ಭಟ್ಕಳ: ತಾಲೂಕಿನ ಮುಂಡಳ್ಳಿ ಗ್ರಾಮದ ಹಾವಳಿಕಂಠದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ಅಮಲಿನಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದರೆನ್ನಲಾದ ಇಬ್ಬರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ ೪ರಂದು ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸ್ ತನಿಖೆಯ ವೇಳೆ ಇಬ್ಬರೂ ಗಾಂಜಾ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಮುಗಳಿಹೊಂಡ, ಪುರವರ್ಗ ನಿವಾಸಿ, ಕೂಲಿ ಕಾರ್ಮಿಕ ಅಬ್ದುಲ್ ಆಲೀಮ ತಂದೆ ಸಲಾವುದ್ದೀನ ಜಬಾಲಿ (೨೭) ವಿರುದ್ಧ ಮೊದಲ ಪ್ರಕರಣ ದಾಖಲಾಗಿದೆ. ಅದೇ ಸ್ಥಳದಲ್ಲಿ ಸಾಜೀಲ್ ಸ್ಟ್ರೀಟ್, ಪುರಸಭೆ ಸಮೀಪದ ನಿವಾಸಿ, ಕೂಲಿ ಕಾರ್ಮಿಕ ಅರ್ಬಾಜ ತಂದೆ ಹಸನ ಶಬ್ಬರ (೨೯) ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಅಲ್ಪ ಅಂತರದಲ್ಲಿ ಘಟನೆ: ಪೊಲೀಸರ ದೂರಿನ ಪ್ರಕಾರ, ಸೆಪ್ಟೆಂಬರ್ ೪ರಂದು ರಾತ್ರಿ ಸುಮಾರ೯ ಗಂಟೆಗೆ ಅಬ್ದುಲ್ ಆಲೀಮನು ಹಾವಳಿಕಂಠದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿ ಅಮಲಿನಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಅವನನ್ನು ವಿಚಾರಣೆ ನಡೆಸಿದಾಗ ಬಾಯಿಯಿಂದ ಗಾಂಜಾ ಮಾದರಿಯ ಘಾಟು ವಾಸನೆ ಬರುತ್ತಿತ್ತು ಎನ್ನಲಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಾದ ಸುಮಾರು ೪೦ ನಿಮಿಷಗಳ ಬಳಿಕ, ರಾತ್ರಿ ೯.೪೦ರ ಸುಮಾರಿಗೆ ಇದೇ ಪ್ರದೇಶದಲ್ಲಿ ಅರ್ಬಾಜ್ ಕೂಡ ಮಾದಕ ವಸ್ತು ಸೇವಿಸಿ ಅಮಲಿನಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ದೃಢ: ಇಬ್ಬರನ್ನೂ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಸೆಪ್ಟೆಂಬರ್ ೫ರಂದು ಪಡೆದ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಇಬ್ಬರೂ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ (ತನಿಖೆ) ಭರಮಪ್ಪ ಬೆಳಗಲಿ ಅವರು ಸರ್ಕಾರದ ಪರವಾಗಿ ದೂರು ಸಲ್ಲಿಸಿದ್ದು, ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ :
ಭಟ್ಕಳದಲ್ಲಿ ಕಳೆದೊಂದು ವಾರ: ಅಕ್ರಮ ಚಟುವಟಿಕೆಗಳಿಗೆ ಬ್ರೇಕ್, ಜನಸಮಸ್ಯೆಗಳಿಗೆ ಧ್ವನಿ
ವಿದ್ಯಾರ್ಥಿಗಳನ್ನು ತಿದ್ದುವ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ– ಮಧುಕೇಶ್ವರ ನಾಯ್ಕ

