ಕಾರವಾರ : ಶಿರಸಿಯಲ್ಲಿ ಮಾರ್ಚ್ ೧೯ರಿಂದ ಮಾರ್ಚ್ ೨೭ರವರೆಗೆ ಜರಗುವ ಶ್ರೀ ಮಾರಿಕಾಂಬಾ ದೇವಿ ಜಾತ್ರೆ ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ವಾಕರಸಾಸಂಸ್ಥೆ ಶಿರಸಿ ವಿಭಾಗದ ವತಿಯಿಂದ ಹೆಚ್ಚುವರಿ ವಿಶೇಷ ಬಸ್‌ಗಳು ಕಾರ್ಯಚರಣೆ ನಡೆಸಲಿವೆ.
ಶಿರಸಿ ಹಳೆಯ ಬಸ್ ನಿಲ್ದಾಣದ ಸುತ್ತಮುತ್ತ ಜಾತ್ರಾ ಅಂಗಡಿ-ಮುಂಗಟ್ಟು ಹಾಕುವುದರಿಂದ ಬಸ್ ಸಂಚಾರಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಹಳೆಯ ಬಸ್ ನಿಲ್ದಾಣದ ಸಾರಿಗೆ ಕಾರ್ಯಾಚರಣೆಯನ್ನು ಹೊಸ ಬಸ್ ನಿಲ್ದಾಣದಿಂದ ಮಾಡಲಾಗುವುದು. ಶ್ರೀ ಮಾರಿಕಾಂಬಾ ಜಾತ್ರೆಗೆ ಬರುವ ಭಕ್ತಾದಿಗಳಿಗೆ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲು ಹೆಚ್ಚುವರಿಯಾಗಿ ಶಿರಸಿಯಿಂದ ಹಾನಗಲ್, ಹಾವೇರಿ, ಹುಬ್ಬಳ್ಳಿ, ಗದಗ, ಲಕ್ಷ್ಮೇಶ್ವರ, ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ, ಯಲ್ಲಾಪುರ, ದಾಂಡೇಲಿ, ಅಂಕೋಲಾ, ಕಾರವಾರ ಮತ್ತು ಪ್ರಮುಖ ಊರುಗಳಿಗೆ ವಿಶೇಷ ಸಾರಿಗೆ ಕಾರ್ಯಾಚಣೆ ಮಾಡಲಿದೆ.
ಶ್ರೀ ಮಾರಿಕಾಂಬೆ ದೇವಿ ಜಾತ್ರೆಯ ದಿನಗಳಲ್ಲಿ ಹಾನಗಲ್, ಹಾವೇರಿ, ಹುಬ್ಬಳ್ಳಿ ಕಡೆಗೆ ಹೋಗುವ ಸಾರಿಗೆಗಳನ್ನು ಶಿರಸಿ ಹೊಸ ಬಸ್ ನಿಲ್ದಾಣದಿಂದ-ಅಶ್ವಿನಿ ಸರ್ಕಲ್- ಮಾಸ್ತಿಕಟ್ಟಾ ಸರ್ಕಲ್ -ಎಪಿಎಂಸಿ- ಶಿರಸಿ ಘಟಕ-ವಿವೇಕಾನಂದ ಕ್ರಾಸ-ಚಿಪಗಿ ಸರ್ಕಲ್ ಮಾರ್ಗವಾಗಿ ಸಂಚರಿಸಲಿವೆ.
ಶಿರಸಿ ಮಾರಿಕಾಂಬಾ ದೇವಸ್ಥಾನದ ಮುಂದಿನ ರಸ್ತೆಯನ್ನು ಬಸ್ ಸಂಚಾರಕ್ಕೆ ನಿಷೇದಿಸಿರುವುದರಿಂದ ಬನವಾಸಿ ಮಾರ್ಗದ ಬಸ್ಸುಗಳು ರಾಮನಬೈಲ್ ಕ್ರಾಸನಿಂದ ಕಾರ್ಯಾಚರಣೆ ಮಾಡುತ್ತವೆ.
ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ ಬಸ್ಸುಗಳು ಶಿರಸಿ ಹೊಸ ಬಸ್ ನಿಲ್ದಾಣದಿಂದ ಪದ್ಮಶ್ರೀ ಸರ್ಕಲ್, ಹನುಮಾನ ವ್ಯಾಯಾಮ ಶಾಲೆ, ಐದು ರಸ್ತೆ ಸರ್ಕಲ್ ಮುಖಾಂತರ ಸಂಚರಿಸುತ್ತವೆ. ಪ್ರಯಾಣಿಕರು ಶಿರಸಿ ಹೊಸ ಬಸ್ ನಿಲ್ದಾಣ ಅಥವಾ ಹನುಮಾನ ವ್ಯಾಯಾಮ ಶಾಲೆ ಆವರಣದ ಬಸ್ ತಂಗುದಾಣದಿಂದ ಪ್ರಯಾಣಿಸಬಹುದಾಗಿದೆ.
ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ ಭಾಗದಿಂದ ಶಿರಸಿಗೆ ಬರುವ ಪ್ರಯಾಣಿಕರು ರಾಯಪ್ಪಾ ಹುಲೇಕಲ್ ಶಾಲಾ ತಂಗುದಾಣಕ್ಕೆ ಅಥವಾ ಹೊಸ ಬಸ್ ನಿಲ್ದಾಣದಲ್ಲಿ ಇಳಿಯಬಹುದಾಗಿದೆ. ಅಶ್ವಿನಿ ಸರ್ಕಲ್, ರಾಮನಬೈಲ್ ಕ್ರಾಸ್, ಎಪಿಎಂಸಿ ಕ್ರಾಸ(ಹುಬ್ಬಳ್ಳಿ ರಸ್ತೆ) ಹನುಮಾನ ವ್ಯಾಯಾಮ ಶಾಲೆ ಆವರಣ ಮತ್ತು ರಾಯಪ್ಪಾ ಹುಲೇಕಲ್ ಶಾಲಾ ಆವರಣದಲ್ಲಿ ತಾತ್ಕಾಲಿಕ ಬಸ್ ತಂದುದಾಣಗಳನ್ನು ನಿರ್ಮಿಸಲಾಗಿದೆ.
ಈ ವ್ಯವಸ್ಥೆಯು ಹಳೆ ಬಸ್ ನಿಲ್ದಾಣದ ಜಾಗವನ್ನು ಖುಲ್ಲಾ ಪಡಿಸುವ ವರೆಗೆ ಜಾರಿಯಲ್ಲಿರುತ್ತದೆ. ಸಾರಿಗೆ ವ್ಯವಸ್ಥೆಗಳ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7760991725, 7760991702, 7760991713, 9980430323, 7795984168 ಮತ್ತು 08344-229952 ನ್ನು ಸಂಪರ್ಕಿಸಬಹುದಾಗಿದೆ ಎಂದು ಶಿರಸಿ ಉಪ ವಿಭಾಗದ ವಾಕರಸಾಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.