ಭಟ್ಕಳ ಡೈರಿ ವರದಿ
ಭಟ್ಕಳ: ಶ್ರಾವಣ ಮಾಸದ ಕೃಷ್ಣ ಪಕ್ಷ ಏಕಾದಶಿಯ ಸೋಮವಾರದಂದು ಲೋಕಕಲ್ಯಾಣ ಹಾಗೂ ಸಕಲರ ಶ್ರೇಯೋಭಿವೃದ್ಧಿಗಾಗಿ ಮ್ಹಾತೋಬಾರ ಶ್ರೀ ಮುರ್ಡೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಭವ್ಯ ಬಿಲ್ವಾರ್ಚನೆ ನೆರವೇರಿಸಲಾಯಿತು.
ಸೋಮವಾರ ಬೆಳಗ್ಗೆ ಭಕ್ತರು ತಮ್ಮ ಮನೆಗಳಿಂದ ತಂದ ೧೦೮ ಬಿಲ್ವಪತ್ರೆಗಳನ್ನು ಶ್ರೀ ದೇವರ ಓಲಗ ಮಂಟಪದಲ್ಲಿ ಸಮರ್ಪಿಸಿದರು. ಬಳಿಕ ವಾದ್ಯಘೋಷಗಳೊಂದಿಗೆ ಓಲಗ ಮಂಟಪದಿಂದ ದೇವಸ್ಥಾನದವರೆಗೆ ಬಿಲ್ವಪತ್ರೆಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ನಂತರ ಪ್ರಧಾನ ಅರ್ಚಕ ವೇದಮೂರ್ತಿ ಜೈರಾಮ ಅಡಿ ನೇತೃತ್ವದಲ್ಲಿ ಅರ್ಚಕ ವೃಂದ ಹಾಗೂ ಸೀಮಾ ಸಮಿತಿಯ ಸಹಕಾರದೊಂದಿಗೆ ಬೆಳಗ್ಗೆ ೧೦ ಗಂಟೆಗೆ ಭವ್ಯ ಬಿಲ್ವಾರ್ಚನೆ ಆರಂಭವಾಯಿತು. ಸುಮಾರು ೧೧.೩೦ರವರೆಗೆ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ ನೆರವೇರಿಸಲಾಯಿತು. ಮಹಾಪೂಜೆಯ ನಂತರ ದೇವಸ್ಥಾನಕ್ಕೆ ಆಗಮಿಸಿದ್ದ ೨ ಸಾವಿರಕ್ಕೂ ಅಧಿಕ ಭಕ್ತರಿಗೆ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ಮುಡಿಗಂಧ ಪ್ರಸಾದ ಹಾಗೂ ಮಹಾ ಅನ್ನಸಂತರ್ಪಣೆಯ ಅನ್ನಪ್ರಸಾದ ಸ್ವೀಕರಿಸಿದರು. ಇದೇ ವೇಳೆ ಭವ್ಯ ಬಿಲ್ವಾರ್ಚನೆಯ ಬಿಲ್ವಪ್ರಸಾದವನ್ನೂ ಪಡೆದು ಶ್ರೀ ಮುರ್ಡೇಶ್ವರ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾದರು.
ಇದನ್ನೂ ಓದಿ:
ಜಾಲಿಯಲ್ಲಿ ಕಳೆಗಟ್ಟಿದ ‘ಕೃಷ್ಣ ಲೀಲಾ–೦೨’: ಪುಟಾಣಿಗಳ ಕೃಷ್ಣ ವೇಷಧಾರಿ ಸ್ಪರ್ಧೆ
ಕಲೆ–ಸಂಸ್ಕೃತಿ ಸೇವೆಗೆ ಗೌರವ: ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ

