ಭಟ್ಕಳ ಡೈರಿ ವರದಿ

ಭಟ್ಕಳ: ಯುವಕರು ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಕ್ರೀಡಾ ಸ್ಫೂರ್ತಿಯಿಂದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಸೋಲು-ಗೆಲುವು ಜೀವನದ ಸಹಜ ಪ್ರಕ್ರಿಯೆಯಾಗಿದ್ದು, ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಿ ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು ಎಂದು ಭಟ್ಕಳ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜು ಮಂಜಪ್ಪ ನಾಯ್ಕ ಕರೆ ನೀಡಿದರು. ಭಟ್ಕಳ ತಾಲೂಕಿನ ತೆಂಗಿನಗುಂಡಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ನಡೆದ ೨೦೨೬-೨೭ನೇ ಸಾಲಿನ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾ ಧ್ವಜಾರೋಹಣ ನೆರವೇರಿಸಿದ ತಾಲೂಕು ಪಂಚಾಯತ್ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ಮಹಾಲೆ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮ ನಾಯ್ಕ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಸಂತೋಷ ನಾಯ್ಕ ಪರೇಡ್ ಕಾರ್ಯಕ್ರಮ ನಡೆಸಿಕೊಟ್ಟರೆ, ರಾಜೇಶ ಕೆಂಗೇರಿ ಕ್ರೀಡಾ ಜ್ಯೋತಿ ಬೆಳಗಿಸಿದರು.

ತಾಲೂಕಿನ ವಿವಿಧ ಭಾಗಗಳಿಂದ ಸುಮಾರು ೫೦೦ರಿಂದ ೬೦೦ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕ್ರೀಡಾಪಟುಗಳಿಗೆ ಉತ್ತಮ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ತಾಲೂಕು ಯುವಜನ ಕ್ರೀಡಾಧಿಕಾರಿ ವೆಂಕಟೇಶ ನಾಯ್ಕ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಭಟ್ಕಳ ತಾಲೂಕು ಅಧ್ಯಕ್ಷ ಉಮೇಶ್ ಕರೆಕಟ್ಟೆ, ಸಂತೋಷ ಆರ್ ಶ್ರೇಷ್ಟಿ, ರಾಜು ನಾಗಯ್ಯ ಗೊಂಡ, ಡಿ ಕೆ ಅಳ್ವೆಕೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಭಟ್ಕಳ ತಾಲೂಕಿನ ದೈಹಿಕ ಶಿಕ್ಷಕರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದರು. ಅವರ ಸೇವೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು. ಜನಾರ್ದನ ಮೊಗೇರ ನಿರೂಪಿಸಿದರು. ರಾಘವೇಂದ್ರ ನಾಯ್ಕ ವಂದನಾರ್ಪಣೆ ನೆರವೇರಿಸಿದರು.

ಇದನ್ನೂ ಓದಿ:

ಉಪ್ಪೋಣಿ ವಲಯಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಚಾಲನೆ

ಮುರ್ಡೇಶ್ವರ ದೇವಸ್ಥಾನದಲ್ಲಿ ಭವ್ಯ ಬಿಲ್ವಾರ್ಚನೆ: ೨ ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನಸಂತರ್ಪಣೆ

ಜಾಲಿಯಲ್ಲಿ ಕಳೆಗಟ್ಟಿದ ‘ಕೃಷ್ಣ ಲೀಲಾ–೦೨’: ಪುಟಾಣಿಗಳ ಕೃಷ್ಣ ವೇಷಧಾರಿ ಸ್ಪರ್ಧೆ