ಕುಮಟಾ: ತಾಲೂಕಿನಲ್ಲಿ ಬುಧವಾರ ಬೆಳಗಿನ ಜಾವದಿಂದ ಆರಂಭವಾದ ಆರ್ದ್ರಾ ಮಳೆ ಗುರುವಾರ ಕೂಡ ಬಿರುಸಿನಿಂದ ಸುರಿದಿದೆ. ಬುಧವಾರ ಬೆಳಗಿನ ಜಾವದಿಂದ ಗುರುವಾರ ಬೆಳಗಿನ ಜಾವದ ವರೆಗೆ ತಾಲೂಕಿನಲ್ಲಿ ೧೦೦.೦೪ ಮೀ.ಮೀ ಮಳೆಯಾಗಿದೆ.
ಕುಮಟಾ-ಶಿರಸಿ ಹೆದ್ದಾರಿ ಜಲಾವೃತ : ಫೇಸ್‌ಬುಕ್ ವಿಡಿಯೋ / ಇನ್ಸ್ಟಾಗ್ರಾಂನಲ್ಲಿ ವಿಡಿಯೋ
ಘಟ್ಟದ ಮೇಲಿನ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಘಟ್ಟದ ಮೇಲಿನಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಚಂಡಿಕಾ ಮತ್ತು ಅಘನಾಶಿನಿ ನದಿ ರೌದ್ರಾವತಾರ ತಳೆದಿತ್ತು. ಕೆರೆ, ಕೊಳ್ಳಗಳು ನೀರಿನಿಂದ ತುಂಬಿ ಹರಿಯಲಾರಂಭಿಸಿತು. ಇದರಿಂದ ನದಿ ಪಾತ್ರದಲ್ಲಿರುವ ನಿವಾಸಿಗಳು ಆತಂಕಕ್ಕೆ ಒಳಗಾದರು.
ಇದನ್ನೂ ಓದಿ : ಭಾರಿ ಮಳೆಗೆ ಮಲೆನಾಡಿನ ಸಂಪರ್ಕ ಕಡಿತ
ಕುಮಟಾದಿಂದ ಶಿರಸಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿರುವ ಕತಗಾಲ ಬಳಿಯ ಟೆಲಿಪೋನ್ ಎಕ್ಸ್ಚೆಂಜ್ ಸಮೀಪ ಸಣ್ಣ ಚರಂಡಿಯೊಂದು ಅನಾದಿ ಕಾಲದಿಂದ ಇದೆ. ಗುರವಾರ ಬೆಳಗಿನ ಜಾವ ೪ ಗಂಟೆ ಸುಮಾರಿಗೆ ಚಂಡಿಕಾ ಹೊಳೆಯ ನೀರು ಚರಂಡಿಗೆ ನುಗ್ಗಿತು. ಪರಿಣಾಮ ಅಕ್ಕಪಕ್ಕದ ತೋಟವನ್ನೆಲ್ಲ ಆವರಿಸಿತು. ಜತೆಗೆ ರಸ್ತೆಯ ಮೇಲೆ ಮೊಣಕಾಲಿಗಿಂತ ಎತ್ತರದಲ್ಲಿ ಹರಿಯಲಾರಂಭಿಸಿತು. ಇದರಿಂದ ಈ ಮಾರ್ಗದಲ್ಲಿ ಓಡಾಡುವ ಬಸ್, ಕಾರು ಸೇರಿದಂತೆ ಇನ್ನಿತರ ವಾಹನಗಳು ಸಂಚಾರ ಸ್ಥಗಿತಗೊಳಿಸಿತು. ಸುಮಾರು ೩ ತಾಸುಗಳ ಕಾಲ ರಸ್ತೆ ಅಕ್ಕಪಕ್ಕ ಸಾಲುಗಟ್ಟಿ ನಿಲ್ಲಬೇಕಾಯಿತು. ಇಂತಹ ಸ್ಥಿತಿಯ ಮಧ್ಯೆಯೂ ಖಾಸಗಿ ಬಸ್‌ವೊಂದರ ಚಾಲಕ ಬಸ್ ಚಲಾಯಿಸಿಕೊಂಡು ಬಂದ ಸಂದರ್ಭದಲ್ಲಿ ಬಸ್ ಸೀಜ್ ಆಗಿ ಸೆಳೆತದ ನೀರಲ್ಲಿ ನಿಂತುಕೊಂಡಿತು. ಬಸ್ಸಿನಲ್ಲಿ ಸಿಲುಕಿದ ಪ್ರಯಾಣಿಕರನ್ನು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಗಜಾನನ ಪೈ ಹಾಗೂ ಅವರ ಸ್ನೇಹಿತರು ದೋಣಿಯ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ಕರೆತಂದರು. ನಂತರ ಪ್ರವಾಹದ ನೀರಿನಲ್ಲಿ ಸುಲುಕಿದ್ದ ಈ ಬಸ್‌ನ್ನು ಡೋಜರ್ ಯಂತ್ರದ ಮೂಲಕ ಎಳೆದು ಸುರಕ್ಷಿತ ಸ್ಥಳಕ್ಕೆ ತಂದು ನಿಲ್ಲಿಸಲಾಯಿತು.
ಇದನ್ನೂ ಓದಿ : ಖಾಸಗಿ ಬಸ್ ಪ್ರಯಾಣಿಕನ ಮೇಲೆ ಹಲ್ಲೆ ಪ್ರಕರಣಕ್ಕೆ ಹೊಸ ತಿರುವು
ಇದಕ್ಕೂ ಮುನ್ನ ಕತಗಾಲದ ಕಬ್ಬರಗಿ ಕ್ರಾಸ್ ಬಳಿ ರಸ್ತೆ ಅಂಚಿನ ಧರೆ ಕುಸಿದು ರಸ್ತೆಯ ಮೇಲೆ ಬಿದ್ದಿದ್ದ ಮಣ್ಣನ್ನು ರಾತ್ರಿ ತೆರವುಗೊಳಿಸಲಾಗಿತ್ತು. ಕತಗಾಲ ಉಪ್ಪಿನಪಟ್ಟಣ ಸೇತುವೆಯ ಮೇಲೆ ನೀರು ತುಂಬಿ ಹರಿದ ಪರಿಣಾಮ ಕತಗಾಲ ಶಿರಗುಂಜಿ ರಸ್ತೆ ಬಂದ್ ಆಗಿತ್ತು. ಹೋಲವಳ್ಳಿಯಿಂದ ಕಲವೆ ಬಂಗಣೆ ಮೋರ್ಸೆ ಸಂಪರ್ಕ ರಸ್ತೆಯು ನೀರು ತುಂಬಿದ್ದರಿಂದ ಬಸ್ ಸಂಚಾರ ಸ್ಥಗಿತಗೊಳಿಸಲಾಯಿತು.
ಇದನ್ನೂ ಓದಿ : ಜುಲೈ ೪ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ
ಕಾಳಜಿ ಕೇಂದ್ರಕ್ಕೆ ಸ್ಥಳಾಂತರ :
ಮಿರ್ಜಾನ್ ಖೈರೆ, ಕೋಡ್ಕಣಿಯ ಐಗಳಕುರ್ವೆ, ಹೆಗಡೆ, ದಿವಗಿ ಮುಂತಾದ ಸ್ಥಳಗಳಲ್ಲಿ ಅಘನಾಶಿನಿ ನದಿ ನೀರಿನ ಮಟ್ಟ ಹೆಚ್ಚಾಗಿತ್ತು. ಕೋನಳ್ಳಿಯ ಗುಡ್ನಕಟ್ಟು ಬಳಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಆ ಭಾಗದ ೩೦ ಕುಟುಂಬದ ೫೯ ಜನರನ್ನು ಕೊನಳ್ಳಿ ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ ಪ್ರವೀಣ ಕಾರಂಡೆ ತಿಳಿಸಿದ್ದಾರೆ. ಕುಮಟಾ ತಾಲೂಕಿನಲ್ಲಿ ಮಧ್ಯಾಹ್ನದ ನಂತರ ಮಳೆಯೊಂದಿಗೆ ಗಾಳಿ ಬೀಸುವಿಕೆ ಸ್ವಲ್ಪಮಟ್ಟಿಗೆ ನಿಂತಿದೆ. ಇದರಿಂದ ಏರಿದ್ದ ಹೊಳೆ, ನದಿಯ ನೀರು ಇಳಿಯುತ್ತಿದೆ. ಆದರೂ ಮುನ್ನೆಚ್ಚರಿಕೆ ಕ್ರಮವನ್ನು ನಾವು ತೆಗೆದುಕೊಂಡಿದ್ದೇವೆ ಎಂದು ತಹಶೀಲ್ದಾರರು ತಿಳಿಸಿದ್ದಾರೆ.
ಇದನ್ನೂ ಓದಿ : ಹರೆರಾಮ ಡೆಂಗ್ಯೂ ಜ್ವರಕ್ಕೆ ಬಲಿ