ಭಟ್ಕಳ: ಇಲ್ಲಿನ ಪ್ರಸಿದ್ಧ ಶಿರಾಲಿ ಸಾರದಹೊಳೆ ಶ್ರೀ ಹಳೇಕೋಟೆ ಹನುಮಂತ ದೇವಸ್ಥಾನವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಆಡಳಿತ ಮಂಡಳಿ ಮುಂದಾಗಿದೆ. ಈ ನಿಟ್ಟಿನಲ್ಲಿ ದಾನಿಗಳ ಸಹಕಾರವನ್ನು ಹಳೇಕೋಟೆ ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಕೆ. ನಾಯ್ಕ ಕೋರಿದ್ದಾರೆ.
ಇದನ್ನೂ ಓದಿ : ಯುವಕ ನೇಣಿಗೆ ಶರಣು
ಅವರು ದೇವಸ್ಥಾನದ ಸಭಾಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹಿಂದುಳಿದ ವರ್ಗದವರ ಆಡಳಿತಕ್ಕೊಳಪಟ್ಟು ಪ್ರಸಿದ್ಧಿ ಪಡೆದಿರುವ ದೇವಸ್ಥಾನ ಇದಾಗಿದೆ. ದೇವಸ್ಥಾನ ಹಾಗೂ ಇಲ್ಲಿನ ಮೂಲಭೂತ ಸೌಕರ್ಯವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಿವೇಶನ ಖರೀದಿ ಪ್ರಯತ್ನ ನಡೆದಿದೆ. ದೇವಸ್ಥಾನದ ಎದುರಿನ ಸಭಾಭವನವನ್ನು ಸ್ಥಳಾಂತರಿಸುವ ಚಿಂತನೆ ಇದೆ. ಪರ್ಯಾಯ ಕ್ರಮದ ಬಗ್ಗೆ ಸಮಾಲೋಚನೆ ನಡೆದಿದೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಅನತಿ ದೂರದಲ್ಲಿ ಇರುವ ಐತಿಹಾಸಿಕ ಹಳೇಕೋಟೆಯನ್ನು ಸೇರಿಸಿಕೊಂಡು ಇಡೀ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ಚರ್ಚಿಸಲಾಗಿದೆ ಎಂದರು.
ಈ ವಿಡಿಯೋ ನೋಡಿ : ಮಿರ್ಚಿ ಭಜಿ, ಮಂಡಕ್ಕಿ ಸವಿದ ಹ್ಯಾಟ್ರಿಕ್ ಹೀರೊ https://fb.watch/qXPhLxIDmU/?mibextid=Nif5oz
ದೇವಸ್ಥಾನದ ಸುತ್ತ ಸುಭದ್ರ ಕಂಪೌಂಡ್, ಪ್ರವಾಸಿಗರ ಅನುಕೂಲಕ್ಕಾಗಿ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸುವ ಗುರಿ ಇದೆ. ದೇಶ-ವಿದೇಶಗಳಲ್ಲಿ ನೆಲೆಸಿರುವ ಭಕ್ತರನ್ನು ಒಂದೆಡೆ ಸೇರಿಸಿ ಚಿಂತನ-ಮಂಥನ ಕಾರ್ಯಕ್ರಮ ನಡೆಸುವ ಅಭಿಲಾಷೆಯೂ ಇದೆ ಎಂದರು.
ಸರಕಾರದಿಂದ 1 ಕೋ.ಅನುದಾನ:
ಸಾರದಹೊಳೆ ಶ್ರೀ ಹಳೇಕೋಟಿ ಹನುಮಂತ ದೇವಸ್ಥಾನದ ಅಭಿವೃದ್ಧಿಗೆ ಈ ಹಿಂದೆ ಶಾಸಕರಾಗಿದ್ದ ಸುನೀಲ್ ನಾಯ್ಕ ಪ್ರಯತ್ನದಲ್ಲಿ 50 ಲಕ್ಷ ರೂ. ಅನುದಾನ ಬಂದಿತ್ತು. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪ್ರಯತ್ನದೊಂದಿಗೆ ಸರಕಾರದಿಂದ 1 ಕೋ. ರು. ಮಂಜೂರಾಗಿದೆ. ಜಿಲ್ಲಾಡಳಿತದ ಖಾತೆಗೆ ಈಗಾಗಲೇ ಜಮೆಯಾಗಿದೆ. ಇದಕ್ಕಾಗಿ ಸಚಿವರಿಗೆ ದೇವಸ್ಥಾನದ ವತಿಯಿಂದ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದು ಕೆ.ಆರ್.ನಾಯ್ಕ ಹೇಳಿದರು.
ಏಪ್ರಿಲ್ ತಿಂಗಳಿನಲ್ಲಿ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಕಾರ್ಯಕ್ರಮಕ್ಕೂ ಮುನ್ನ ಸರಕಾರದ ಅನುದಾನ ದೇವಸ್ಥಾನವನ್ನು ತಲುಪಲಿ ಎನುವ ಆಶಯ ನಮ್ಮದಾಗಿದೆ ಎಂದು ದೇವಸ್ಥಾನದ ಅಧ್ಯಕ್ಷ ಆರ್. ಕೆ. ನಾಯ್ಕ ತಿಳಿಸಿದರು.
ದೇವಸ್ಥಾನದ ಮೊಕ್ತೇಸರ ಸುಬ್ರಾಯ ನಾಯ್ಕ ತೆರ್ನಮಕ್ಕಿ, ಮಾವಳ್ಳಿ ಹೋಬಳಿ ನಾಮಧಾರಿ ಅಭಿವೃದ್ಧಿ ಸಂಘದ ನಿಕಟಪೂರ್ವ ಅಧ್ಯಕ್ಷ ಸುಬ್ರಾಯ ನಾಯ್ಕ ಗುಮ್ಮನಹಕ್ಕು ಮಾತನಾಡಿದರು. ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ನಾಗೇಂದ್ರ ನಾಯ್ಕ, ಪ್ರಧಾನ ಕಾರ್ಯದರ್ಶಿ ವಾಸು ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.