ಕುಮಟಾ : ರೈಲ್ವೆ ನಿಲ್ದಾಣದ ಎದುರಿನಲ್ಲಿರುವ ಹಿಂದೂ ಮುಕ್ರಿ ಸಮಾಜ ಸಂಘದ ಜಾಗದಲ್ಲಿ ನಿರ್ಮಾಣವಾಗಲಿರುವ ಹಿಂದೂ ಮುಕ್ರಿ ಸಮಾಜದ ಸಮುದಾಯ ಭವನ ನಿಮಾಣಕ್ಕೆ ಶ್ರೀ ರಾಘವೇಶ್ವರ ಭಾರತಿ ಮಹಾ ಸ್ವಾಮೀಜಿ ರವಿವಾರ ಭೂಮಿ ಪೂಜೆ ನೆರವೇರಿಸಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಶ್ರೀಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು. ಇವತ್ತು ತುಂಬಾ ಸಂತಸದ ಸುದಿನ. ಮುಕ್ರಿ ಸಮಾಜ ಒಂದಾಗಬೇಕು, ಮೇಲೆ ಬರಬೇಕು. ಇವತ್ತು ಎಲ್ಲರೂ ಒಂದಾಗಿ ಈ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಉಪಸ್ಥಿತರಿದ್ದಾರೆ. ಇದನ್ನು ನೋಡಿ ತುಂಬಾ ಸಂತೋಷ ಆಗುತ್ತಿದೆ. ಯಾವತ್ತೂ ಹೀಗೆ ಒಂದಾಗಿ ಇರಬೇಕು ಎಂದು ಶ್ರೀಗಳು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಗಣಪತಿ ಸ್ತುತಿ ಹಾಗೂ ಸ್ವಾಗತವನ್ನು ಯಕ್ಷಗಾನ ಮೂಲಕ ಪ್ರಸ್ತುತಪಡಿಸಲಾಯಿತು. ಸುಂದರ ಹೆಜ್ಜೆ ಹಾಕಿದ ಮೂರನೇ ತರಗತಿ ಬಾಲಕಿ ಆದ್ಯಳ ನೃತ್ಯವನ್ನು ಶ್ರೀಗಳು ಶ್ಲಾಘಿಸಿದರು.

ಇದನ್ನೂ ಓದಿ : ಕಡಲ ತಡಿಯಲ್ಲಿ ರೆಕ್ಕೆ ಕತ್ತರಿಸಿದ ಕಡಲಾಮೆ ಪತ್ತೆ

ಹಿಂದೂ ಮುಕ್ರಿ ಸಮಾಜದ ಹಿಂದಿನ ಪೀಳಿಗೆ ತುಂಬಾ ಕಷ್ಟದಲ್ಲಿ ಕಾಲ ಕಳೆದು ಬಂದಿದೆ. ಆದರೆ ಆದ್ಯಾಳ ಪೀಳಿಗೆ ಅಂದರೆ ಇಂದಿನ ಮುಂದಿನ ಪೀಳಿಗೆಗೆ ಕಷ್ಟ ಇರಬಾರದು. ಏಳ್ಗೆ ಹೊಂದಬೇಕು. ಸುಖದಿಂದ ಜೀವನ ನಡೆಸುವಂತಾಗಬೇಕು ಎಂಬುದನ್ನು ಆಶೀರ್ವದಿಸಲು ಬಯಸುತ್ತೇವೆ. ಈ ಸಮುದಾಯ ಭವನಕ್ಕೆ ಜಾಗ ಈಗಾಗಲೇ ದೊರೆತಿದೆ. ಇನ್ನು ಕಟ್ಟಡ ನಿರ್ಮಾಣ ಮಾತ್ರ ಬಾಕಿ ಇದೆ. ಅದು ಕೂಡ ಆದಷ್ಟು ಬೇಗ ಪೂರ್ಣಗೊಳ್ಳುವಂತೆ ಆಶೀರ್ವದಿಸುತ್ತೇನೆ. ಜೊತೆಗೆ ಶ್ರೀರಾಮಚಂದ್ರನ ಆಶೀರ್ವಾದವೂ ನಿಮ್ಮೊಂದಿಗೆ ಇರಲಿ ಎಂದು ಪ್ರಾರ್ಥಿಸುತ್ತೇವೆ. ನಾವು ಮತ್ತು ಶ್ರೀಮಠ ಯಾವತ್ತೂ ನಿಮ್ಮ ಸಮಾಜದ ಜೊತೆಗಿರುತ್ತದೆ. ಈ ಕಟ್ಟಡ ಪೂರ್ಣಗೊಳ್ಳುವ ವರೆಗೆ ನಿಮ್ಮ ಜೊತೆ ನಿಲ್ಲುತ್ತೇವೆ. ಒಳ್ಳೆಯ ಮೊತ್ತವನ್ನೂ ಶ್ರೀ ಮಠದ ಮೂಲಕ ನೀಡಿ ಸಮುದಾಯ ಭವನಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಆಗಾಗ ಮೇಲ್ವಿಚಾರಣೆ ನಡೆಸುತ್ತೇವೆ ಎಂದರು.

ಶಾಸಕ ದಿನಕರ ಶೆಟ್ಟಿ, ಮುಖಂಡರಾದ ಶಿವಾನಂದ ಹೆಗಡೆ ಕಡತೋಕ, ಗಜಾನನ ಪೈ, ವೆಂಕಟೇಶ ನಾಯಕ, ಕುಮಾರ ಮಾರ್ಕಾಂಡೆ, ಮಂಜುನಾಥ ನಾಯ್ಕ, ರತ್ನಾಕರ ನಾಯ್ಕ, ಸೆಂಟ್ ಮಿಲಾಗ್ರೀಸ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಜಾರ್ಜ್ ಫರ್ನಾಂಡಿಸ್ ಹಾಗೂ ಇತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಡಿಓ ಅಣ್ಣಪ್ಪ ಮುಕ್ರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ಭಟ್ಟ ಸೂರಿ ನಿರೂಪಿಸಿದರು.

ಸಮಿತಿ ಅಧ್ಯಕ್ಷ ಅಣ್ಣಪ್ಪ ಟಿ ಮುಕ್ರಿ, ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಮುಕ್ರಿ, ಖಜಾಂಚಿ ಗಣೇಶ ಅಡಿಗುಂಡಿ, ಪ್ರಮುಖರಾದ ಎನ್ ಆರ್ ಮುಕ್ರಿ ದಂಪತಿ, ರಾಮ ಮುಕ್ರಿ ತಾಡುಕಟ್ಟ, ಕೆ ಎಮ್ ಮುಕ್ರಿ ಹೆಗಡೆ, ನಾಗಪ್ಪ ಮುಕ್ರಿ ಇತರರು ಶ್ರೀ ಗಳನ್ನು ಬರಮಾಡಿಕೊಂಡರು. ಶ್ರೀಗಳಿಗೆ ಹಾರ ಸಮರ್ಪಣೆ ಮಾಡಿ ಫಲ ಇಟ್ಟು ಆಶೀರ್ವಾದ ಪಡೆದುಕೊಂಡರು.

ಉತ್ತರ ಕನ್ನಡ ಜಿಲ್ಲಾ ಕರಾವಳಿ ಹಿಂದೂ ಮುಕ್ರಿ ಸಮಾಜ ಸಂಘ ಮತ್ತು ಸಮುದಾಯ ಭವನ ನಿರ್ಮಾಣ ಸಮಿತಿ ವತಿಯಿಂದ ಹಿಂದೂ ಮುಕ್ರಿ ಸಮಾಜದ ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ.