ಭಟ್ಕಳ ಡೈರಿ ವರದಿ
ಭಟ್ಕಳ: ತಾಲೂಕಿನಾದ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸಿರುವ ಜಾಲಿ ಗ್ರಾಮದ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್, ಜಾಲಿ–ಭಟ್ಕಳ ವತಿಯಿಂದ ಕಳೆದ ವರ್ಷದಂತೆ ಈ ವರ್ಷವೂ ‘ಕೃಷ್ಣ ಲೀಲಾ–೦೨’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಜಾಲಿಯ ನಾಮಧಾರಿ ಸಭಾಭವನದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಪುಟಾಣಿಗಳಿಗಾಗಿ ವಿವಿಧ ಕೃಷ್ಣ ವೇಷಧಾರಿ ಸ್ಪರ್ಧೆ ಹಾಗೂ ಮಹಿಳೆಯರಿಗಾಗಿ ಚುಕ್ಕೆ ರಂಗೋಲಿ ಸ್ಪರ್ಧೆ ನಡೆಯಿತು. ವಿಶೇಷವೆಂದರೆ, ಸ್ಪರ್ಧೆಗಳಲ್ಲಿ ಭಾಗವಹಿಸಲು ಯಾವುದೇ ನೋಂದಣಿ ಶುಲ್ಕ ವಿಧಿಸಿರಲಿಲ್ಲ. ಕಾರ್ಯಕ್ರಮದಲ್ಲಿ ವಿಜೇತರಿಗೆ ₹೩೦ ಸಾವಿರಕ್ಕೂ ಅಧಿಕ ಮೊತ್ತದ ಬಹುಮಾನಗಳನ್ನು ವಿತರಿಸುವ ಮೂಲಕ ಫೌಂಡೇಶನ್ ಸ್ಪರ್ಧಿಗಳಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿತು.
ಕಾರ್ಯಕ್ರಮಕ್ಕೆ ಬ್ರಹ್ಮರ್ಷಿ ನಾರಾಯಣ ಗುರು ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ ಜಾಲಿಯ ಅಧ್ಯಕ್ಷ ಮಂಜಪ್ಪ ಎಂ ನಾಯ್ಕ ಜಾಲಿ ಕಾರ್ಯಕ್ರಮ ಉದ್ಘಾಟಿಸಿದರು. ಫೌಂಡೇಶನ್ ಅಧ್ಯಕ್ಷ ವಸಂತ ಎಂ ನಾಯ್ಕ ಜಾಲಿ, ಕ್ರಿಯಾಶೀಲ ಗೆಳೆಯರ ಬಳಗ, ಭಟ್ಕಳದ ಅಧ್ಯಕ್ಷ ರಮೇಶ್ ಎನ್ ಖಾರ್ವಿ ಹಾಗೂ ಯೋಗ ಗುರು ಗೋವಿಂದ ಗುರೂಜಿ ಮಾತನಾಡಿ, ಫೌಂಡೇಶನ್ ಸ್ಥಾಪನೆಯಾಗಿ ಕೇವಲ ಎರಡು ವರ್ಷಗಳಲ್ಲಿಯೇ ಹಲವು ಜನಪರ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಉತ್ತಮವಾಗಿ ಮುನ್ನಡೆಯುತ್ತಿದೆ ಎಂದು ಶ್ಲಾಘಿಸಿದರು.
ಗೌರವ ಡಾಕ್ಟರೇಟ್ ಪಡೆದ ಗೋವಿಂದ ಗುರೂಜಿ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬಬ್ಬನಕಲ್ ಶಾಲೆಯ ಶಿಕ್ಷಕ ಯಶ್ವಂತ ನಾಯ್ಕ ಅವರನ್ನು ಗೌರವಿಸಲಾಯಿತು. ಊರಿನ ಮಹಿಳಾ ಪ್ರಮುಖರಾದ ಪದ್ಮಾವತಿ ಎಂ ಗೊಂಡ, ಫೌಂಡೇಶನ್ ಸದಸ್ಯ ಚಂದ್ರಹಾಸ ನಾಯ್ಕ ಜಾಲಿ ಹಾಗೂ ಸುಗುಣ ಸಿ ಆಚಾರಿ ಉಪಸ್ಥಿತರಿದ್ದರು. ಫೌಂಡೇಶನ್ ಕಾರ್ಯದರ್ಶಿ ಮಾರುತಿ ನಾಯ್ಕ ಜಾಲಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕೃಷ್ಣ ಲೀಲಾ–೦೨’ ಕಾರ್ಯಕ್ರಮದ ಉದ್ದೇಶ ಹಾಗೂ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ವಿವಿಧ ಜನಪರ ಕಾರ್ಯಗಳ ಕುರಿತು ವಿವರಿಸಿದರು.
ಇದನ್ನು ಓದಿ:
ಕಲೆ–ಸಂಸ್ಕೃತಿ ಸೇವೆಗೆ ಗೌರವ: ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ
ಮುಂಡಳ್ಳಿಯಲ್ಲಿ ಗಾಂಜಾ ಸೇವನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು
ಭಟ್ಕಳದಲ್ಲಿ ಕಳೆದೊಂದು ವಾರ: ಅಕ್ರಮ ಚಟುವಟಿಕೆಗಳಿಗೆ ಬ್ರೇಕ್, ಜನಸಮಸ್ಯೆಗಳಿಗೆ ಧ್ವನಿ

