`ಬದುಕಿನ ದಾರಿಗೆ ಬೆಳಕು ತೋರಿದ ಆದರ್ಶ ಗುರು ಶ್ರೀ ಎನ್ ಟಿ ಭಂಡಾರಿ ಸರ್ ಅವರಿಗೆ ಗೌರವ ನಮನ.`

ಶಿಕ್ಷಕರ ದಿನಾಚರಣೆಯ ಅಂಗವಾಗಿ ಉಮೇಶ ಮುಂಡಳ್ಳಿ ಅವರ ವಿಶೇಷ ಲೇಖನ. ಬಾಲ್ಯದಲ್ಲೇ ಚಿಂತನೆ, ಶಿಸ್ತು ಮತ್ತು ಮೌಲ್ಯಯುತ ಬದುಕಿನ ದಾರಿ ತೋರಿದ ಆದರ್ಶ ಗುರು ಶ್ರೀ ಎನ್ ಟಿ ಭಂಡಾರಿ ಸರ್ ಅವರ ನೆನಪುಗಳು ಮತ್ತು ಗುರುವಿನ ಮಹತ್ವದ ಕುರಿತ ಮನದಾಳದ ಬರಹ.

“ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ…”

ಗುರುವೆಂದರೆ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ. ಸೃಷ್ಟಿ, ಸ್ಥಿತಿ, ಲಯದ ಶಕ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರೊಂದಿಗೆ ಗುರುವಿನ ಸ್ಥಾನವನ್ನು ಹೋಲಿಸಲಾಗಿದೆ. ಭೌತಿಕವಾಗಿ ಏನನ್ನೂ ಸೃಷ್ಟಿಸದಿದ್ದರೂ, ವಿದ್ಯಾರ್ಥಿಯ ಮನಸ್ಸಿನಲ್ಲಿ ಗುರಿಯನ್ನು ಸೃಷ್ಟಿಸುವ, ಆ ಗುರಿಯನ್ನು ಸಾಧಿಸುವ ಮಾರ್ಗವನ್ನು ತೋರಿಸುವ, ಧ್ಯೇಯವನ್ನು ಬಿತ್ತುವ ಹಾಗೂ ಆ ಧ್ಯೇಯ ಪಕ್ವವಾಗಿ ಬೆಳೆಯುವಂತೆ ಚಿಂತನೆಯ ಬೀಜಗಳನ್ನು ಬಿತ್ತುವವನೇ ನಿಜವಾದ ಗುರು.

ವಿದ್ಯಾರ್ಥಿಯ ಮನಸ್ಸು ಹತ್ತಾರು ದಿಕ್ಕುಗಳಲ್ಲಿ ಓಡುತ್ತಿರುತ್ತದೆ. ಅಂತಹ ಮನಸ್ಸಿಗೆ ಸರಿಯಾದ ದಿಕ್ಕು ತೋರಿಸಿ, ಬುದ್ಧಿಯನ್ನು ವಿವೇಚನೆಯಿಂದ ಬಳಸುವಂತೆ ಮಾಡಿ, ಸಮಾಜಕ್ಕೆ ಒಳಿತಾಗುವ ಬದುಕಿನ ಮಾರ್ಗವನ್ನು ತೋರಿಸುವ ಶಕ್ತಿ ಗುರುವಿಗಿದೆ.

ಪ್ರಪಂಚದ ಮಹಾನ್ ವ್ಯಕ್ತಿಗಳ, ದಾರ್ಶನಿಕರ ಹಾಗೂ ಸಾಧಕರ ಜೀವನವನ್ನು ಗಮನಿಸಿದಾಗ, ಅವರ ಬದುಕಿನ ಯಾವುದೋ ಒಂದು ಹಂತದಲ್ಲಿ ಅವರನ್ನು ಮುನ್ನಡೆಸಿದ ಒಬ್ಬ ಮಾರ್ಗದರ್ಶಕ, ಒಬ್ಬ ಗುರು ಇದ್ದೇ ಇರುತ್ತಾನೆ. ಯಶಸ್ಸಿನ ಶಿಖರ ತಲುಪಿದವರ ಹಿಂದೆ, ಅವರ ಹೆಜ್ಜೆಗಳಿಗೆ ದಿಕ್ಕು ತೋರಿಸಿದ ಗುರುವಿನ ಹೆಜ್ಜೆಗುರುತುಗಳಿರುತ್ತವೆ. ಅಂತಹ ಒಬ್ಬ ಗುರುವಿನ ಸಾನ್ನಿಧ್ಯ ಬಾಲ್ಯದಲ್ಲಿಯೇ ನನಗೆ ದೊರೆತದ್ದು ನನ್ನ ಬದುಕಿನ ದೊಡ್ಡ ಸೌಭಾಗ್ಯ.

ಕೇವಲ ವಿದ್ಯೆ ಕಲಿಸುವುದಷ್ಟೇ ಗುರುವಿನ ಕಾರ್ಯವಲ್ಲ; ಬದುಕಿನ ಮೌಲ್ಯಗಳನ್ನು ಕಲಿಸುವುದೇ ನಿಜವಾದ ಶಿಕ್ಷಣ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟವರು ನನ್ನ ಗುರುಗಳು. “ಶಿಕ್ಷಣವೆಂದರೆ ಕೇವಲ ಉದ್ಯೋಗ ಪಡೆಯುವ ಮಾರ್ಗವಲ್ಲ; ಅದು ಮೌಲ್ಯಯುತ ಬದುಕಿನ ದಾರಿಗೆ ಬೆಳಕು ನೀಡುವ ದೀಪ” ಎಂಬ ಚಿಂತನೆ ನನ್ನೊಳಗೆ ಬಿತ್ತಿದವರು ಅವರು.

ನನ್ನ ಬಾಲ್ಯದಲ್ಲಿಯೇ ನನ್ನನ್ನು ಪ್ರೌಢ ಚಿಂತನೆಗಳತ್ತ ಕರೆದೊಯ್ದವರು. ನನ್ನ ಚಿಂತನೆಗಳು ಕೇವಲ ಪಠ್ಯಪುಸ್ತಕಗಳ ಪುಟಗಳೊಳಗೆ ಸೀಮಿತವಾಗದೆ, ದೇಶದ ಸಾಹಿತ್ಯ, ಸಂಗೀತ, ಸಂಸ್ಕೃತಿ, ಇತಿಹಾಸ ಹಾಗೂ ಸಮಾಜಮುಖಿ ಚಿಂತನೆಗಳತ್ತ ಹೊರಳುವಂತೆ ಮಾಡಿದವರು. ಅಂತಹ ನನ್ನ ಹಾಗೂ ನನ್ನಂತೆಯೇ ಸಾವಿರಾರು ವಿದ್ಯಾರ್ಥಿಗಳ ಆದರ್ಶ ಗುರುಗಳಾದವರು ಶ್ರೀ ಎನ್ ಟಿ ಭಂಡಾರಿ ಸರ್.

ಅವರ ಶಿಸ್ತು, ಗಾಂಭೀರ್ಯ, ಬುದ್ಧಿವಂತಿಕೆ, ಮಾತುಗಾರಿಕೆ, ಸಾಂಸ್ಕೃತಿಕ ಕಳಕಳಿ, ಐತಿಹಾಸಿಕ ತಿಳುವಳಿಕೆ, ವಿಸ್ತೃತ ಜ್ಞಾನ ಹಾಗೂ ಬದುಕಿನ ಆದರ್ಶ ಚಿಂತನೆಗಳು ನನ್ನನ್ನು ಬಹುವಾಗಿ ಸೆಳೆದಿದ್ದವು. ಅವರ ಮಾತುಗಳಲ್ಲಿ ಕೇವಲ ಪಾಠವಿರಲಿಲ್ಲ; ಬದುಕಿನ ಪಾಠವಿತ್ತು. ಅವರ ಬೋಧನೆಯಲ್ಲಿ ಕೇವಲ ಅಕ್ಷರಗಳಿರಲಿಲ್ಲ; ಭವಿಷ್ಯದ ದಾರಿಯಿತ್ತು. ಇಂದು ನಾನು ಏನಾದರೂ ಕಿಂಚಿತ್ತಾದರೂ ಗುರುತಿಸಿಕೊಂಡಿದ್ದರೆ, ಅದು ನನ್ನ ಮೇಲಿನ ನಿಮ್ಮೆಲ್ಲರ ಪ್ರೀತಿಗೆ ಪಾತ್ರವಾಗಿದ್ದರೆ, ಅದರ ನಾಂದಿ ಹಾಕಿದವರು ನನ್ನ ಗುರುಗಳು. ನನ್ನ ಪಯಣದ ದಾರಿಗೆ ಮೊದಲ ಬೆಳಕು ನೀಡಿದವರು ಅವರ ಮಾತುಗಳು, ಅವರ ಆದರ್ಶಗಳು ಮತ್ತು ಅವರ ಚಿಂತನೆಗಳು.

ಕಾಕತಾಳೀಯವೋ… ದೈವ ಸಂಕಲ್ಪವೋ… ಸುಮಾರು ಇಪ್ಪತ್ತೆರಡು ವರ್ಷಗಳ ಸುದೀರ್ಘ ಅವಧಿಯ ನಂತರ, ಕಾಸ್ಮುಡಿ ಹನುಮಂತ ದೇವಸ್ಥಾನದಲ್ಲಿ ಅಚಾನಕ್ಕಾಗಿ ನನ್ನ ಗುರುವಿನ ಭೇಟಿಯಾಗುವ ಸೌಭಾಗ್ಯ ದೊರೆಯಿತು. ವರ್ಷಗಳು ಉರುಳಿದ್ದವು. ಕಾಲ ಬದಲಾಗಿತ್ತು. ಆದರೆ ಗುರುವಿನ ಮೇಲಿನ ಗೌರವ ಮತ್ತು ಬಾಲ್ಯದ ಆ ನೆನಪುಗಳು ಮಾತ್ರ ಬದಲಾಗಿರಲಿಲ್ಲ.

ಗುರುವಿನ ಆಶೀರ್ವಾದ ಪಡೆದು, ಮಕ್ಕಳು ಹಾಗೂ ಮಡದಿಯೊಂದಿಗೆ ಒಂದು ನೆನಪಿನ ಛಾಯಾಚಿತ್ರವನ್ನು ದಾಖಲಿಸಿಕೊಂಡ ಕ್ಷಣ ನನ್ನ ಪಾಲಿಗೆ ಅತ್ಯಂತ ಅಮೂಲ್ಯವಾದದ್ದು. ಗುರುಗಳು ಎಂದಿಗೂ ಹಳೆಯವರಾಗುವುದಿಲ್ಲ; ಅವರ ಮಾತುಗಳು ಎಂದಿಗೂ ಹಳೆಯದಾಗುವುದಿಲ್ಲ. ಅವರು ಬಿತ್ತಿದ ಒಂದು ಚಿಂತನೆ, ಒಂದು ಮಾತು, ಒಂದು ಆದರ್ಶ, ಒಂದು ಪ್ರೇರಣೆ—ವಿದ್ಯಾರ್ಥಿಯ ಬದುಕಿನಲ್ಲಿ ಎಷ್ಟೋ ವರ್ಷಗಳ ನಂತರವೂ ಮೊಳಕೆಯೊಡೆದು ಫಲ ನೀಡುತ್ತಿರುತ್ತದೆ. ನನ್ನ ಬದುಕಿನಲ್ಲಿ ಅಂತಹ ಬೆಳಕಾಗಿರುವವರು ನನ್ನ ಗುರುಗಳು.

ನನ್ನ ಗುರುಗಳು ನನ್ನ ಬೆಳಕು. ನನ್ನ ಚಿಂತನೆಯ ಮೊದಲ ಹೆಜ್ಜೆ. ನನ್ನ ಬದುಕಿನ ದಾರಿಗೆ ದಿಕ್ಕು ತೋರಿದ ದೀಪ. ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ನನ್ನ ಬದುಕಿನ ದಾರಿಗೆ ಬೆಳಕು ನೀಡಿದ, ನನ್ನೊಳಗೆ ಚಿಂತನೆಯ ಬೀಜ ಬಿತ್ತಿದ, ನನ್ನನ್ನು ಸಮಾಜಮುಖಿ ಬದುಕಿನತ್ತ ಕರೆದೊಯ್ದ ನನ್ನ ಪ್ರಾಥಮಿಕ ಶಿಕ್ಷಕರು ನನ್ನ ಪೂಜ್ಯ ಗುರುಗಳಾದ ಶ್ರೀ ಎನ್ ಟಿ ಭಂಡಾರಿ ಸರ್ ಅವರಿಗೆ ಈ ಮನದಾಳದ ಮಾತುಗಳನ್ನು ಭಕ್ತಿಪೂರ್ವಕವಾಗಿ ಅರ್ಪಿಸುತ್ತೇನೆ. ಅಂತೆಯೇ ಒಂದಕ್ಷರವನ್ನೂ ಹೇಳಿಕೊಟ್ಟ ನನ್ನ ಎಲ್ಲಾ ಗುರುಗಳಿಗೂ ಪ್ರಣಾಮ ಸಲ್ಲಿಸುತ್ತೇನೆ.

ಗುರುವಿಗೆ ಶರಣು…

ಗುರುವಿಗೆ ನಮನ…

ಗುರುವಿಗೆ ಸದಾ ಕೃತಜ್ಞತೆ.


ಉಮೇಶ ಮುಂಡಳ್ಳಿಯವರ ಇತ್ತೀಚಿನ ಇನ್ನಷ್ಟು ಲೇಖನಗಳು ಇಲ್ಲಿವೆ :

Pepper Well/ ರೋಚಕ ಇತಿಹಾಸ ಹೇಳುವ ಮೆಣಸಿನ ಬಾವಿ

Mari jatra/ ಸಾಂಪ್ರದಾಯಿಕ ವೈಭವದ ಸಂಕೇತ: ಭಟ್ಕಳದ ಮಾರಿ ಜಾತ್ರೆ