ಭಟ್ಕಳ: ಧರ್ಮಸ್ಥಳದ ಕನ್ಯಾಡಿಯ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ ಏಪ್ರಿಲ್ ೧೦ ರಿಂದ ೧೭ ತನಕ ೬೪ ನೇ ವರ್ಷದ ಶ್ರೀರಾಮತಾರಕ ಮಂತ್ರ- ಸಪ್ತಾಹ ಸಮಾರಂಭ ಹಾಗೂ ಶ್ರೀರಾಮ ಕ್ಷೇತ್ರದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಬೃಹ್ಮರಥೋತ್ಸವ ಆಯೋಜಿಸಲಾಗಿದೆ.

ಇದನ್ನೂ ಓದಿ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಭಟ್ಕಳದ ಆಸರಕೇರಿಯಲ್ಲಿ ನಾಮಧಾರಿ ಗುರುಮಠದ ನಿಚ್ಛಲಮಕ್ಕಿ ವೆಂಕಟರಮಣ ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಅರುಣ ನಾಯ್ಕ ಮಾಹಿತಿ ನೀಡಿದರು. ನಾಮಧಾರಿ ಸಮಾಜದ ಗುರುಗಳಾದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಕನ್ಯಾಡಿಯ ಶ್ರೀರಾಮ ಕ್ಷೇತ್ರದಲ್ಲಿ ನಡೆಯುವ ಈ ಜಾತ್ರಾ ಮಹೋತ್ಸವವು ಮಾರ್ಚ ೧೦ ಬುಧವಾರ ಬೆಳಿಗ್ಗೆ ೯-೩೦ಕ್ಕೆ ಶ್ರೀರಾಮನಾಮ ಸಪ್ತಾಹದ ಅಖಂಡ
ನಂದಾದೀಪವನ್ನು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಜ್ಯೋತಿ ಬೆಳಗಿಸುವದರ ಮೂಲಕ ಉದ್ಘಾಟಿಸುವರು. ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಂತರ ಸಂಜೆ ೭ ಗಂಟೆಗೆ ಬಲಿ ಉತ್ಸವ, ಮಹಾಪೂಜೆ ನಡೆಯುವುದು ಎಂದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಮಾರ್ಚ್ ೧೧ ರಂದು ಮಧ್ಯಾಹ್ನ ಶ್ರೀ ನಿತ್ಯಾನಂದ ಸ್ವಾಮಿ, ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಶಿರಡಿ ಸಾಯಿ ಬಾಬಾ ಗುರುಗಳಿಗೆ ಪೂಜೆ ನಡೆಯುವುದು. ಸಂಜೆ ಗುರುದೇವರ ಉತ್ಸಮೂರ್ತಿಗಳ ಬಲಿ ಉತ್ಸವ ಪೂಜೆ ನಡೆಯುವುದು. ಮಾರ್ಚ್ ೧೨ ರಂದು ನವಗೃಹ ಶಾಂತಿ ಹೋಮ, ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯುವುದು. ಸಂಜೆ ಶ್ರೀ ರಾಮ ದೇವರ ರಜತ ಪಾಲಕಿ ಉತ್ಸವ ಜರುಗುವುದು. ಮಾರ್ಚ್ ೧೩ ರಂದು ಪುಷ್ಪರಥೋತ್ಸವ, ಮಾರ್ಚ್ ೧೪ ರಂದು ದುರ್ಗಾಪರಮೇಶ್ವರಿ ದೇವಿಯ ಮೂರ್ತಿ ಬಲಿ ಉತ್ಸವ, ಪೂಜೆಯ ನಂತರ ಚಂದ್ರ ಮಂಡಲ ರಥೋತ್ಸವ, ಮಾರ್ಚ್ ೧೫ ರಂದು ಬೆಳ್ಳಿ ರಥೋತ್ಸವ, ಮಾರ್ಚ್ ೧೬ ರಂದು ಸಾಯಂಕಾಲ ಶ್ರೀ ದತ್ತಾತ್ರೇಯ ಮೂರ್ತಿ ಮತ್ತು ಆಂಜನೇಯ ದೇವರ ಮೂರ್ತಿ ಬಲಿ ಉತ್ಸವ ಮತ್ತು ಶ್ರೀ ಹನುಮಾನ್ ರಥೋತ್ಸವ ನಡೆಯುವುದು ಎಂದು ತಿಳಿಸಿದರು.

ಮಾರ್ಚ್ ೧೭ರಂದು ಬೆಳಿಗ್ಗೆ ೬ ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ನಂತರ ಮಧ್ಯಾಹ್ನ ಮಹಾಪೂಜೆಯ ನಂತರ ಅನ್ನಸಂತರ್ಪಣೆ ಸಾಯಂಕಾಲ ಶ್ರೀ ಬಲಿ, ಭೂತಬಲಿ, ಶ್ರೀ ದೇವರ ಪಾಲಕಿ ಬಲಿ ಉತ್ಸವ ನಡೆಯುತ್ತದೆ. ನಂತರ ಮಹಾ ಬ್ರಹ್ಮರಥೋತ್ಸವ ಜರುಗುವುದು. ರಾತ್ರಿ ಕ್ಷೇತ್ರದ ರಕ್ತೇಶ್ವರಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಗುರುಮಠ ದೇವಸ್ಥಾನದ ಕಾರ್ಯದರ್ಶಿ ಡಿ.ಎಲ್.ನಾಯ್ಕ, ದೇವಸ್ಥಾನದ ಉಪಾಧ್ಯಕ್ಷ ಎಂ.ಕೆ.ನಾಯ್ಕ, ಆಡಳಿತ ಮಂಡಳಿಯ ಗೌರವಾಧ್ಯಕ್ಷ ಕೃಷ್ಣ ನಾಯ್ಕ, ಶ್ರೀರಾಮ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ಆಡಳಿತ ಮಂಡಳಿಯ ಸದಸ್ಯರಾದ ನಾಗೇಶ ನಾಯ್ಕ, ಹೆಬಳೆ ಶ್ರೀಧರ ನಾಯ್ಕ, ಆರ್.ಜಿ.ನಾಯ್ಕ, ವೆಂಕಟೇಶ ತಲಗೋಡು, ಶ್ರೀಧರ ಎಸ್.ಬಿ.ಐ. ಮತ್ತಿತರರು ಇದ್ದರು.