ಭಟ್ಕಳ: ದಾವಣಗೆರೆಯಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಇಲ್ಲಿನ ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟರಿಗೆ ವಿಶೇಷ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪತ್ರಕರ್ತರಾಗಿ ಕಳೆದ ೩೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರಾಧಾಕೃಷ್ಣ ಭಟ್ಟರು, ಸಮಸ್ಯೆ, ಸಾಮಾಜಿಕ ಕಳಕಳಿಯ ಅನೇಕ ವರದಿ ಮಾಡಿದ್ದಾರೆ. ಇವರು ಸಲ್ಲಿಸಿದ ಸೇವೆ ಗುರುತಿಸಿ ರಾಜ್ಯಮಟ್ಟದ ವಿಶೇಷ ಪ್ರಶಸ್ತಿ ನೀಡಲಾಗಿದೆ.
ಇದನ್ನೂ ಓದಿ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರ ತನ್ನಿ: ರಾಧಾಕೃಷ್ಣ ಭಟ್ಟ ಕರೆ
ಉತ್ತಮ ಸಂಘಟನೆಯಿಂದ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಇವರು, ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2016ರಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಕೊಡಮಾಡುವ ಪ್ರತಿಷ್ಠಿತ ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿಗೂ ಭಾಜನರಾಗಿದ್ದು, ೨೦೧೮ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ ಸಾಂಘಿಕ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕಳೆದ 1993ರಿಂದ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ, ಪ್ರಸ್ತುತ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಸದಸ್ಯರೂ ಆಗಿದ್ದಾರೆ.
ಇದನ್ನೂ ಓದಿ: ಗಂಟಲಲ್ಲಿದ್ದ ಮೀನು ತೆಗೆದು 11 ತಿಂಗಳ ಮಗುವಿನ ಪ್ರಾಣ ಉಳಿಸಿದ ಸರ್ಜಿ ಆಸ್ಪತ್ರೆಯ ವೈದ್ಯರು
ಇವರಿಗೆ ರಾಜ್ಯಮಟ್ಟದ ವಿಶೇಷ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಶಾಸಕರು, ಪತ್ರಕರ್ತರ ಸಂಘದ ಪದಾಧಿಕಾರಿಗಳು ಮುಂತಾದವರಿದ್ದರು.