ಭಟ್ಕಳ ಡೈರಿ ವರದಿ

ಭಟ್ಕಳ: ಮುರುಡೇಶ್ವರ ಹಿರೇದೋಮಿ ತೂದಳ್ಳಿಯ ಹಿಂದೂ ನಾಮಧಾರಿ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಬೆಳ್ಳಿ ಮಹೋತ್ಸವದ ಗಣೇಶೋತ್ಸವವು ಐದು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿ ಅದ್ದೂರಿಯಾಗಿ ಸಂಪನ್ನಗೊಂಡಿತು. ಐದು ದಿನಗಳ ಉತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ಮನರಂಜನಾ ಕಾರ್ಯಕ್ರಮಗಳು ಹಾಗೂ ಸಭಾ ಕಾರ್ಯಕ್ರಮಗಳು ನಡೆದವು. ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.

ಉತ್ಸವದ ಅಂಗವಾಗಿ ಪ್ರತಿದಿನ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಮೂರು ದಿನಗಳ ಕಾಲ ಭಕ್ತರಿಗೆ ಮಹಾ ಅನ್ನಸಂತರ್ಪಣೆಯನ್ನೂ ಆಯೋಜಿಸಲಾಗಿತ್ತು.

ಪೌರಾಣಿಕ ವೇಷಗಳಿಂದ ಗಮನ ಸೆಳೆದ ಮೆರವಣಿಗೆ:

ಉತ್ಸವದ ಕೊನೆಯ ದಿನ ನಡೆದ ಗಣೇಶ ವಿಸರ್ಜನಾ ಮೆರವಣಿಗೆ ಭರ್ಜರಿ ಮೆರುಗು ನೀಡಿತು. ವಿವಿಧ ಸ್ತಬ್ಧಚಿತ್ರಗಳು, ಟ್ಯಾಬ್ಲೋಗಳು ಹಾಗೂ ಪೌರಾಣಿಕ ವೇಷಧಾರಿಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದರು. ದುರ್ಗಾದೇವಿ, ಮಹಿಷಾಸುರ, ಈಶ್ವರ, ಪಾರ್ವತಿ ಸೇರಿದಂತೆ ವಿವಿಧ ಪೌರಾಣಿಕ ಪಾತ್ರಗಳ ವೇಷಧಾರಿಗಳು ನೋಡುಗರ ಗಮನ ಸೆಳೆದರು. ಯಕ್ಷಗಾನ ವೇಷಧಾರಿಗಳ ಪ್ರದರ್ಶನ ಹಾಗೂ ಚಂಡೆ ವಾದನ ತಂಡದ ಕಲರವ ಮೆರವಣಿಗೆಯ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು.

ಮಹಿಳೆಯರು ಹಾಗೂ ಪುರುಷರು ಸಮವಸ್ತ್ರ ಧರಿಸಿ ಭಜನೆ ಮತ್ತು ನೃತ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿ ಉತ್ಸವದ ವೈಭವವನ್ನು ಕಣ್ತುಂಬಿಕೊಂಡರು.

ಸೌಹಾರ್ದತೆಗೆ ಸಾಕ್ಷಿಯಾದ ಮೆರವಣಿಗೆ: ಗಣೇಶ ವಿಸರ್ಜನಾ ಮೆರವಣಿಗೆ ಸಾಗುವ ಸಂದರ್ಭದಲ್ಲಿ ಸ್ಥಳೀಯ ಮುಸ್ಲಿಂ ಸಮುದಾಯದವರು ಸಹಕರಿಸಿ ಶಾಂತಿಯುತವಾಗಿ ಮೆರವಣಿಗೆ ಸಾಗಲು ನೆರವಾದರು. ಪರಸ್ಪರ ಸಹಕಾರ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ ಈ ನಡೆ ಉತ್ಸವದ ಪ್ರಮುಖ ಗಮನಾರ್ಹ ಅಂಶವಾಗಿ ಮೂಡಿಬಂದಿತು.

ಸಮುದ್ರ ತೀರದಲ್ಲಿ ವಿಸರ್ಜನೆ: ಮೆರವಣಿಗೆಯ ಬಳಿಕ ತೂದಳ್ಳಿ ಸಮುದ್ರ ತೀರದಲ್ಲಿ ಗಣೇಶನ ವಿಗ್ರಹವನ್ನು ಭಕ್ತಿಭಾವದಿಂದ ವಿಸರ್ಜಿಸಲಾಯಿತು. ಬೆಳ್ಳಿ ಮಹೋತ್ಸವದ ಅಂಗವಾಗಿ ನಡೆದ ಐದು ದಿನಗಳ ಗಣೇಶೋತ್ಸವವು ಭಕ್ತಿ, ಸಾಂಸ್ಕೃತಿಕ ವೈಭವ ಹಾಗೂ ಸೌಹಾರ್ದತೆಯ ಸಂದೇಶದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.

ಪೊಲೀಸ್ ಬಂದೋಬಸ್ತ್:  ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಹಾಗೂ ಎಎಸ್‌ಪಿ ರಾನು ಗುಪ್ತ ಮಾರ್ಗದರ್ಶನದಲ್ಲಿ ಉತ್ಸವಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮುರುಡೇಶ್ವರ ಪಿಐ ಜಗದೀಶ ಹಂಚನಾಳ ಹಾಗೂ ಪಿಎಸ್‌ಐ ಹಣಮಂತ ಬಿರಾದಾರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ:

ಭಟ್ಕಳ: ಕಲ್ಲು ತೂರಾಟದ ಘಟನೆಯ ಬಳಿಕ ಬಿಗಿ ಪೊಲೀಸ್ ಭದ್ರತೆ; ಶಾಂತಿಯುತವಾಗಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆ

ಮನೆಯ ಕಟ್ಟಡವನ್ನೇ ಸ್ಥಳಾಂತರಿಸುವ ಭಟ್ಕಳದ ಆನಂದ ಆಚಾರಿ