ಭಟ್ಕಳ ಡೈರಿ ವರದಿ
ಭಟ್ಕಳ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಘಟನೆ ಹಸಿರಾಗಿರುವ ಬೆನ್ನಲ್ಲೇ ಮತ್ತೆ ಭಟ್ಕಳದಲ್ಲಿ ಕಲ್ಲು ತೂರಾಟ ನಡೆದಿದೆ. ಗಣೇಶೋತ್ಸವದ ಅಂಗವಾಗಿ ಅಲಂಕೃತಗೊಳಿಸಲಾಗಿದ್ದ ಪೆಂಡಾಲ್ ಮೇಲೆ ಕಲ್ಲು ಎಸೆದ ಘಟನೆ ಶುಕ್ರವಾರ ಬೆಳಗ್ಗೆ ಭಟ್ಕಳದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಭಟ್ಕಳ ತಾಲೂಕಾ ರಿಕ್ಷಾ ಚಾಲಕರ-ಮಾಲಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ದೂರು ಸಲ್ಲಿಸಲಾಗಿದೆ. ಎಸ್ಪಿ ದಿಲೀಪನ್ ಅವರಿಗೂ ಮನವಿ ಸಲ್ಲಿಸಲಾಗಿದೆ.
ಕಳೆದ ೪೩ ವರ್ಷಗಳಿಂದ ಭಟ್ಕಳದ ಹಳೆ ತಹಸೀಲ್ದಾರ್ ಕಚೇರಿ ಹಿಂಭಾಗದಲ್ಲಿರುವ ಸರ್ವೆ ನಂಬರ್ ೫೭೩ಬಿಯಲ್ಲಿನ ಸುಮಾರು ೧೦ ಗುಂಟೆ ಜಾಗದಲ್ಲಿ ರಿಕ್ಷಾ ಚಾಲಕರ-ಮಾಲಕರ ಸಂಘದ ವತಿಯಿಂದ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಸೆಪ್ಟೆಂಬರ್ ೧೮ರಂದು ಸಂಜೆ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಆಯೋಜಿಸಲಾಗಿದೆ.
ಇದೇ ದಿನ ಬೆಳಗ್ಗೆ ಸುಮಾರು ೭.೨೦ರ ವೇಳೆಗೆ ಅಂಜುಮನ್ ಶಾಲೆಯ ಮೈದಾನದ ಕಡೆಯಿಂದ ಯಾರೋ ಕಿಡಿಗೇಡಿಗಳು ಗಣೇಶೋತ್ಸವದ ಮೇಲ್ಟಾವಣಿಯ ತಗಡಿನ ಶೀಟ್ ಮೇಲೆ ಮೂರು-ನಾಲ್ಕು ಕಲ್ಲುಗಳನ್ನು ಎಸೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಲ್ಲುಗಳು ಮೇಲ್ಟಾವಣಿಯ ಮೇಲೆ ಬಿದ್ದು ಕೆಳಗೆ ಬಂದಿದ್ದು, ಅದೃಷ್ಟವಶಾತ್ ಘಟನೆಯಿಂದ ಯಾರಿಗೂ ಗಾಯವಾಗಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಆಟೋ ಚಾಲಕರು ಹಾಗೂ ಗಣೇಶೋತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು ಎಂದು ತಿಳಿಸಲಾಗಿದೆ.
ಘಟನೆಯಿಂದ ಗಣೇಶೋತ್ಸವ ಆಯೋಜಕರಲ್ಲಿ ಬೇಸರ ಉಂಟಾಗಿದ್ದು, ಕಲ್ಲು ಎಸೆದವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ. ಇದೇ ವೇಳೆ ಶುಕ್ರವಾರ ಸಂಜೆ ೬.೩೦ಕ್ಕೆ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಮೆರವಣಿಗೆ ಸಾಗುವ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸಿ, ಮೆರವಣಿಗೆ ಸುಗಮವಾಗಿ ಸಾಗಲು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ.
ಭಟ್ಕಳ ತಾಲೂಕಾ ರಿಕ್ಷಾ ಚಾಲಕರ-ಮಾಲಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಗಣಪತಿ ನಾಯ್ಕ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ಸೇರಿದಂತೆ ಹಲವರು ಸಾಥ್ ನೀಡಿದರು.
ಇದನ್ನೂ ಓದಿ:
ಭಟ್ಕಳದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ: ಘಟನಾ ಸ್ಥಳಕ್ಕೆ ಡಿಐಜಿ ಭೇಟಿ
ಭಟ್ಕಳ ಕಲ್ಲು ತೂರಾಟ ಪ್ರಕರಣ: ಜೀವನ ನಾಯ್ಕ, ದೇವರಾಜ ನಾಯ್ಕಗೆ ಜಾಮೀನು
ಹಿಂದೂ ಯುವಕರ ಬಂಧನ: ಭಟ್ಕಳ ಶಹರ ಠಾಣೆಗೆ ಮುತ್ತಿಗೆ
ಭಟ್ಕಳದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ: ದೂರು-ಪ್ರತಿ ದೂರು ದಾಖಲು

