ಭಟ್ಕಳ ಡೈರಿ ವರದಿ

ಭಟ್ಕಳ: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಶಾಂತಿಯುತವಾಗಿ ನಡೆಸುವ ಕುರಿತು ಶುಕ್ರವಾರ ಸಹಾಯಕ ಆಯುಕ್ತರ ಸಭಾಂಗಣದಲ್ಲಿ ಶಾಂತಿ ಸಭೆ ನಡೆಯಿತು. ಸಹಾಯಕ ಆಯುಕ್ತ ಜೆ ಮಹೇಶ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕಿನ ವಿವಿಧ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು, ಪೊಲೀಸ್ ಇಲಾಖೆ, ನಗರಸಭೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯ ಆರಂಭದಲ್ಲಿ ಸಹಾಯಕ ಆಯುಕ್ತ ಜೆ. ಮಹೇಶ ಅವರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಸಿಪಿಐ ದಿವಾಕರ ವಿವಿಧ ಗಣೇಶೋತ್ಸವ ಸಮಿತಿಗಳಿಂದ ಮಾಹಿತಿ ಪಡೆದುಕೊಂಡರು. ಗಣೇಶ ಪ್ರತಿಷ್ಠಾಪನೆ ನಡೆಯುವ ಸ್ಥಳ, ಎಷ್ಟು ದಿನಗಳ ಕಾಲ ಪೂಜೆ ನಡೆಯಲಿದೆ, ವಿಸರ್ಜನೆ ನಡೆಯುವ ಸ್ಥಳ ಹಾಗೂ ವಿಸರ್ಜನೆ ಮೆರವಣಿಗೆ ಸಾಗುವ ಮಾರ್ಗದ ಕುರಿತು ಸಮಿತಿ ಪದಾಧಿಕಾರಿಗಳಿಂದ ವಿವರ ಪಡೆಯಲಾಯಿತು. ಮುಟ್ಟಳ್ಳಿ, ಆಟೋ ರಿಕ್ಷಾ ಚಾಲಕ-ಮಾಲಕರ ಸಂಘ ಸೇರಿದಂತೆ ತಾಲೂಕಿನ ವಿವಿಧ ಭಾಗಗಳ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಮ್ಮ ಸಿದ್ಧತೆಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು.

ಚೌಥನಿ ಹೊಳೆಯಲ್ಲಿ ಐದು ಗಣಪತಿ ವಿಸರ್ಜನೆ: ಚೌಥನಿ ಹೊಳೆಯಲ್ಲಿ ಬಹುತೇಕ ಐದು ಗಣಪತಿ ವಿಗ್ರಹಗಳನ್ನು ನಾಲ್ಕನೇ ದಿನ ವಿಸರ್ಜನೆ ಮಾಡಲು ಉದ್ದೇಶಿಸಲಾಗಿದೆ. ವಿಸರ್ಜನೆ ಸ್ಥಳದಲ್ಲಿ ಸೇತುವೆಯ ಮೇಲಿನಿಂದ ಕ್ರೇನ್ ಬಳಸಿ ಗಣೇಶ ವಿಗ್ರಹಗಳನ್ನು ವಿಸರ್ಜಿಸಲು ಅವಕಾಶ ಕಲ್ಪಿಸುವಂತೆ ಸಮಿತಿಯವರು ಮನವಿ ಮಾಡಿದರು. ಆದರೆ ವಿಸರ್ಜನೆ ಸ್ಥಳದಲ್ಲಿ ನೂರು ಕೆವಿ ವಿದ್ಯುತ್ ಮಾರ್ಗ ಹಾದುಹೋಗಿರುವ ಹಿನ್ನೆಲೆಯಲ್ಲಿ ಅದನ್ನು ಸ್ಥಳಾಂತರಿಸುವಂತೆ ಮನವಿ ಮಾಡಲಾಗಿದೆ. ಈ ಕುರಿತು ನಗರಸಭೆ ಹಾಗೂ ಭಟ್ಕಳ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ಸಮಿತಿ ಪದಾಧಿಕಾರಿಗಳು ತಿಳಿಸಿದರು.

ಸಿಂಗಲ್ ವಿಂಡೋ ಮೂಲಕ ಅನುಮತಿ:

ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಸಿಪಿಐ ದಿವಾಕರ ಸಭೆಯಲ್ಲಿ ಸ್ಪಷ್ಟಪಡಿಸಿದರು. ಈ ಹಿನ್ನೆಲೆಯಲ್ಲಿ ಶನಿವಾರದಿಂದ ತಹಸೀಲ್ದಾರ್ ಕಚೇರಿಯಲ್ಲಿ ಸಿಂಗಲ್ ವಿಂಡೋ ಮಾದರಿಯಲ್ಲಿ ಅನುಮತಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಗಣೇಶೋತ್ಸವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಿತು. ಬಾಡಿಗೆ ಆಧಾರದ ಮೇಲೆ ಸಿಸಿ ಕ್ಯಾಮೆರಾ ವ್ಯವಸ್ಥೆ ದೊರೆಯುವ ಸಾಧ್ಯತೆಯಿದ್ದು, ಅಳವಡಿಕೆಯ ವೆಚ್ಚ ಹಾಗೂ ವ್ಯವಸ್ಥೆಯ ಕುರಿತು ಚರ್ಚಿಸಿ ಎರಡು ದಿನಗಳ ಬಳಿಕ ಮಾಹಿತಿ ನೀಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿತು. ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಈಗಾಗಲೇ ನಮೂದಿಸಿರುವ ಮಾರ್ಗವನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು ಎಂದು ಸೂಚಿಸಲಾಯಿತು.

ಡಿಜೆ ಬಳಕೆ ಸಂಪೂರ್ಣ ನಿಷೇಧ: ಸರಕಾರದ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಗಣೇಶೋತ್ಸವ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿತು. ಜಿಲ್ಲಾಧಿಕಾರಿ ಸೂಚನೆಯಂತೆ ಜಿಲ್ಲಾದ್ಯಂತ ಈ ನಿಯಮ ಜಾರಿಯಲ್ಲಿದ್ದು, ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ನಿಗಾ ವಹಿಸಲಿದೆ ಎಂದು ಸಿಪಿಐ ದಿವಾಕರ ಹೇಳಿದರು. ಆದರೆ ನಿಗದಿತ ಮಿತಿಯೊಳಗೆ ಸ್ಪೀಕರ್ ಬಳಕೆಗೆ ಅವಕಾಶವಿದ್ದು, ಮೈಕ್ ಅಳವಡಿಕೆಗೆ ಅನುಮತಿ ಪಡೆಯುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದರು. ಗಣೇಶೋತ್ಸವ ಸಂದರ್ಭದಲ್ಲಿ ಶಿಸ್ತು ಮತ್ತು ಸುರಕ್ಷತೆ ಕಾಪಾಡಲು ಸಮಿತಿಗಳು ಸ್ವಯಂಸೇವಕರನ್ನು ನೇಮಿಸಿಕೊಳ್ಳಬೇಕು ಎಂದು ಸೂಚಿಸಲಾಯಿತು.

“ನಮ್ಮ ಹಬ್ಬ ಮಾಡಲು ನಾವೇ ಅನುಮತಿ ಕೇಳಬೇಕೆ?”:

ಸಭೆಯಲ್ಲಿ ಕೆಲವು ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಹೊಸ ನಿಯಮಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಹೇರೂರು ಗಣೇಶೋತ್ಸವ ಸಮಿತಿಯ ನಾಗೇಂದ್ರ ನಾಯ್ಕ ಮಾತನಾಡಿ, ಹಲವು ವರ್ಷಗಳಿಂದ ಯಾವುದೇ ಸಮಸ್ಯೆಯಿಲ್ಲದೆ ಸಾರ್ವಜನಿಕ ಗಣೇಶೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಈಗ ಪ್ರತಿಯೊಂದು ವಿಚಾರಕ್ಕೂ ಹೊಸ ನಿಯಮಗಳನ್ನು ಜಾರಿಗೆ ತಂದು ಅನುಮತಿ ಕಡ್ಡಾಯಗೊಳಿಸುವ ಅಗತ್ಯವೇನು ಎಂದು ಪ್ರಶ್ನಿಸಿದರು. ಸಿಸಿ ಕ್ಯಾಮೆರಾ ಅಳವಡಿಸುವಂತೆ ಸರಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಅದರ ಖರ್ಚು-ವೆಚ್ಚವನ್ನು ಯಾರು ಭರಿಸಲಿದ್ದಾರೆ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟರು. ಗಣೇಶೋತ್ಸವದ ಸಂದರ್ಭದಲ್ಲಿ ಭಟ್ಕಳದಲ್ಲಿ ಮದ್ಯ ಮಾರಾಟ ಹಾಗೂ ಮಟ್ಕಾ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ಸಹಾಯಕ ಆಯುಕ್ತರು ಹಾಗೂ ಎಎಸ್‌ಪಿ ಅವರಲ್ಲಿ ಒತ್ತಾಯಿಸಿದರು.

“ಡಿಜೆ ನಿಷೇಧ ಎಲ್ಲರಿಗೂ ಒಂದೇ ಆಗಿರಲಿ”: ಹಿಂದಿನ ವರ್ಷದ ಗಣೇಶೋತ್ಸವದ ಸಂದರ್ಭದಲ್ಲಿ ಡಿಜೆ ಬಳಕೆಗೆ ನಿಷೇಧವಿದ್ದರೂ ಪೊಲೀಸ್ ಠಾಣೆಯ ಗಣಪತಿ ವಿಸರ್ಜನೆ ವೇಳೆ ಡಿಜೆ ಬಳಸಲಾಗಿತ್ತು ಎಂಬ ಆರೋಪ ಸಭೆಯಲ್ಲಿ ಕೇಳಿಬಂತು. ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ಈ ವಿಷಯವನ್ನು ಪ್ರಸ್ತಾಪಿಸಿದರು. “ಹಿಂದಿನ ವರ್ಷ ಶಾಂತಿ ಸಭೆಯಲ್ಲಿ ಡಿಜೆ ಬಳಸಬಾರದು ಎಂದು ಪೊಲೀಸ್ ಇಲಾಖೆ ಸೂಚಿಸಿತ್ತು. ಸಮಿತಿಗಳು ಅದನ್ನು ಪಾಲಿಸಿದ್ದವು. ಆದರೆ ಕೊನೆಯಲ್ಲಿ ಪೊಲೀಸ್ ಠಾಣೆಯ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಬಳಕೆ ಮಾಡಲಾಗಿತ್ತು” ಎಂದು ಅವರು ಆರೋಪಿಸಿದರು. ಇದನ್ನು ಪ್ರಶ್ನಿಸಿದಾಗ “ನೀವು ಡಿಜೆ ಬಳಕೆ ಮಾಡಬಹುದಿತ್ತು” ಎಂಬ ರೀತಿಯ ಉತ್ತರ ನೀಡಲಾಗಿತ್ತು ಎಂದು ವೆಂಕಟೇಶ ನಾಯ್ಕ ಸಭೆಯಲ್ಲಿ ತಿಳಿಸಿದರು. ಈ ವಿಚಾರ ಸಭೆಯಲ್ಲಿ ಕೆಲಕಾಲ ಅಸಮಾಧಾನಕ್ಕೆ ಕಾರಣವಾಯಿತು. ಡಿಜೆ ಬಳಕೆಯ ನಿಯಮವಾಗಲಿ ಅಥವಾ ನಿಷೇಧವಾಗಲಿ—ಅದು ಎಲ್ಲ ಗಣೇಶೋತ್ಸವ ಸಮಿತಿಗಳಿಗೂ ಸಮಾನವಾಗಿ ಅನ್ವಯಿಸಬೇಕು ಎಂದು ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದರು.

ಸಭೆಯಲ್ಲಿ ಭಟ್ಕಳ ಉಪವಿಭಾಗದ ಎಎಸ್‌ಪಿ ರಾನು ಗುಪ್ತ, ನಗರಸಭೆ ಪೌರಾಯುಕ್ತ ಬಾಬಾ ಸಾಹೇಬ್ ಮಾನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:

ಭಟ್ಕಳಕ್ಕೆ ಯುವ ಐಪಿಎಸ್ ಅಧಿಕಾರಿ ರಾನು ಗುಪ್ತಾ ನೇಮಕ ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ 

ಗುರುವೆಂದರೆ ಹೀಗೆ: ಬದುಕಿನ ದಾರಿಗೆ ಬೆಳಕು ತೋರಿದ ಗುರುಗಳ ನೆನಪು | ಶಿಕ್ಷಕರ ದಿನಾಚರಣೆಯ ವಿಶೇಷ ಲೇಖನ

ಹನುಮಾನನಗರ ಸರ್ಕಾರಿ ಶಾಲಾ ಆವರಣದಲ್ಲಿ ವೃಕ್ಷಾರೋಪಣ ಕಾರ್ಯಕ್ರಮ