ಭಟ್ಕಳ ಡೈರಿ ವರದಿ
ಭಟ್ಕಳ: ರೈಲ್ವೆ ನಿಲ್ದಾಣ ಸಮೀಪದ ಶ್ರೀ ನಾಗ ಮಾಸ್ತಿ ಕ್ಷೇತ್ರದ ಎದುರು ಸಾರ್ವಜನಿಕರು ನದಿ ಕಟ್ಟು ನಿರ್ಮಿಸಿ ಜಲ ಸಂವರ್ಧನಾ ಕಾರ್ಯದಲ್ಲಿ ಶ್ರಮದಾನ ಮಾಡಿದರು.
ಹಲವು ವರ್ಷಗಳಿಂದ ಈ ನದಿಗೆ ಕಟ್ಟು ಕಟ್ಟುವ ಮೂಲಕ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಾಮಾನ್ಯವಾಗಿ ಪ್ರತಿವರ್ಷ ನವೆಂಬರ್–ಡಿಸೆಂಬರ್ ತಿಂಗಳಲ್ಲಿ ಕಟ್ಟು ನಿರ್ಮಿಸಲಾಗುತ್ತಿತ್ತು. ಆದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಅಂತರ್ಜಲ ಮಟ್ಟ ಕುಸಿಯುತ್ತಿರುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಪರಿಸ್ಥಿತಿಯ ಅಗತ್ಯತೆಯನ್ನು ಮನಗಂಡು ಸುಮಾರು ಎರಡು ತಿಂಗಳು ಮುಂಚಿತವಾಗಿಯೇ ನದಿ ಕಟ್ಟು ನಿರ್ಮಿಸುವ ಕಾರ್ಯ ಕೈಗೊಳ್ಳಲಾಯಿತು.
ನಾಗ ಮಾಸ್ತಿ ಸೇವಾ ಸಮಿತಿ ಅಧ್ಯಕ್ಷ ಲೋಕೇಶ ನಾಯ್ಕ, ಉಪಾಧ್ಯಕ್ಷ ಮಹಾಬಲೇಶ್ವರ ನಾಯ್ಕ ಹಾಗೂ ಮಂಜು ನಾಯ್ಕ ನೇತೃತ್ವದಲ್ಲಿ ಮುಟ್ಟಳ್ಳಿ–ಮೂಡಭಟ್ಕಳ ಭಾಗದ ಐವತ್ತಕ್ಕೂ ಅಧಿಕ ಕ್ರಿಯೇಟಿವ್ ಫ್ರೆಂಡ್ಸ್ ತಂಡದ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು. ಕ್ರಿಯಾಶೀಲ ಗೆಳೆಯರ ಬಳಗದ ಮುಖಂಡರಾದ ಅರುಣ ನಾಯ್ಕ ಚೌತನಿ, ಪಾಂಡು ನಾಯ್ಕ ಆಸರ್ಕೇರಿ, ರವಿ ನಾಯಕ ಮಣ್ಕುಳಿ ಸೇರಿದಂತೆ ಹಲವರು ಜಲ ಸಂವರ್ಧನಾ ಕಾರ್ಯದಲ್ಲಿ ಭಾಗವಹಿಸಿದರು.
ಜಲ ಸಂವರ್ಧನ ಸಮಿತಿಯ ಹಿರಿಯ ಸದಸ್ಯರಾದ ಬಾಳೇರಿ ದಂಪತಿ, ರವಿ ಆಚಾರಿ, ರಾಮನಾಥ ಬಳೆಗಾರ ಹಾಗೂ ನಾಗಮಾಸ್ತಿ ಅಭಿವೃದ್ಧಿ ಸಮಿತಿ, ನಾಗಮಾಸ್ತಿ ಕ್ಷೇತ್ರ ಅಭಿವೃದ್ಧಿ ಟ್ರಸ್ಟ್, ಶ್ರೀ ನಾಗಮಾಸ್ತಿ ಯೋಗ ಸಮಿತಿ ಸದಸ್ಯರು ಮತ್ತು ನಾಗಮಾಸ್ತಿ ಭಕ್ತ ವೃಂದದವರು ಸತ್ಕಾರ್ಯಕ್ಕೆ ಕೈಜೋಡಿಸಿದರು.
ಈ ಸಂದರ್ಭದಲ್ಲಿ ನದಿ ಕಟ್ಟು ನಿರ್ಮಾಣದ ಜೊತೆಗೆ ಶ್ರೀ ನಾಗಮಾಸ್ತಿ ದೇವಾಲಯದ ಆವರಣವನ್ನು ನವರಾತ್ರಿ ಪ್ರಯುಕ್ತ ಸ್ವಚ್ಛಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ನಾಗಮಾಸ್ತಿ ಟ್ರಸ್ಟ್ ಅಧ್ಯಕ್ಷ ಸತೀಶ ಕುಮಾರ್ ಕೃತಜ್ಞತೆ ಸಲ್ಲಿಸಿದರು. ಸ್ಥಳೀಯರ ಸಹಭಾಗಿತ್ವದ ಇಂತಹ ಜಲ ಸಂವರ್ಧನಾ ಕಾರ್ಯಗಳು ಮುಂದಿನ ದಿನಗಳಲ್ಲಿ ಅಂತರ್ಜಲ ಸಂರಕ್ಷಣೆಗೆ ಸಹಕಾರಿಯಾಗಲಿವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಇದನ್ನೂ ಓದಿ:
ಸಂಪಾದಕೀಯ: ಶಾಂತಿ ಕಾಪಾಡುವುದು ಎಲ್ಲರ ಜವಾಬ್ದಾರಿ
ಭಟ್ಕಳದಲ್ಲಿ ಕಳೆದೊಂದು ವಾರ: ಕಲ್ಲು ತೂರಾಟದಿಂದ ಪೊಲೀಸ್ ಬಂದೋಬಸ್ತ್‌ವರೆಗೆ ಏನಾಯಿತು?

