ಭಟ್ಕಳ ಡೈರಿ ವರದಿ

ಭಟ್ಕಳ: ತಾಲೂಕಿನ ಶಿರಾಲಿ ಸಮೀಪ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ೧೬ ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಸೆಪ್ಟೆಂಬರ್ ೧೧ರಂದು ನಡೆದಿದೆ. ಶಿರಾಲಿಯ ನೀರಕಂಠ ನಿವಾಸಿ, ವಾದ್ಯ ಬಾರಿಸುವ ವೃತ್ತಿಯ ನಾರಾಯಣ ಶನಿಯಾರ ದೇವಾಡಿಗ ಅವರು ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಪ್ರಕಾರ, ನಾರಾಯಣ ಅವರ ತಮ್ಮನ ಮಗ ಜೀವನ ನಾಗೇಶ ದೇವಾಡಿಗ (೧೬) ವಾದ್ಯ ಬಾರಿಸುವ ಕೆಲಸ ಮಾಡುತ್ತಿದ್ದು, ಸೆಪ್ಟೆಂಬರ್ ೧೧ರಂದು ಬೆಳಗ್ಗೆ ಸುಮಾರು ೧೧.೪೦ರ ವೇಳೆಗೆ ಕೆಎ-೪೭/ಜೆ-೨೬೬೨ ನೋಂದಣಿ ಸಂಖ್ಯೆಯ ಬೈಕ್‌ನಲ್ಲಿ ಮಾವಿನಕಟ್ಟೆ ಬೈರುಮನೆ ಕ್ರಾಸ್ ಸಮೀಪ ಡಿವೈಡರ್ ದಾಟಿ ಶಿರಾಲಿ ಕಡೆಗೆ ತೆರಳುತ್ತಿದ್ದನು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಕೆಎ-೨೨/ಎಂಇ-೫೦೦೯ ನೋಂದಣಿ ಸಂಖ್ಯೆಯ ಕಾರನ್ನು ಚಾಲಕ ಸತೀಶ ಸೋಮಪ್ಪ ಬಜಂತ್ರಿ (೨೪) ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಡಿಕ್ಕಿಯ ರಭಸಕ್ಕೆ ಜೀವನ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು, ಮುಖ, ತಲೆ, ಎರಡೂ ಕೈಗಳು ಹಾಗೂ ಎರಡೂ ಕಾಲುಗಳಿಗೆ ಗಂಭೀರ ರಕ್ತಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ನಾರಾಯಣ ದೇವಾಡಿಗ ಅವರು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ:

೧ ಕೋಟಿ ವೆಚ್ಚದಲ್ಲಿ ಮುರುಡೇಶ್ವರ ಗಣೇಶೋತ್ಸವ; ೫೦ನೇ ವರ್ಷದ ಸಂಭ್ರಮಕ್ಕೆ ಸಿದ್ಧತೆ

ಸರ್ವರ್ ಸಮಸ್ಯೆಯಿಂದ ಪಡಿತರದಾರರ ಪರದಾಟ; ಸೆ ೩೦ರ ಗಡುವಿನಿಂದ ಹೆಚ್ಚಿದ ಆತಂಕ

ಕೆಲಸಕ್ಕೆ ಸೇರಿದ ಎರಡೇ ದಿನಕ್ಕೆ ದುರಂತ; ಭಟ್ಕಳದಲ್ಲಿ ಕಾರು ಡಿಕ್ಕಿಗೆ ವ್ಯಕ್ತಿ ಸಾವು

ಭಟ್ಕಳದಲ್ಲಿ ಹೆಚ್ಚುತ್ತಿರುವ ಭಿಕ್ಷಾಟನೆ: ಭಿಕ್ಷೆಯ ಹಿಂದೆ ನಡೆಯುತ್ತಿರುವುದೇನು?