ಭಟ್ಕಳ ಡೈರಿ ವರದಿ
ಭಟ್ಕಳ: ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ೬೨ ವರ್ಷದ ವ್ಯಕ್ತಿ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಜಾಲಿ ಕ್ರಾಸ್ ಬಳಿ ನಡೆದಿದೆ. ಮೃತರನ್ನು ಕುಮಟಾ ನಿವಾಸಿ ಪರಮೇಶ್ವರ ರಾಮ ದೇವಾಡಿಗ ಎಂದು ಗುರುತಿಸಲಾಗಿದೆ. ಅವರು ಭಟ್ಕಳದ ಮುಂಡಳ್ಳಿಯಲ್ಲಿ ಆಪ್ತ ಸಂಬಂಧಿಕರೊಂದಿಗೆ ವಾಸವಾಗಿದ್ದರು.
ಪೊಲೀಸರಿಗೆ ನೀಡಲಾದ ದೂರಿನ ಪ್ರಕಾರ, ಗುರುವಾರ ಬೆಳಗ್ಗೆ ಸುಮಾರು ೬.೪೦ರ ವೇಳೆಗೆ ಪರಮೇಶ್ವರ ಅವರು ಸಂಬಂಧಿಕರೊಬ್ಬರೊಂದಿಗೆ ಮಾತನಾಡುತ್ತಾ ರಸ್ತೆ ಬದಿಯಲ್ಲಿ ನಿಂತಿದ್ದರು. ಈ ವೇಳೆ ಶಿರೂರಿನಿಂದ ಹೊನ್ನಾವರದತ್ತ ತೆರಳುತ್ತಿದ್ದ ಕಾರು ಏಕಾಏಕಿ ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ಪರಿಣಾಮ ಪರಮೇಶ್ವರ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ ಸುಮಾರು ೮.೪೦ಕ್ಕೆ ಅವರು ಮೃತಪಟ್ಟಿದ್ದಾರೆ.
ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಪರಮೇಶ್ವರ ಅವರು ಅಪಘಾತ ಸಂಭವಿಸುವ ಕೇವಲ ಎರಡು ದಿನಗಳ ಹಿಂದಷ್ಟೇ ಭಟ್ಕಳದ ಖಾಸಗಿ ಆಸ್ಪತ್ರೆಯೊಂದರಲ್ಲಿ ವಾಚ್‌ಮನ್ ಆಗಿ ಕೆಲಸಕ್ಕೆ ಸೇರಿದ್ದರು ಎಂದು ತಿಳಿದುಬಂದಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ :
ಭಟ್ಕಳದಲ್ಲಿ ಹೆಚ್ಚುತ್ತಿರುವ ಭಿಕ್ಷಾಟನೆ: ಭಿಕ್ಷೆಯ ಹಿಂದೆ ನಡೆಯುತ್ತಿರುವುದೇನು?
ಹೊನ್ನಾವರದಲ್ಲಿ ಭಟ್ಕಳದ ಮೂವರ ವಿರುದ್ಧ ಕೇಸು ದಾಖಲು, ಒಬ್ಬ ಸೆರೆ
