಧ್ಯಕ್ಷ ಮೋಹನ ಹೆಗಡೆ ಸೌರಭದ ಹಿನ್ನೋಟ ಹಾಗೂ ಮುನ್ನೋಟ ಸಭೆಗೆ ಪ್ರಸ್ತುತಪಡಿಸಿದರು.
ಡಾ. ಅನಿಲ ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಅರುಣ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ಗಣೇಶ ಜೋಶಿ ಸಂಕೊಳ್ಳಿ ನಿರೂಪಿಸಿದರು. ಎಸ್. ವಿ ಹೆಗಡೆ ವಂದಿಸಿದರು. ಸದಸ್ಯರುಗಳಾದ ಜಯಂತ ಮಣಕಿಕರ, ವಿನಾಯಕ ಹೆಗಡೆಕಟ್ಟೆ, ಆನಂದ ಹೆಗಡೆ, ಕಿರಣ ಭಟ್ಟ, ಡಿ.ಜಿ ಹೆಗಡೆ ಸಹಕರಿಸಿದರು.

ರಜತ ಸಂಭ್ರಮ ಸೌರಭದ ಅಂಗವಾಗಿ ಬೆಳಿಗ್ಗೆ ‘ಉದಯರಾಗ ಸೌರಭ’ ಕಾರ್ಯಕ್ರಮದಲ್ಲಿ ಖ್ಯಾತ ಹಿಂದುಸ್ತಾನಿ ಗಾಯಕ ಪಂ. ಶ್ರೀಪಾದ ಹೆಗಡೆ ಕಂಪ್ಲಿ ಅವರು ಉದಯರಾಗದಲ್ಲಿ ವಸಂತಮುಖಾರಿ ರಾಗವನ್ನು ಪ್ರಸ್ತುತಪಡಿಸಿದರು. ‘ಕಾವ್ಯಾಭಿನಯ ಸೌರಭ’ ಕಾರ್ಯಕ್ರಮದಲ್ಲಿ ಡಾ. ಶ್ರೀಪಾದ ಭಟ್ ಪರಿಕಲ್ಪನೆಯ ‘ಹಕ್ಕಿ ಮತ್ತು ಅವಳು’ ಕಾವ್ಯಾಭಿನಯವನ್ನು ಉಡುಪಿಯ ಕೋಟದ ಸುವಿಕಾ ಸಾಂಸ್ಕೃತಿಕ ಸಂಘಟನೆಯ ಕಾವ್ಯಾ ಹಂದೆ ಪ್ರಸ್ತುತಪಡಿಸಿದರು. ಯುವ ಸಾಹಿತಿ, ಪ್ರಮೋದ ಮೋಹನ ಹೆಗಡೆಯವರ ಜೊತೆಗೆ ‘ಯುವ ಸಾಹಿತ್ಯ ಸೌರಭ’ ಕಾರ್ಯಕ್ರಮ ನಡೆಯಿತು. ‘ಚಿಂತನ ಸೌರಭ’ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ, ಚಿಂತಕ, ಸಾಹಿತಿ, ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ಖ್ಯಾತಿಯ ಡಾ. ನಾ. ಸೋಮೇಶ್ವರ ಅವರು ಭಾರತೀಯತೆಯ ಹಿರಿಮೆ ಘರಿಮೆ ವಿಷಯದ ಕುರಿತು ಉಪನ್ಯಾಸ ನೀಡಿದರು. ಯಕ್ಷ-ಗಾನ- ವ್ಯಾಖ್ಯಾನ ಸೌರಭ ಕಾರ್ಯಕ್ರಮದಲ್ಲಿ ವಿದ್ವಾನ್ ಗಣಪತಿ ಭಟ್ಟ ಯಲ್ಲಾಪುರ, ವಿದ್ವಾನ್ ಕೆ. ಶ್ರೀಪತಿ ಉಪಾಧ್ಯಾಯ, ಮೃದಂಗದಲ್ಲಿ ಬಾಲಚಂದ್ರ ಭಾಗ್ವತ, ವಯೋಲಿನ್ ನಲ್ಲಿ ಶರ್ಮಿಳಾ ರಾವ್ ಉಡುಪಿ ಪಾಲ್ಗೊಂಡಿದ್ದರು. ಎಂ.ಎ ಹೆಗಡೆ ದಂಟಕಲ್ ವಿರಚಿತ ‘ದಶಾವತಾರದ ಅನನ್ಯ ಪ್ರಸ್ತುತಿ’ ಲೀಲಾವತಾರಮ್ ರೂಪಕವನ್ನು, ರಾಷ್ಟ್ರೀಯ ಖ್ಯಾತಿಯ ಬಾಲ ಪ್ರತಿಭೆ ತುಳಸಿ ಹೆಗಡೆ ಯಕ್ಷ ರೂಪಕದಲ್ಲಿ ರಂಜಿಸಿದಳು. ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಮೃದಂಗದಲ್ಲಿ ಶಂಕರ ಭಾಗ್ವತ್ ಯಲ್ಲಾಪುರ, ಚಂಡೆಯಲ್ಲಿ ವಿಘ್ನೇಶ್ವರ ಕೆಸರಕೊಪ್ಪ, ಪ್ರಸಾದನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕರಿಸಿದರು.

ಸಭಾ ಕಾರ್ಯಕ್ರಮದ ನಂತರ ನಡೆದ ‘ಸಂಧ್ಯಾ ರಾಗ ಸೌರಭ’ ಕಾರ್ಯಕ್ರಮದಲ್ಲಿ ಪಂ. ಗಣಪತಿ ಭಟ್ಟ ಹಾಸಣಗಿಯವರು ಯಮನ್ ರಾಗ ಪ್ರಚುರಪಡಿಸಿದರು. ತಬಲಾದಲ್ಲಿ ಶ್ರೀಧರ ಮಾಂಡ್ರೆ, ಸಂವಾದಿನಿಯಲ್ಲಿ ಸತೀಶ ಭಟ್ಟ ಹೆಗ್ಗಾರ್ ಸಾಥ್ ನೀಡಿದ್ದರು. ನೃತ್ಯ ಸೌರಭ ಕಾರ್ಯಕ್ರಮದಲ್ಲಿ ದೆಹಲಿ ದೂರದರ್ಶನ ‘ಬಿ’ ಶ್ರೇಣಿಯ ಕಲಾವಿದೆ ದೀಪ್ತಿ ವಿ. ಹೆಗಡೆ, ವಿದುಷಿ ಡಾ. ಜಯಶ್ರೀ ಶ್ರೀಕಾಂತ್ ಭಟ್ಟ ಬಳ್ಳಾರೆ, ಸೃಷ್ಟಿ ನೃತ್ಯ ಕಲಾ ಕುಟೀರ ಉಡುಪಿಯ ಡಾ. ಮಂಜರಿ ಚಂದ್ರ ಪುಷ್ಪರಾಜ್ ಹಾಗೂ ಅವರ ಶಿಷ್ಯರಿಂದ ಭರತನಾಟ್ಯ ಪ್ರಸ್ತುತಿ “ಸಮರ್ಪಣಾ” ಕಾರ್ಯಕ್ರಮ ಜನರ ಮನ ಗೆದ್ದಿತು.