ಭಟ್ಕಳ ಡೈರಿ ವರದಿ
ಭಟ್ಕಳ: ಪಡಿತರ ಪಡೆಯಲು ಸರದಿ ಸಾಲಿನಲ್ಲಿ ನಿಂತು ಸುಸ್ತಾಗಿದ್ದ ಪಡಿತರದಾರರಿಗೆ ಇದೀಗ ಮತ್ತೆ ಕೆವೈಸಿ ಮಾಡಿಸಿಕೊಳ್ಳುವ ಸರದಿ ಬಂದಿದೆ. ನ್ಯಾಯಬೆಲೆ ಅಂಗಡಿಗಳ ಮುಂದೆ ತಾಸುಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ವರ್ ಸಮಸ್ಯೆ ಪಡಿತರದಾರರ ಗೋಳನ್ನು ಮತ್ತಷ್ಟು ಹೆಚ್ಚಿಸಿದೆ.
ಕಳೆದ ತಿಂಗಳು ಎರಡು ಬಾರಿ ಬಯೋಮೆಟ್ರಿಕ್ ನೀಡಿ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಪಡಿತರವನ್ನು ಪಡೆಯಲು ಪಡಿತರದಾರರು ಹರಸಾಹಸಪಟ್ಟಿದ್ದರು. ಸರ್ವರ್ ಸಮಸ್ಯೆಯ ನಡುವೆಯೇ ಪಡಿತರ ಪಡೆದುಕೊಂಡಿದ್ದ ಜನರು, ಇದೀಗ ಸೆಪ್ಟೆಂಬರ್ ಆರಂಭದಿಂದ ಮನೆಯ ಸದಸ್ಯರ ಕೆವೈಸಿಗಾಗಿ ಮತ್ತೆ ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಲ್ಲುವಂತಾಗಿದೆ.
ಕೆವೈಸಿ ಕಡ್ಡಾಯ ಮಾಡಿರುವ ಸರ್ಕಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ನಿಯಮಗಳು ಪಡಿತರದಾರರಿಗೆ ತಲೆನೋವಾಗಿ ಪರಿಣಮಿಸುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಇಷ್ಟು ದಿನ ಪಡಿತರ ಪಡೆಯಲು ಮಾತ್ರ ನ್ಯಾಯಬೆಲೆ ಅಂಗಡಿಗೆ ಬರುತ್ತಿದ್ದ ಜನರು, ಇದೀಗ ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ರೇಷನ್ ಕಾರ್ಡ್‌ನಲ್ಲಿರುವ ಕುಟುಂಬ ಸದಸ್ಯರ ಕೆವೈಸಿ ಪೂರ್ಣಗೊಳಿಸಲು ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರ ಕೆವೈಸಿ ಕಡ್ಡಾಯ ಮಾಡಿರುವುದು ಸರಿ. ಆದರೆ ಅದಕ್ಕೆ ಅಗತ್ಯವಿರುವ ಸರ್ವರ್ ಸಾಮರ್ಥ್ಯ ಹಾಗೂ ಸಾಕಷ್ಟು ಸಮಯಾವಕಾಶ ಕಲ್ಪಿಸದೆ ಪ್ರಕ್ರಿಯೆ ಜಾರಿಗೊಳಿಸಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಡಿತರ ವಿತರಣೆ ಜೊತೆಗೆ ಕೆವೈಸಿ ಹೊರೆ: ಕಳೆದ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಸರ್ವರ್ ಸಮಸ್ಯೆ ಇಡೀ ರಾಜ್ಯವನ್ನೇ ಕಾಡಿತ್ತು. ಕೊನೆಯ ಹಂತದಲ್ಲಿ ಸರ್ವರ್ ವ್ಯವಸ್ಥೆಯಲ್ಲಿ ಕೆಲಮಟ್ಟಿಗೆ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಪಡಿತರ ವಿತರಣೆ ಪೂರ್ಣಗೊಳಿಸಲಾಗಿತ್ತು. ಸರ್ವರ್ ಸಮಸ್ಯೆಯ ನಡುವೆಯೂ ನ್ಯಾಯಬೆಲೆ ಅಂಗಡಿಕಾರರು ಹಗಲು-ರಾತ್ರಿ ಎನ್ನದೆ ಪಡಿತರ ವಿತರಿಸಲು ಶ್ರಮಿಸಿದ್ದರು. ಆದರೆ ಇದೀಗ ಪಡಿತರ ವಿತರಣೆಯ ಜೊತೆಗೆ ಕೆವೈಸಿ ಪ್ರಕ್ರಿಯೆಯನ್ನೂ ಇದೇ ವ್ಯವಸ್ಥೆಯಲ್ಲಿ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಒಬ್ಬರ ಕೆವೈಸಿಗೆ ೧೫-೨೦ ನಿಮಿಷ:
ಒಂದು ರೇಷನ್ ಕಾರ್ಡ್‌ನ ಒಬ್ಬ ಸದಸ್ಯರ ಕೆವೈಸಿ ಮಾಡಲು ಸುಮಾರು ೧೫ರಿಂದ ೨೦ ನಿಮಿಷಗಳವರೆಗೆ ಸಮಯ ಬೇಕಾಗುತ್ತಿದೆ ಎನ್ನಲಾಗಿದೆ. ಹೀಗಿರುವಾಗ ದಿನವಿಡೀ ಕೆಲಸ ಮಾಡಿದರೂ ನ್ಯಾಯಬೆಲೆ ಅಂಗಡಿಯಲ್ಲಿ ಸೀಮಿತ ಸಂಖ್ಯೆಯ ಕಾರ್ಡ್‌ಗಳ ಕೆವೈಸಿ ಮಾತ್ರ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದರ ನಡುವೆ ಆಗಸ್ಟ್-ಸೆಪ್ಟೆಂಬರ್ ತಿಂಗಳ ಪಡಿತರ ವಿತರಣೆಯೂ ನಡೆಯುತ್ತಿರುವುದರಿಂದ ಒಂದೇ ಸರ್ವರ್‌ನಲ್ಲಿ ಪಡಿತರ ವಿತರಣೆ ಮತ್ತು ಕೆವೈಸಿ ಎರಡನ್ನೂ ನಿರ್ವಹಿಸುವುದು ಕಷ್ಟಕರವಾಗಲಿದೆ ಎಂದು ನ್ಯಾಯಬೆಲೆ ಅಂಗಡಿಕಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ ೩೦ರ ಗಡುವು: ಕೆವೈಸಿ ಪ್ರಕ್ರಿಯೆಗೆ ಸರ್ಕಾರ ಸೆಪ್ಟೆಂಬರ್ ೩೦ರವರೆಗೆ ಗಡುವು ನೀಡಿದೆ. ನಿಗದಿತ ಅವಧಿಯೊಳಗೆ ಕೆವೈಸಿ ಪೂರ್ಣಗೊಳಿಸದ ರೇಷನ್ ಕಾರ್ಡ್‌ಗಳು ರದ್ದಾಗಬಹುದು ಎಂಬ ಆತಂಕ ಪಡಿತರದಾರರಲ್ಲಿ ಮೂಡಿದೆ. ಕೆವೈಸಿ ಪೂರ್ಣಗೊಳ್ಳದಿದ್ದರೆ ಅದಕ್ಕೆ ಪಡಿತರದಾರರೇ ಹೊಣೆಗಾರರು ಎಂಬ ಸಂದೇಶವೂ ಜನರಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ. ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸದ ಸಂದರ್ಭದಲ್ಲಿ ಜನರು ಹೇಗೆ ನಿಗದಿತ ಗಡುವಿನೊಳಗೆ ಕೆವೈಸಿ ಪೂರ್ಣಗೊಳಿಸಬೇಕು ಎಂಬ ಪ್ರಶ್ನೆ ಎದುರಾಗಿದೆ.
ಗ್ರಾಮ ಒನ್, ಕರ್ನಾಟಕ ಒನ್‌ನಲ್ಲಿ ಅವಕಾಶ ನೀಡಿ: ಕೆವೈಸಿ ಪ್ರಕ್ರಿಯೆಯನ್ನು ಕೇವಲ ನ್ಯಾಯಬೆಲೆ ಅಂಗಡಿಗಳಿಗೆ ಸೀಮಿತಗೊಳಿಸದೆ ಗ್ರಾಮ ಒನ್, ಕರ್ನಾಟಕ ಒನ್ ಸೇರಿದಂತೆ ಸೈಬರ್ ಕೇಂದ್ರಗಳಲ್ಲಿಯೂ ಕೈಗೊಳ್ಳಲು ಅವಕಾಶ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಅಲ್ಲದೆ, ಕೆವೈಸಿಗೆ ಕನಿಷ್ಠ ಎರಡು ತಿಂಗಳ ಕಾಲಾವಕಾಶ ನೀಡಿದರೆ ಪಡಿತರದಾರರಿಗೆ ಅನುಕೂಲವಾಗಲಿದೆ. ಇದರಿಂದ ನ್ಯಾಯಬೆಲೆ ಅಂಗಡಿಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ ಯಾವಾಗ?: ಹಿಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಐದು ಕೆ.ಜಿ.ಯಂತೆ ಒಟ್ಟು ಹತ್ತು ಕೆ.ಜಿ. ಅಕ್ಕಿ ನೀಡುತ್ತಿದ್ದ ಸಂದರ್ಭದಲ್ಲೂ ಇಂತಹ ತೀವ್ರ ಸರ್ವರ್ ಸಮಸ್ಯೆ ಇರಲಿಲ್ಲ ಎಂಬುದು ಪಡಿತರದಾರರ ಅಭಿಪ್ರಾಯ. ಮುಂಗಡವಾಗಿ ತಿಂಗಳ ಪಡಿತರ ವಿತರಣೆ ಆರಂಭವಾದ ಬಳಿಕ ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಒಂದೇ ಅವಧಿಯಲ್ಲಿ ಪಡಿತರ ವಿತರಣೆ ನಡೆಯುವುದರಿಂದ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದೆ ಎನ್ನಲಾಗಿದೆ. ಈ ಸಮಸ್ಯೆಗೆ ಸರ್ಕಾರ ಹಾಗೂ ಆಹಾರ ಇಲಾಖೆ ತಾಂತ್ರಿಕ ತಜ್ಞರ ತಂಡದ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಪಡಿತರ ವಿತರಣೆ ಮತ್ತು ಕೆವೈಸಿ ಕಡ್ಡಾಯದ ವಿಚಾರದಲ್ಲಿ ಸಾರ್ವಜನಿಕರ ಅಸಮಾಧಾನ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಇದನ್ನೂ ಓದಿ:
ಕೆಲಸಕ್ಕೆ ಸೇರಿದ ಎರಡೇ ದಿನಕ್ಕೆ ದುರಂತ; ಭಟ್ಕಳದಲ್ಲಿ ಕಾರು ಡಿಕ್ಕಿಗೆ ವ್ಯಕ್ತಿ ಸಾವು
ಭಟ್ಕಳದಲ್ಲಿ ಹೆಚ್ಚುತ್ತಿರುವ ಭಿಕ್ಷಾಟನೆ: ಭಿಕ್ಷೆಯ ಹಿಂದೆ ನಡೆಯುತ್ತಿರುವುದೇನು?
