ಕಾರವಾರ : ಭಟ್ಕಳದ ಹಿಂದು ಪರ ಸಂಘಟನೆಗಳ ಕಾರ್ಯಕರ್ತ ಶ್ರೀನಿವಾಸ ನಾಯ್ಕ ವಿರುದ್ದ ಗಡಿಪಾರು ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿರುವ ನೋಟೀಸಿಗೆ ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಡೆ ನೀಡಿದೆ.
ಇದನ್ನೂ ಓದಿ : ಕಾಲೇಜಿಗೆ ಹೋಗದೇ ದ್ವಿತೀಯ ಪಿಯುಸಿಯಲ್ಲಿ 95.70% ಸಾಧನೆ
ತಮ್ಮ ವಿರುದ್ಧ ಜಿಲ್ಲಾಧಿಕಾರಿ ಹೊರಡಿಸಿರುವ ನೋಟೀಸಿಗೆ ತಡೆ ನೀಡುವಂತೆ ಕೋರಿ ಶ್ರೀನಿವಾಸ ನಾಯ್ಕ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಮುಂದಿನ ವಿಚಾರಣೆಯವರೆಗೂ ತಡೆಯಾಜ್ಣೆ ನೀಡಿರುವ ನ್ಯಾಯಾಲಯ, ಎದುರುದಾರರಾಗಿರುವ ರಾಜ್ಯ ಸರ್ಕಾರ ಮತ್ತು ಜಿಲ್ಲಾಧಿಕಾರಿಯವರಿಗೆ ನೋಟಿಸ್ ಜಾರಿ ಮಾಡಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ನ್ಯಾಯಾಲಯದ ಆದೇಶದಲ್ಲೇನಿದೆ?
ಒಬ್ಬ ವ್ಯಕ್ತಿಯನ್ನು ಅಪರಾಧಿಯೆಂದು ನಿರ್ಣಯಿಸಿದ್ದರೆ, ಅಂತಹ ವ್ಯಕ್ತಿಯು ಮತ್ತೆ ಅಂತಹುದೇ ಅಪರಾಧಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ ಎಂದು ನಂಬಲು ಕಾರಣವಿದ್ದರೆ ಅಂತಹ ವ್ಯಕ್ತಿಗೆ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ನಿಬಂಧನೆಗೆ ನಿರ್ದೇಶಿಸಬಹುದು. ನಿಬಂಧನೆಯನ್ನು ಪೂರೈಸಲು ಅಗತ್ಯವಿರುವ ಪೂರ್ವ-ಷರತ್ತೆಂದರೆ, ನಿಬಂಧನೆಯ ಅಡಿಯಲ್ಲಿ ಉಲ್ಲೇಖಿಸಲಾದ ಯಾವುದೇ ಅಪರಾಧಗಳಿಗೆ ಶಿಕ್ಷೆಯಾಗಬೇಕು. ಆದರೆ ಗಡಿಪಾರು ನೋಟಿಸ್ ಜಾರಿ ಮಾಡಿರುವ ಆರೋಪಿಗೆ ಈ ಹಿಂದೆ ಶಿಕ್ಷೆಯಾಗಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದ್ದರಿಂದ ಕಾರವಾರದ ಜಿಲ್ಲಾ ದಂಡಾಧಿಕಾರಿಗಳು ಸತ್ಯಕ್ಕೆ ಅನ್ವಯಿಸದೆ ನೋಟಿಸ್ ಹೊರಡಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣವೇನು?
ಭಟ್ಕಳದ ಹಿಂದು ಕಾರ್ಯಕರ್ತ ಹನುಮಾನ್ ನಗರದ ಶ್ರೀನಿವಾಸ ನಾಯ್ಕ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲು ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದರು. ಜಿಲ್ಲಾ ದಂಡಾಧಿಕಾರಿರವರ ನ್ಯಾಯಾಲಯದಲ್ಲಿ ಏ.೪ರಂದು ಮಧ್ಯಾಹ್ನ ೩ ಗಂಟೆಗೆ ಪ್ರಕರಣದ ವಿಚಾರಣೆ ನಿಗದಿಪಡಿಸಲಾಗಿತ್ತು. ನ್ಯಾಯಾಲಯಕ್ಕೆ ನೀವು ಖುದ್ದಾಗಿ ಹಾಜರಾಗಲು ಅಥವಾ ವಕೀಲರ ಮೂಲಕ ಪೊಲೀಸ್ ಅಧೀಕ್ಷಕರ ವರದಿಯಲ್ಲಿನ ಆಪಾದನೆಗೆ ಸಮಜಾಯಿಷಿ ನೀಡುವಂತೆ ಜಿಲ್ಲಾ ದಂಡಾಧಿಕಾರಿಗಳು ಹೊರಡಿಸಿದ ನೋಟಿಸ್ ನಲ್ಲಿ ಸೂಚಿಸಲಾಗಿತ್ತು.
ಜಿಲ್ಲಾಧಿಕಾರಿಯವರ ನೋಟಿಸ್ ಹಿನ್ನೆಲೆ ಭಟ್ಕಳ ತಹಶೀಲ್ದಾರರು ಏ.೧ರಂದು ಶಹರ ಠಾಣೆಯ ಉಪ ನಿರೀಕ್ಷಕರಿಗೆ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿ ಹೊರಡಿಸಿದ ನೋಟಿಸನ್ನು ಸಂಬಂಧಪಟ್ಟವರಿಗೆ ಜಾರಿ ಮಾಡಿ, ಎರಡು ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಪತ್ರದಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆ ಶ್ರೀನಿವಾಸ ನಾಯ್ಕ ನೋಟಿಸ್ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿದ್ದರು.
ಗಡಿಪಾರಿಗೆ ಕಾರಣವೇನು ?
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಶ್ರೀನಿವಾಸ ನಾಯ್ಕ ಅವರನ್ನು ಗಡಿಪಾರು ಮಾಡುವ ಬಗ್ಗೆ ಕಳೆದ ಮಾ.೧೮ರಂದು ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರ ಮರುದಿನವೇ ಮಾ.೧೯ರಂದು ಜಿಲ್ಲಾಧಿಕಾರಿಯವರು ಶ್ರೀನಿವಾಸ ನಾಯ್ಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಶ್ರೀನಿವಾಸ ನಾಯ್ಕ ವಿರುದ್ಧ ಐದು ಕ್ರಮಿನಲ್ ಪ್ರಕರಣ ದಾಖಲಾಗಿದ್ದವು. ಈ ಪೈಕಿ ಮೂರರಲ್ಲಿ ಖುಲಾಸೆಯಾಗಿದ್ದಾರೆ. ಒಂದು ಪ್ರಕರಣ ನ್ಯಾಯಾಲಯದಲ್ಲಿದ್ದರೆ, ಇನ್ನೊಂದು ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಇದಲ್ಲದೆ ನಾಲ್ಕು ಬಾರಿ ಪ್ರತಿಬಂಧಕ ಕಾನೂನಿನಡಿ ತಹಶೀಲ್ದಾರರು ಕ್ರಮ ಕೈಗೊಂಡಿದ್ದಾರೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗವಹಿಸದಂತೆ ಹಲವಾರು ಬಾರಿ ಎಚ್ಚರಿಕೆ ನೀಡಿ ಸೂಚಿಸಿದ್ದಾಗ್ಯೂ ಪ್ರಯೋಜನವಾಗಿಲ್ಲ. ಭಟ್ಕಳ ಮತೀಯವಾಗಿ ಸೂಕ್ಷ್ಮ ಪ್ರದೇಶವಾಗಿದ್ದರಿಂದ ಇವರ ಕಾನೂನು ಬಾಹಿರ ಚಟುವಟಿಕೆಯಿಂದ
ಮುಂದಿನ ದಿನಗಳಲ್ಲಿ ಕೋಮು ಗಲಭೆಯಂತಹ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಇವರ ಕೃತ್ಯದಿಂದ ಭಟ್ಕಳ ನಗರದಾದ್ಯಂತ ಭಯದ ವಾತಾವರಣ ಸೃಷ್ಟಿಯಾಗಿದೆ. ಸಾರ್ವಜನಿಕ ಹಿತ ದೃಷ್ಟಿಯಿಂದ, ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ, ಸಮಾಜದಲ್ಲಿ ರೌಡಿ ಚಟುವಟಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಇವರನ್ನು ಉತ್ತರ ಕನ್ನಡ ಜಿಲ್ಲೆಗೆ ಪ್ರವೇಶಿಸದಂತೆ ಒಂದು ವರ್ಷ ಕಾಲ ಗಡಿಪಾರು ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿಯವರು ಜಿಲ್ಲಾಧಿಕಾರಿಗೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ತಿಳಿಸಿದ್ದರು.