ಭಟ್ಕಳ ಡೈರಿ ವರದಿ
ಕಾರವಾರ: ತಾಲೂಕಿನ ಗ್ರಾಮೀಣ ಪ್ರದೇಶವಾದ ಕಡವಾಡದಲ್ಲಿ ಹಗಲು-ರಾತ್ರಿ ಎನ್ನದೆ ಪದೇ ಪದೇ ವಿದ್ಯುತ್ ಕಡಿತವಾಗುತ್ತಿರುವುದು ಹಾಗೂ ವಿವಿಧೆಡೆ ವಿದ್ಯುತ್ ತಂತಿಗಳು ಕೆಳಮಟ್ಟಕ್ಕೆ ವಾಲಿಕೊಂಡಿರುವ ಕುರಿತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಹಾಗೂ ಅಪಾಯಕಾರಿಯಾಗಿ ವಾಲಿಕೊಂಡಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಗ್ರಾಮಸ್ಥರು ಹೆಸ್ಕಾಂ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿಯೂ ಪದೇ ಪದೇ ವಿದ್ಯುತ್ ಕಡಿತವಾಗಿದ್ದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ. ಮನೆಗಳು ಹಾಗೂ ಅಂಗಡಿ-ಮುಂಗಟ್ಟುಗಳಲ್ಲಿ ಫ್ರಿಜ್ಗಳಲ್ಲಿ ಸಂಗ್ರಹಿಸಿಟ್ಟಿದ್ದ ಹಾಲು, ತರಕಾರಿ ಸೇರಿದಂತೆ ಹಲವು ವಸ್ತುಗಳು ವಿದ್ಯುತ್ ವ್ಯತ್ಯಯದಿಂದ ಹಾಳಾಗುತ್ತಿವೆ ಎಂದು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಶ ಗುನಗಿ ಹೇಳಿದರು.
ಕಡವಾಡದ ಭೋವಿವಾಡ, ಗೌಡಕೇರಿ, ಶಾಂಬಾವಾಡ, ಹಳೇಕೋಟ, ಕುಂಬಾರವಾಡ, ಗುನಗಿವಾಡ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳುವ ರಸ್ತೆಗಳಲ್ಲಿ ಹಾಗೂ ಶಾಲೆಯ ಸಮೀಪ ವಿದ್ಯುತ್ ತಂತಿಗಳು ಕೆಳಮಟ್ಟಕ್ಕೆ ವಾಲಿಕೊಂಡಿವೆ. ಈ ತಂತಿಗಳಿಂದ ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಹೆಸ್ಕಾಂ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ತಂತಿಗಳನ್ನು ಸರಿಪಡಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕಿಶೋರ ಕಡವಾಡಕರ ಆಗ್ರಹಿಸಿದರು.
ಗ್ರಾಮದ ವಿವಿಧೆಡೆ ಇರುವ ವಿದ್ಯುತ್ ಸಮಸ್ಯೆಗಳ ಕುರಿತು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದು ಆರ್ ನಾಯ್ಕ ಅಧಿಕಾರಿಗಳ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಹುತಾತ್ಮ ವೀರಯೋಧ ವಿನೋದ ನಾಯ್ಕ ಅವರ ತಂದೆ ಮಹಾದೇವ ಡಿ ನಾಯ್ಕ, ಮಾಜಿ ಅಧ್ಯಕ್ಷ ಆನಂದು ಆರ್ ನಾಯ್ಕ ಹಾಗೂ ಪ್ರದೀಪ ಕಡವಾಡಕರ ಉಪಸ್ಥಿತರಿದ್ದರು.
ಇದನ್ನೂ ಓದಿ:
ಭಟ್ಕಳ ಖೋಖೋ ಕ್ರೀಡಾಕೂಟ: ಹೊನ್ನೆಮಡಿ ಶಾಲೆಗೆ ಬಾಲಕ-ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ

