ಭಟ್ಕಳ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಲ್ಲಿ ಆಗುತ್ತಿರುವ ವಿಳಂಬ ಹಾಗೂ ಲೋಪದೋಷಗಳ ನಿವಾರಣೆಗಾಗಿ ಭಟ್ಕಳ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿಯ ನಿಯೋಗ ಭಟ್ಕಳ ಸಹಾಯಕ ಆಯುಕ್ತ ಡಾ.ನೈನಾ ಅವರನ್ನು ಭೇಟಿ ಮಾಡಿತು.

ಇದನ್ನೂ ಓದಿ : ಧ್ಯಾನ ಮಂದಿರದ ವರ್ಧಂತಿ ಮಾ.೪ರಂದು

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ ನಿಯೋಗ, ೧೫ ದಿನದೊಳಗೆ ಕಾಮಗಾರಿ ಆರಂಭಿಸದಿದ್ದರೆ ಶಿರೂರು ಟೋಲ್ ಪ್ಲಾಜಾ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಸಹಾಯಕ ಆಯುಕ್ತರಿಗೆ ಎಚ್ಚರಿಕೆ ನೀಡಿದೆ.

ಈ ವಿಡಿಯೋ ನೋಡಿ : ಕರಿಮಣಿ ಮಾಲೀಕ ನಾನಲ್ಲ… ‌ https://fb.watch/qwrgezh3DT/?mibextid=Nif5oz

ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ನಾಯಕ್ ನೇತೃತ್ವದಲ್ಲಿ ನಿಯೋಗವು ವಿಳಂಬಗೊಂಡ ಎನ್ಎಚ್ ಚತುಷ್ಪಥ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳ ಪಟ್ಟಿಯನ್ನು ಸಹಾಯಕ ಆಯುಕ್ತರ ಗಮನಸೆಳೆಯಿತು. ಮೂಡಭಟ್ಕಳ ಬೈಪಾಸ್ನಲ್ಲಿ ಏಕ ಪಥದ ರಸ್ತೆಯಿಂದಾಗಿ ಪದೇ ಪದೇ ಸಂಭವಿಸುತ್ತಿರುವ ಅಪಘಾತಗಳು ಮತ್ತು ಸಾವುನೋವುಗಳ ಬಗ್ಗೆ ಸೆಳೆಯಿತು. ಈ ಘಟನೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಸಮಿತಿ ಹೇಳಿದೆ.

ರಾಷ್ಟ್ರೀಯ ಹೆದ್ದಾರಿಯ ಅರ್ಬನ್ ಬ್ಯಾಂಕ್ ಬಳಿ ಕೇವಲ ಒಂದು ಜೆಸಿಬಿ ಮತ್ತು ಒಂದು ಹಿಟಾಚಿ ಯಂತ್ರ ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದ ಸಮಿತಿ ಸದಸ್ಯರು, ನಿಧಾನಗತಿಯ ಕಾಮಗಾರಿಯಿಂದ ಉಂಟಾಗುವ ಪರಿಸರ ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿತು. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು ಅಥವಾ ಹೆಚ್ಚುವರಿ ಯಂತ್ರೋಪಕರಣಗಳನ್ನು ಅಳವಡಿಸಿ ಕಾಮಗಾರಿಯನ್ನು ತ್ವರಿತಗೊಳಿಸಬೇಕು ಎಂದು ನಿಯೋಗದ ಸದಸ್ಯರು ಒತ್ತಾಯಿಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಭೂಗತ ಒಳಚರಂಡಿ (UGD) ಕಾಮಗಾರಿಯು ಮಳೆಯ ಸಮಯದಲ್ಲಿ ಒಳಚರಂಡಿ ಮಾರ್ಗಗಳ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ತಾಂತ್ರಿಕ ಮತ್ತು ವೈಜ್ಞಾನಿಕ ಯೋಜನೆಯ ಕೊರತೆಯನ್ನು ಸೂಚಿಸುತ್ತದೆ. ಇದಲ್ಲದೆ, ಮೇಲ್ಸೇತುವೆಗಳು ಮತ್ತು ಲೆವೆಲ್ ಕ್ರಾಸಿಂಗ್ ಸಂಬಂಧಿಸಿದಂತೆ ಸಂವಹನ ಕೊರತೆ ಎದ್ದು ಕಾಣುತ್ತಿದೆ. ತೆಂಗಿನಗುಂಡಿ ಕ್ರಾಸ್ನಲ್ಲಿ ಅಸಮರ್ಪಕ ಡಿವೈಡರ್ ಕಾಮಗಾರಿಯಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು, ಅಪೂರ್ಣ ಕಾಮಗಾರಿಗಳ ಬಗ್ಗೆ ಗಮನಹರಿಸಬೇಕು ಎಂದು ಸಮಿತಿ ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತರು, ಒಂದು ವಾರದೊಳಗೆ ಹೆದ್ದಾರಿ ಅಧಿಕಾರಿಗಳೊಂದಿಗೆ ಸಭೆ ಕರೆಯುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ), ಗುತ್ತಿಗೆದಾರ ಕಂಪನಿ ಐಆರ್ಬಿ ಮತ್ತು ಸಂಬಂಧಿತ ಅಧಿಕಾರಿಗಳು ಇರಲಿದ್ದಾರೆ ಎಂದ ಅವರು, ಸಮಿತಿ ಸದಸ್ಯರಿಗೂ ಸಭೆಗೆ ಆಹ್ವಾನಿಸುವುದಾಗಿ ಹೇಳಿದರು.

ಭಟ್ಕಳ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ನ್ಯಾಯವಾದಿ ಇಮ್ರಾನ್ ಲಂಕಾ, ಸಮಿತಿಯ ಸದಸ್ಯರಾದ ಎಸ್.ಎಂ.ನಾಯ್ಕ, ಇನಾಯತುಲ್ಲಾ ಶಾಬಂದ್ರಿ, ರಾಜೇಶ್ ನಾಯಕ್, ಈಶ್ವರ ನಾಯ್ಕ, ಇಕ್ಬಾಲ್ ಸುಹೇಲ್, ಕೆ.ಎಂ.ಅಶ್ಫಾಕ್, ರಬಿ ರುಕ್ನುದ್ದೀನ್ ನಿಯೋಗದಲ್ಲಿದ್ದರು.