ಹೊನ್ನಾವರ: ಕಾಸರಕೋಡ ವಾಣಿಜ್ಯ ಬಂದರು ಯೋಜನೆಯನ್ನು ತೆರೆಮರೆಯಲ್ಲಿ ಬೆಂಬಲಿಸುತ್ತಿರುವ ಜನಪ್ರತಿನಿಧಿಗಳು ಬಡಜನರ ವಿರುದ್ದ ಚೆಲ್ಲಾಟವಾಡುತ್ತಿದ್ದಾರೆ ಎಂದು ಮೀನುಗಾರ ಮುಖಂಡರು ಮತ್ತು ಸ್ಥಳೀಯ ಮೀನುಗಾರರು ಆಡಳಿತ ಶಾಹಿಗಳ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಬಂದರು ಕಾಮಗಾರಿ ವಿರೋಧಿಸಿದ ಮೀನುಗಾರರ ವಿರುದ್ಧ ದೂರು

ಕಾಸರಕೋಡ ಸೆಂಟ್ ಜೋಸೆಪ್ ಸಭಾಂಗಣದಲ್ಲಿ ರವಿವಾರ ಆಯೋಜಿಸಿದ ಕಾಸರಕೋಡದ ವಾಣಿಜ್ಯ ಬಂದರು ವಿರೋಧಿ ಹೋರಾಟವನ್ನು ತೀವ್ರ ಗೊಳಿಸಲು ಕರಾವಳಿ ಜಿಲ್ಲೆಗಳ ಮೀನುಗಾರ ಪ್ರಮುಖರ ಮತ್ತು ಮೀನುಗಾರರ ಸಭೆಯಲ್ಲಿ ನಿರ್ಣಯಿಸಲಾಯಿತು. ಕಾಸರಕೋಡ ಮೀನುಗಾರ ಸಂಘಟನೆಯ ವಿವನ್ ಫರ್ನಾಂಡೀಸ್ ಮಾತನಾಡಿ, ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಶೋಷಣೆ ತಪ್ಪಿಸಬಹುದು. ಕಾಸರಕೋಡ ಟೊಂಕದ ವಾಣಿಜ್ಯ ಬಂದರಿಗೆ ಬಂದರು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕರ್ನಾಟಕ ಸರಕಾರವೇ ಇಲ್ಲಿನ ಎಲ್ಲ ಅವಾಂತರಗಳಿಗೆ ಹೊಣೆಯಾಗಿದೆ. ಕರ್ನಾಟಕ ಸರಕಾರ ಮನಸ್ಸು ಮಾಡಿದರೆ ಇದನ್ನು ತಡೆಯಬಹುದಿತ್ತು. ಆದರೆ ಆಗ ಬಂದರು ಯೋಜನೆಯನ್ನು ರದ್ದುಗೊಳಿಸುತ್ತೇವೆ ಎಂದು ಆಶ್ವಾಸನೆ ನಿಡಿದವರು ಈಗ ಯೋಜನೆಗೆ ಬೆಂಬಲ ನೀಡುತ್ತಿದ್ದಾರೆ. ಇದರಿಂದ ಮೀನುಗಾರರು ಸಮಸ್ಯೆಯಲ್ಲಿ ಸಿಲುಕುವಂತಾಗಿದೆ’ ಎಂದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ರಾಷ್ಟ್ರೀಯ ಮೀನುಗಾರರ ಸಂಘಟನೆಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಮಾತನಾಡಿ, ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಕರಾವಳಿಯ ಧಾರಣಾ ಶಕ್ತಿಯನ್ನು ಮೀರಿ ವಾಣಿಜ್ಯ ಬಂದರುಗಳನ್ನು ನಿರ್ಮಿಸಲಾಗುತ್ತಿದೆ. ಹಂತಹಂತವಾಗಿ ಮೀನುಗಾರರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ಕಾಸರಕೋಡ ವಾಣಿಜ್ಯ ಬಂದರು ನಿರ್ಮಾಣದಿಂದ ಮೀನುಗಾರರು ನೆಲೆಕಳೆದುಕೊಳ್ಳುವರು. ಚುನಾವಣಾ ನೀತಿ ಸಂಹಿತೆ ಜಾರಿಯಾದ ಸಂದರ್ಭದಲ್ಲಿ ಅಧಿಕಾರಿಗಳು ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ವಾಣಿಜ್ಯ ಕಂಪನಿಯ ಬಂದರು ನಿರ್ಮಾಣ ಕಾಮಗಾರಿಯನ್ನು ನಡೆಸಲು, ಮೀನುಗಾರರ ಧ್ವನಿ ಅಡಗಿಸಲು ಮುಂದಾಗಿದ್ದಾರೆ. ಹೋರಾಟ ಮಾಡಿದ ಮೀನುಗಾರರ ಮೇಲೆ ಸುಳ್ಳು ಕೇಸು ಹಾಕಲಾಗಿದೆ ಎಂದು ದೂರಿದರು.

ಇದನ್ನೂ ಓದಿ : ಅತ್ಯಾಚಾರ ಆರೋಪಿ ಬಂಧನ

ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಮಾತನಾಡಿ, ಕಾಸರಕೋಡದ ಜನರು ತಮ್ಮ ಬದುಕಿಗಾಗಿ ಹೋರಾಟ ಮಾಡುತ್ತ ಬಂದಿದ್ದಾರೆ. ಆಗ ಮೀನುಗಾರರಿಗೆ ಸಹಕರಿಸಿದ ಸಚಿವ ಮಂಕಾಳ ವೈದ್ಯ ಈಗ ವಿರೋಧಿಸುತ್ತಿದ್ದಾರೆ. ವಾಣಿಜ್ಯ ಬಂದರಿಗೆ ಸ್ಥಳ ಬಿಟ್ಟುಕೊಡದಂತೆ ರಾಜಕೀಯ ಬದಿಗಿಟ್ಟು ಹೋರಾಟ ನಡೆಸಬೇಕು. ಕಡಲತೀರವನ್ನು ಕಿತ್ತುಕೊಳ್ಳುವ ಜಿಲ್ಲಾಡಳಿತಕ್ಕೆ ಧಿಕ್ಕಾರ ಎಂದರು.
ಮೀನುಗಾರ ಮುಖಂಡ ರಾಜು ತಾಂಡೇಲ ಮಾತನಾಡಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ನಡೆಸಬೇಕು. ಈ ಯೋಜನೆಯನ್ನು ಮಾಡುವಾಗ ಸಿಆರ್‌ಝಡ್ ಅನುಮತಿ ಪಡೆದಿಲ್ಲ. ಯಾರೇ ಆಸೆ ತೋರಿಸಿದರೂ ಬಲಿ ಆಗಬಾರದು. ಕಾಸರಕೋಡದಲ್ಲಿ ಹೆಚ್ಚಿನ ಜನರು ಸೇರಿ ಹೋರಾಟ ನಡೆಸಬೇಕು ಎಂದರು.

ಅಖಿಲ ಭಾರತ ಕೊಂಕಣ ಖಾರ್ವಿ ಮಹಾಜನ ಸಭಾದ ಅಧ್ಯಕ್ಷ ಮೋಹನ ಬಾನಾವಳಿಕರ ಮಾತನಾಡಿ, ವಾಣಿಜ್ಯ ಬಂದರು ಯೋಜನೆಯಿಂದ ತಾಲೂಕಿನ ಎಲ್ಲ ಭಾಗಗಳಲ್ಲಿಯೂ ದುಷ್ಪರಿಣಾಮ ಆಗುತ್ತದೆ. ಕಾಸರಕೋಡ ಜನತೆಯ ಜೊತೆ ಇತರ ಭಾಗದ ಜನರೂ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಪ.ಪಂ. ಮಾಜಿ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ, ಕಾಸರಕೋಡ ಟೊಂಕದ ಹೋರಾಟ ಯಶಸ್ಸಿಯಾದರೆ ಉಳಿದ ಬಂದರುಗಳ ಹೋರಾಟ ಯಶಸ್ಸಿಯಾಗುವುದು. ಸರ್ಕಾರ ಹೋರಾಟಗಾರರ ಮೇಲೆ ಕೇಸು ಹಾಕುತ್ತಿದೆ. ಕೇಸಿಗೆ ಹೆದರುವ ಅಗತ್ಯವಿಲ್ಲ. ತಾಲೂಕಿನ ಜನರು ಒಟ್ಟಾಗಿದ್ದರೆ ಎಲ್ಲವನ್ನೂ ಎದುರಿಸಲು ಸಾಧ್ಯ ಎಂದರು.

ಮೀನುಗಾರ ಸಂಘಟನೆಯ ಹಮ್ಜಾ ಪಟೇಲ ಮಾತನಾಡಿ, ಎಲ್ಲಾ ರಾಜಕೀಯ ಪಕ್ಷಗಳೂ ಮೋಸ ಮಾಡುತ್ತಿವೆ. ನಮಗೆ ನ್ಯಾಯ ಸಿಗದಿದ್ದರೆ ಚುನಾವಣಾ ಬಹಿಷ್ಕಾರ ಮಾಡುತ್ತೇವೆ ಎಂದರು.

ರಾಜೇಶ ತಾಂಡೇಲ, ರಾಜು ತಾಂಡೇಲ, ಜಗದೀಶ ತಾಂಡೇಲ, ಸುರೇಶ ಮೇಸ್ತ ಇತರರು ಮಾತನಾಡಿ ವಾಣಿಜ್ಯ ಬಂದರು ಯೋಜನೆಯನ್ನು ವಿರೋಧಿಸಿದರು.