ಭಟ್ಕಳ ಡೈರಿ ವರದಿ

ಭಟ್ಕಳ: ವಿದ್ಯಾರ್ಥಿಗಳನ್ನು ತಿದ್ದುವಲ್ಲಿ ಶಿಕ್ಷಕರ ಜವಾಬ್ದಾರಿ ಹಿಂದಿಗಿಂತಲೂ ಹೆಚ್ಚಾಗಿದೆ ಎಂದು ವಿಜಯಾ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಮಧುಕೇಶ್ವರ ನಾಯ್ಕ ಹೇಳಿದರು. ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿನಲ್ಲಿ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಿಕ್ಷಕ-ಪಾಲಕರಿಗಾಗಿ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡ ಮಧುಕೇಶ್ವರ ನಾಯ್ಕ, ಹಿಂದೆ ಶಿಕ್ಷಕರಿಂದ ಕೆನ್ನೆ ಹಾಗೂ ಬೆನ್ನಿನ ಮೇಲೆ ಬಾಸುಂಡೆ ಬರುವಷ್ಟು ಹೊಡೆತ ತಿಂದಿದ್ದರಿಂದ ಶಿಸ್ತು ಮತ್ತು ಜೀವನದ ಪಾಠ ಕಲಿತು ಇಂದು ಸಮಾಜ ಗುರುತಿಸುವ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು. “ಆದರೆ ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಕರು ದೈಹಿಕವಾಗಿ ಶಿಕ್ಷಿಸುವಂತಿಲ್ಲ. ಹಾಗಾಗಿ ಯಾವುದೇ ರೀತಿಯ ಹೊಡೆತ ನೀಡದೆ ವಿದ್ಯಾರ್ಥಿಗಳನ್ನು ತಿದ್ದಿ, ಉತ್ತಮ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇದು ಶಿಕ್ಷಕರ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ” ಎಂದು ಅವರು ಅಭಿಪ್ರಾಯಪಟ್ಟರು.

ಎಂಟು ಶಿಕ್ಷಕರಿಗೆ ಗುರುವಂದನೆ:

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಶಿಕ್ಷಕ-ಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ವಿವಿಧ ಶಿಕ್ಷಣ ಸಂಸ್ಥೆಗಳ ಶಿಕ್ಷಕರನ್ನು ಗೌರವಿಸಿ ಗುರುವಂದನೆ ಸಲ್ಲಿಸಲಾಯಿತು. ಕೃಷ್ಣ ಎಸ್ ಗೊಂಡ ಕಾನಮದ್ಲು, ಕೆಪಿಸಿಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮಾಸ್ತಿಕಟ್ಟಾ, ಹೊಸನಗರ; ಮೋಹನ ನಾಗಪ್ಪ ನಾಯ್ಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಗ್ದಮ ಕಾಲೊನಿ, ಭಟ್ಕಳ; ಭಾಸ್ಕರ ಬೈಲಗದ್ದೆ, ದೈಹಿಕ ಶಿಕ್ಷಣ ಶಿಕ್ಷಕರು, ಅಂಜುಮಾನ್ ತಾಂತ್ರಿಕ ಮಹಾವಿದ್ಯಾಲಯ, ಭಟ್ಕಳ ಅವರನ್ನು ಸನ್ಮಾನಿಸಲಾಯಿತು. ಅದೇ ರೀತಿ ರಮಣಿ ಮೊಗೇರ, ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆ, ಭಟ್ಕಳ; ನಸ್ರೀನ ತಾಝ, ಪಿ.ಎಂ.ಶ್ರೀ ಕೆ.ಪಿ.ಎಸ್., ಶಿರೂರು; ಮಮತಾ ಮಾದೇವ ನಾಯ್ಕ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೆದ್ದಾರಿಮನೆ, ಭಟ್ಕಳ; ತಿಮ್ಮಮ್ಮ ಗೌಡ, ಅಂಗನವಾಡಿ ಶಿಕ್ಷಕಿ, ಅಂಗನವಾಡಿ ಕೇಂದ್ರ, ಗದ್ದೆಮನೆ ಹಾಗೂ ಈರಮ್ಮ ದುರ್ಗಪ್ಪ ಗುಡಿಹಿತ್ಲು, ಅಂಗನವಾಡಿ ಶಿಕ್ಷಕಿ, ನಲವಳ್ಳಿ ಅಂಗನವಾಡಿ ಕೇಂದ್ರ, ಕೊಪ್ಪಳ ಇವರಿಗೂ ಗುರುವಂದನೆ ಸಲ್ಲಿಸಲಾಯಿತು.

ಸನ್ಮಾನಿತರ ಪರವಾಗಿ ಕೃಷ್ಣ ಎಸ್. ಗೊಂಡ, ಭಾಸ್ಕರ ಬೈಲಗದ್ದೆ, ತಿಮ್ಮಮ್ಮ ಗೌಡ ಹಾಗೂ ಮೋಹನ ನಾಗಪ್ಪ ನಾಯ್ಕ ಮಾತನಾಡಿ, ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ವಿ. ಶಾನಭಾಗ ವಹಿಸಿದ್ದರು. ಉಪನ್ಯಾಸಕ ಜಯಂತ ನಾಯ್ಕ ಸ್ವಾಗತಿಸಿದರು. ಶಿವಾನಂದ ಭಟ್ ವಂದಿಸಿದರು. ಸಿಂಧು ಖಾರ್ವಿ, ಗಾಯತ್ರಿ ಶೆಟ್ಟಿ ಹಾಗೂ ಸಂಕಲ್ಪ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ :

ಭಟ್ಕಳಕ್ಕೆ ಯುವ ಐಪಿಎಸ್ ಅಧಿಕಾರಿ ರಾನು ಗುಪ್ತಾ ನೇಮಕ ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ 

ಗುರುವೆಂದರೆ ಹೀಗೆ: ಬದುಕಿನ ದಾರಿಗೆ ಬೆಳಕು ತೋರಿದ ಗುರುಗಳ ನೆನಪು | ಶಿಕ್ಷಕರ ದಿನಾಚರಣೆಯ ವಿಶೇಷ ಲೇಖನ

ಹನುಮಾನನಗರ ಸರ್ಕಾರಿ ಶಾಲಾ ಆವರಣದಲ್ಲಿ ವೃಕ್ಷಾರೋಪಣ ಕಾರ್ಯಕ್ರಮ