ಹೊನ್ನಾವರ: ಸಂಸದರಾದ ಅನಂತಕುಮಾರ ಹೆಗಡೆ ಸಕ್ರಿಯ ರಾಜಕಾರಣಕ್ಕೆ ಬರಬೇಕು ಎಂದು ಆಗ್ರಹಿಸಿ ಡಿ.24ರಂದು ಬೆಳಿಗ್ಗೆ 11.30 ಗಂಟೆಗೆ ತಾಲೂಕಿನ ಅವರ ಅಭಿಮಾನಿಗಳು ಶಿರಸಿಯ ಅವರ ಮನೆ ಎದುರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಶ್ರೀಕುಮಾರ ಸಮೂಹ ಸಂಸ್ಥೆಯ ಅಧ್ಯಕ್ಷ ವೆಂಕಟ್ರಮಣ ವಿ. ಹೆಗಡೆ ತಿಳಿಸಿದರು.
ತಾಲೂಕಿನ ಕರ್ಕಿಯ ಶ್ರೀಕುಮಾರ ಸಂಸ್ಥೆಯ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಹಲವು ತಿಂಗಳುಗಳಿಂದ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದ್ದಾರೆ. ಇದನ್ನು ಬಿಟ್ಟು ಅವರು ಸಕ್ರಿಯ ರಾಜಕಾರಣಕ್ಕೆ ಬರಬೇಕು. ಮತ್ತೊಮ್ಮೆ ಗೆದ್ದು ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದು ಆಗ್ರಹಿಸಿ ಸಾಂಕೇತಿಕವಾಗಿ ಹೊನ್ನಾವರ ತಾಲೂಕಿನ ಅಭಿಮಾನಿಗಳು ಅವರ ಮನೆ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಬರದಿದ್ದರೆ ಅವರು ಬರುವವರೆಗೂ ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.
ಅನಂತಕುಮಾರ ಹೆಗಡೆ ಅವರು ಆರು ಬಾರಿ ಗೆದ್ದು ಸಂಸದರಾದರೂ ಯಾರಿಗೂ ಉಪದ್ರವ ಕೊಟ್ಟವರಲ್ಲ. ಹಗರಣ ಮಾಡಿದವರಲ್ಲ. ಸ್ವಜನ ಪಕ್ಷಪಾತವನ್ನು ಮಾಡಿದವರಲ್ಲ. ಅವರು ನಮ್ಮ ಜಿಲ್ಲೆಯ ಅಭ್ಯರ್ಥಿಯಾಗಲು ಸೂಕ್ತ ಅಭ್ಯರ್ಥಿ ಎಂದರು. ತಾಲೂಕಿನ ನಂತರ ಬೇರೆಬೇರೆ ತಾಲೂಕುಗಳ ಅವರ ಅಭಿಮಾನಿಗಳು ಅವರು ಸಕ್ರಿಯ ರಾಜಕಾರಣಕ್ಕೆ ಬರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಯೋಜಿಸಿದ್ದಾರೆ ಎಂದು ತಿಳಿಸಿದರು.
ಕರ್ಕಿ ಗ್ರಾ.ಪಂ. ಸದಸ್ಯ ಶ್ರೀಕಾಂತ ಮೊಗೇರ ಮಾತನಾಡಿ, ಅನಂತಕುಮಾರ ಹೆಗಡೆ ಅವರು ಅಭ್ಯರ್ಥಿಯಾದರೆ ಗೆದ್ದೇ ಗೆಲ್ಲುತ್ತಾರೆ. ಅವರಿಗೆ ಜನ ಬೆಂಬಲವಿದೆ. ಅವರು ಅಧಿಕಾರವಿದೆಯೆಂದು ಯಾರಿಗೂ ತೊಂದರೆ ಕೊಟ್ಟವರಲ್ಲ. ಅವರು ನಮ್ಮ ಲೋಕಸಭಾ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿ. ಅವರು ಸಕ್ರಿಯ ರಾಜಕಾರಣಕ್ಕೆ ಬರಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸೂರ್ಯನಾರಾಯಣ ಹೆಗಡೆ, ಎಂ.ಎಸ್.ಹೆಗಡೆ ಕಣ್ಣಿಮನೆ, ಸದಾನಂದ, ಉಮೇಶ ಹೆಗಡೆ ಅಬ್ಳಿ ಮತ್ತಿತರರು ಉಪಸ್ಥಿತರಿದ್ದರು.