ಕಾರವಾರ: ಧ್ವಜ ಕಟ್ಟೆ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಅವರು ಸಚಿವ ಮಂಕಾಳ ವೈದ್ಯ ಅವರ ಬಗ್ಗೆ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಆರ್.ಎಚ್.ನಾಯ್ಕ ಆಕ್ಷೇಪಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತೆಂಗಿನಗುಂಡಿ ಬಂದರಿನಲ್ಲಿ ಧ್ವಜ ವಿವಾದದ ವಿಷಯದಲ್ಲಿ ಸಚಿವರ ಹಸ್ತಕ್ಷೇಪವಿಲ್ಲ. ಆದರೂ ಅವರ ಮೇಲೆ ಇಲ್ಲದ ಆರೋಪ ಮಾಡಿ ಜಿಲ್ಲೆಯ ಶಾಂತಿ ಕೆಡಿಸಲು ಯತ್ನಿಸುತ್ತಿದ್ದಾರೆ. ಸರ್ಕಾರದ ಗ್ಯಾರಂಟಿಗಳು ಭೋಗಸ್ ಎಂದು ಜನರ ದಾರಿ ತಪ್ಪಿಸುವ ಯತ್ನ ನಡೆಯುತ್ತಿದೆ. ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ವೀರ ಸಾವರ್ಕರ ನಾಮಫಲಕ, ಭಗವಾಧ್ವಜ ತೆರವು – ಪಿಡಿಒ ವಿರುದ್ದ ಧರಣಿ ಕುಳಿತ ಪಂಚಾಯತ ಸದಸ್ಯರು
ಬಿಜೆಪಿ ಪ್ರಮುಖ ಸಿಟಿ ರವಿ ಅವರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುವ ಹೇಳಿಕೆ ನೀಡಿದ್ದಾರೆ. ಅವರನ್ನು ಬಂಧಿಸಬೇಕು. ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಬಾರಿ ಟಿಪ್ಪು ಭಕ್ತರು ಹಾಗೂ ರಾಮ ಭಕ್ತರ ನಡುವಿನ ಚುನಾವಣೆ ಎಂದು ಹೇಳಿದ್ದಾರೆ. ಜವಾಬ್ದಾರಿಯುತ ಹುದ್ದೆಯಲ್ಲಿದ್ದವರು ಅಂಥ ಹೇಳಿಕೆ ನೀಡಬಾರದು. ಈಗ ಚುನಾವಣೆ ನಡೆಯುತ್ತಿರುವುದು ಅಭಿವೃದ್ಧಿ ಮಾಡಿದವರು ಹಾಗೂ ಮಾಡದವರ ನಡುವೆ ನಡೆಯುತ್ತಿದೆ ಎಂದರು.
ಇದನ್ನೂ ಓದಿ: ಭಟ್ಕಳ ಭಗವಾಧ್ವಜ ತೆರವಿನಲ್ಲಿ ಉಸ್ತುವಾರಿ ಸಚಿವರ ಕೈವಾಡ: ಹರಿಪ್ರಕಾಶ್ ಕೋಣೆಮನೆ ಆರೋಪ
ಈ ಸಂದರ್ಭದಲ್ಲಿ ವಿಠೋಬ ಅಂಗಡಿಕೇರಿ, ಜಗದೀಶ ನಾಯ್ಕ, ನಾರಾಯಣ ಕುಮಟಾಕರ್ ಇದ್ದರು.