ಭಟ್ಕಳ ಡೈರಿ ವರದಿ
ಭಟ್ಕಳ: ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (ಎಐಟಿಎಂ), ಭಟ್ಕಳ ಹಾಗೂ ಭಾರತ ಸರ್ಕಾರದ ರಾಜೀವ್ ಗಾಂಧಿ ರಾಷ್ಟ್ರೀಯ ಬೌದ್ಧಿಕ ಆಸ್ತಿ ನಿರ್ವಹಣಾ ಸಂಸ್ಥೆ (ಆರ್ಜಿಎನ್ಐಐಪಿಎಂ) ಸಹಯೋಗದಲ್ಲಿ ‘ಬೌದ್ಧಿಕ ಆಸ್ತಿ ಹಕ್ಕುಗಳು (ಐಪಿಆರ್) ಮತ್ತು ಪೇಟೆಂಟ್ಗಳು, ವಿನ್ಯಾಸಗಳ ಫೈಲಿಂಗ್’ ಕುರಿತು ರಾಷ್ಟ್ರೀಯ ಮಟ್ಟದ ಆನ್ಲೈನ್ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಶೈಕ್ಷಣಿಕ ನಾವೀನ್ಯತೆ ಹಾಗೂ ಸಂಶೋಧನಾ ಜಾಗೃತಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಾಗಾರವು ಎಐಟಿಎಂ ಪ್ರಾಂಶುಪಾಲ ಡಾ. ಕೆ. ಫಜ್ಲುರು ರೆಹಮಾನ್ ಅವರ ಆರಂಭಿಕ ಭಾಷಣದೊಂದಿಗೆ ಆರಂಭವಾಯಿತು. ಕಾರ್ಯಾಗಾರದಲ್ಲಿ ಆರ್ಜಿಎನ್ಐಐಪಿಎಂನ ಪೇಟೆಂಟ್ಗಳು ಮತ್ತು ವಿನ್ಯಾಸಗಳ ಸಹಾಯಕ ನಿಯಂತ್ರಕ ಡಾ ಭರತ್ ಎನ್ ಸೂರ್ಯವಂಶಿ ಮುಖ್ಯ ಭಾಷಣ ಮಾಡಿದರು. ಪೇಟೆಂಟ್ ಸಲ್ಲಿಕೆ ಪ್ರಕ್ರಿಯೆ, ವಿನ್ಯಾಸ ನೋಂದಣಿ ಹಾಗೂ ಬೌದ್ಧಿಕ ಆಸ್ತಿ ರಕ್ಷಣೆಗೆ ಅನುಸರಿಸಬೇಕಾದ ಪ್ರಾಯೋಗಿಕ ವಿಧಾನಗಳ ಕುರಿತು ಅವರು ವಿವರವಾದ ಮಾಹಿತಿ ನೀಡಿದರು.
ದೇಶದ ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳ ಅಧ್ಯಾಪಕರು, ಸಂಶೋಧನಾ ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಾಗಾರಕ್ಕೆ ದೇಶದ ವಿವಿಧ ಭಾಗಗಳಿಂದ ಎರಡು ಸಾವಿರದ ಐನೂರಕ್ಕೂ ಅಧಿಕ ಮಂದಿ ಭಾಗವಹಿಸಿರುವುದು ವಿಶೇಷವಾಗಿತ್ತು. ತಜ್ಞರ ಸಂವಾದಾತ್ಮಕ ಪ್ರಸ್ತುತಿ ಹಾಗೂ ಪ್ರಾಯೋಗಿಕ ಮಾರ್ಗದರ್ಶನಕ್ಕೆ ಶಿಕ್ಷಣ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದರು. ಬೌದ್ಧಿಕ ಆಸ್ತಿ ಹಕ್ಕುಗಳು, ಪೇಟೆಂಟ್ ಹಾಗೂ ವಿನ್ಯಾಸ ನೋಂದಣಿಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಕಾರ್ಯಾಗಾರವು ಸ್ಪಷ್ಟತೆ ಮೂಡಿಸಿತು.
ಇದನ್ನೂ ಓದಿ :
ಬೆಳಕೆ ಗ್ರಾ ಪಂ.ಗೆ ಸಾಮಾಜಿಕ ಪರಿಶೋಧನಾ ನಿರ್ದೇಶಕರ ಭೇಟಿ; ಪ್ರಗತಿ ಪರಿಶೀಲನೆ
ಭಟ್ಕಳದಲ್ಲಿ ಸಮಾಜ ಸೇವಕರಿಂದ ಭಿಕ್ಷುಕನ ಅಂತ್ಯಕ್ರಿಯೆ
ಶಿರಾಲಿ ವಲಯ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟ ಯಶಸ್ವಿ
ಭಟ್ಕಳದಲ್ಲಿ ದಸರಾ ಕ್ರೀಡಾಕೂಟ ಆರಂಭ; ೫೦೦ಕ್ಕೂ ಹೆಚ್ಚು ಕ್ರೀಡಾಪಟುಗಳ ಭಾಗಿ
