ಭಟ್ಕಳ ಡೈರಿ ವರದಿ

ಭಟ್ಕಳ: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಗುಳಮಿ ರೈಲ್ವೆ ನಿಲ್ದಾಣ ರಸ್ತೆಯ ಮದರಸಾ ಹಾಗೂ ಮಸೀದಿ ಸಮೀಪ ಕಲ್ಲು ತೂರಾಟ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿವೆ. ಘಟನೆಯಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸೆ ೧೬ರಂದು ಬುಧವಾರ ರಾತ್ರಿ ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಗಣೇಶ ವಿಗ್ರಹವನ್ನು ವಿಸರ್ಜನೆಗೆ ಕೊಂಡೊಯ್ಯಲು ಮೆರವಣಿಗೆ ನಡೆಸಲಾಗಿತ್ತು. ರಾತ್ರಿ ಸುಮಾರು ೮.೨೦ಕ್ಕೆ ಮೆರವಣಿಗೆ ತಲಾಂದದಿಂದ ಆರಂಭವಾಗಿ ಗುಳಮಿ ರೈಲ್ವೆ ಬ್ರಿಡ್ಜ್ ದಾಟಿ ಮದರಸಾ ಹಾಗೂ ರೈಲ್ವೆ ನಿಲ್ದಾಣ ರಸ್ತೆಯತ್ತ ಸಾಗುತ್ತಿತ್ತು. ಈ ವೇಳೆ ರಾತ್ರಿ ಸುಮಾರು ೯.೩೦ರ ವೇಳೆಗೆ ರಾಮಚಂದ್ರ ನಾಯ್ಕ ಅವರಿಗೆ ಸೇರಿದ ಕಟ್ಟಡದ ಮೇಲಿನಿಂದ ಯಾರೋ ಕಿಡಿಗೇಡಿಗಳು ಗಣೇಶ ವಿಗ್ರಹದ ಕಡೆಗೆ ಕಲ್ಲುಗಳನ್ನು ತೂರಿದ್ದಾರೆ ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿ ತಲಾಂದ ಅಧ್ಯಕ್ಷ ರಾಜು ಸಂಕಪ್ಪ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಕಲ್ಲು ತೂರಾಟದಿಂದ ಮೆರವಣಿಗೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದಕ್ಕೂ ಮೊದಲು ಇದೇ ಘಟನೆಗೆ ಸಂಬಂಧಿಸಿದಂತೆ ಬಂದರ ರಸ್ತೆ ೫ನೇ ಕ್ರಾಸ್ ನಿವಾಸಿ ಅಬ್ದುಲ್ ಅಲಿಂ (೬೭) ಹಾಗೂ ಶಾಹುಲ್ ಅಮೀನ್ ಗವಾಯಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಅವರ ದೂರಿನ ಪ್ರಕಾರ, ಮೆರವಣಿಗೆ ಗುಳಮಿ ರೈಲ್ವೆ ಬ್ರಿಡ್ಜ್ ದಾಟಿ ರೈಲ್ವೆ ನಿಲ್ದಾಣ ರಸ್ತೆಯ ಮೂಲಕ ಸಾಗುತ್ತಿದ್ದ ವೇಳೆ ರಾತ್ರಿ ೯.೪೫ರ ಸುಮಾರಿಗೆ ರಸ್ತೆಯ ಪಕ್ಕದ ಪ್ರಥಮ ಮಹಡಿಯಲ್ಲಿರುವ ಇಸ್ಮಾಯಿಲ್ ಸುನ್ನಿ ಜಾಮೀಯಾ ಮಸೀದಿ ಹಾಗೂ ನೆಲಮಹಡಿಯಲ್ಲಿರುವ ತಾಜುಸುನ್ನಾ ಅರೇಬಿಕ್ ಮದರಸಾ ಮೇಲೆ ಕಲ್ಲುಗಳನ್ನು ತೂರಲಾಗಿದೆ. ಇದರಿಂದ ಮಸೀದಿ ಹಾಗೂ ಮದರಸಾದ ಕಿಟಕಿ ಗಾಜುಗಳಿಗೆ ಹಾನಿಯಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ನೂರಾರು ಜನರು ಭಟ್ಕಳ ನಗರ ಪೊಲೀಸ್ ಠಾಣೆ ಎದುರು ಜಮಾಯಿಸಿ, ಕಲ್ಲು ತೂರಾಟ ನಡೆಸಿದವರನ್ನು ಶೀಘ್ರ ಪತ್ತೆಹಚ್ಚಿ ಬಂಧಿಸುವಂತೆ ಆಗ್ರಹಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕೆಲ ಸದಸ್ಯರನ್ನು ಠಾಣೆಗೆ ಕರೆಸಿಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮಸೀದಿಗೆ ಕಲ್ಲುತೂರಾಟ ಸಂಬಂಧಿಸಿದಂತೆ ಮಧ್ಯರಾತ್ರಿ ೧೨:೧೫ರ ವೇಳೆಗೆ ಪ್ರಕರಣ ದಾಖಲಾಗಿದ್ದರೆ, ಗಣೇಶೋತ್ಸವ ಸಮಿತಿ ಅಧ್ಯಕ್ಷರು ಗುರುವಾರ ನಸುಕಿನ ಜಾವ ೪ ಗಂಟೆಗೆ ಪ್ರತಿದೂರು ದಾಖಲಿಸಿದ್ದಾರೆ. ಎರಡೂ ದೂರುಗಳ ಹಿನ್ನೆಲೆಯಲ್ಲಿ ಪೊಲೀಸರು ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ಕಲ್ಲು ತೂರಾಟ ನಡೆಸಿದವರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ ಕೃಷ್ಣಮೂರ್ತಿ, ಎಎಸ್ಪಿ ರಾನು ಗುಪ್ತ, ಸಿಪಿಐ ದಿವಾಕರ ಪಿ ಎಂ ಹಾಗೂ ಪಿಎಸ್‌ಐ ನವೀನ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಲಭ್ಯವಿರುವ ಇತರ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳ ಗುರುತು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:

ಸೆ ೨೦ರಂದು ಭಟ್ಕಳದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಭಟ್ಕಳದಲ್ಲಿ ಕಳೆದೊಂದು ವಾರ: ಅಪಘಾತ, ಕ್ರೀಡೆ, ಶಿಕ್ಷಣ, SIR ಸೇರಿ ಪ್ರಮುಖ ಬೆಳವಣಿಗೆಗಳು