ಸಂಪಾದಕೀಯ: ವಿವೇಕ ಮಹಾಲೆ
ಭಟ್ಕಳದಲ್ಲಿ ಸೆಪ್ಟೆಂಬರ್ ೧೬ರಂದು ನಡೆದ ಗಣೇಶ ವಿಸರ್ಜನಾ ಮೆರವಣಿಗೆಗೆ ಸಂಬಂಧಿಸಿದಂತೆ ಕೇಳಿಬಂದಿರುವ ಕಲ್ಲು ತೂರಾಟದ ಆರೋಪಗಳು ಇದೀಗ ಎರಡು ಪ್ರತ್ಯೇಕ ದೂರುಗಳ ತನಿಖೆಯ ಹಂತಕ್ಕೆ ಬಂದಿವೆ. ಒಂದು ಕಡೆ ಮಸೀದಿ ಮತ್ತು ಮದರಸಾ ಕಟ್ಟಡದ ಮೇಲೆ ಕಲ್ಲು ತೂರಾಟ ನಡೆದಿದೆ ಎಂಬ ದೂರು ದಾಖಲಾಗಿದ್ದರೆ, ಮತ್ತೊಂದೆಡೆ ಗಣೇಶ ಮೆರವಣಿಗೆಯ ಮೇಲೂ ಕಲ್ಲು ತೂರಾಟ ನಡೆದಿದೆ ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಪ್ರತಿದೂರು ನೀಡಿದ್ದಾರೆ.
ಇದರ ಬೆನ್ನಲ್ಲೇ ಕೆಲವು ದಿನಗಳ ನಂತರ ಗಣೇಶೋತ್ಸವದ ಪೆಂಡಾಲ್ ಮೇಲೂ ಕಲ್ಲು ಎಸೆಯಲಾಗಿದೆ ಎಂಬ ಆರೋಪ ಕೇಳಿಬಂದಿರುವುದು ಪರಿಸ್ಥಿತಿಯ ಸೂಕ್ಷ್ಮತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಕುರಿತು ಭಟ್ಕಳ ತಾಲೂಕು ರಿಕ್ಷಾ ಚಾಲಕರ-ಮಾಲಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ.
ಈ ಎಲ್ಲ ಘಟನೆಯ ಹಿಂದೆ ಯಾರಿದ್ದಾರೆ, ಯಾವ ಸಂದರ್ಭಗಳಲ್ಲಿ ಘಟನೆ ನಡೆದಿದೆ ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ಪೊಲೀಸರ ತನಿಖೆಯ ಮೇಲಿದೆ. ಆರೋಪಗಳು ಕೇಳಿಬಂದ ತಕ್ಷಣವೇ ಯಾವುದೇ ಸಮುದಾಯವನ್ನು ತಪ್ಪಿತಸ್ಥರೆಂದು ನಿರ್ಧರಿಸುವುದು ಸಮಾಜದ ಹಿತದೃಷ್ಟಿಯಿಂದ ಸರಿಯಾದ ಕ್ರಮವಲ್ಲ. ಸಿಸಿಟಿವಿ ದೃಶ್ಯಾವಳಿ, ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ, ಸ್ಥಳ ಪರಿಶೀಲನೆ ಹಾಗೂ ಇತರ ಲಭ್ಯ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಯಬೇಕಿದೆ. ತನಿಖೆಯ ಫಲಿತಾಂಶದ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು ಮುಖ್ಯ.
ಇಂತಹ ಘಟನೆಗಳಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರವೂ ನಿರ್ಣಾಯಕವಾಗಿರುತ್ತದೆ. ಪರಿಶೀಲಿಸದ ವಿಡಿಯೋಗಳು, ಅರ್ಧಸತ್ಯದ ಮಾಹಿತಿಗಳು ಅಥವಾ ಪ್ರಚೋದನಕಾರಿ ಸಂದೇಶಗಳು ಕ್ಷಣಾರ್ಧದಲ್ಲಿ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಬಹುದು. ಆದ್ದರಿಂದ ನಾಗರಿಕರು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿದ್ದಾರೆ.
ಗಣೇಶೋತ್ಸವವಾಗಲಿ, ಈದ್ ಆಗಲಿ ಅಥವಾ ಯಾವುದೇ ಧಾರ್ಮಿಕ ಕಾರ್ಯಕ್ರಮವಾಗಲಿ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲ ಸಮುದಾಯಗಳ ಹಕ್ಕು ಮತ್ತು ಭಾವನೆಗಳಿಗೆ ಗೌರವ ನೀಡುವುದು ಅತ್ಯಗತ್ಯ. ಧಾರ್ಮಿಕ ಆಚರಣೆಗಳು ಪರಸ್ಪರ ಸಂಘರ್ಷಕ್ಕೆ ಕಾರಣವಾಗದೆ, ಸಹಬಾಳ್ವೆಯ ಸಂದೇಶ ನೀಡುವಂತಾಗಬೇಕು.
ಭಟ್ಕಳವು ವೈವಿಧ್ಯಮಯ ಸಮುದಾಯಗಳು ದೀರ್ಘಕಾಲದಿಂದ ಒಟ್ಟಾಗಿ ಬದುಕುತ್ತಿರುವ ಕರಾವಳಿ ನಗರ . ಒಂದು ಘಟನೆಯ ಪರಿಣಾಮವಾಗಿ ಸಮುದಾಯಗಳ ನಡುವಿನ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ.
ಈಗಾಗಲೇ ಮಸೀದಿ ಮೇಲೆ ಕಲ್ಲು ತೋರಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಬಂಧಿಸಿ ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇನ್ನೊಂದೆಡೆ ಮೆರವಣಿಗೆ ಮೇಲೆ ಕಲ್ಲು ತೂರಿದ ಆರೋಪವನ್ನು ಆರು ಅಪ್ರಾಪ್ತರ ಮೇಲೆ ಹೊರಿಸಲಾಗಿದೆ. ಪೊಲೀಸರು ಎರಡೂ ದೂರುಗಳನ್ನು ಸಮಾನ ಗಂಭೀರತೆಯಿಂದ ತನಿಖೆ ನಡೆಸಿ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸತ್ಯವನ್ನು ಹೊರತರುವ ಅಗತ್ಯವಿದೆ. ತಪ್ಪಿತಸ್ಥರು ಯಾರೇ ಆಗಿರಲಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಅದೇ ಸಂದರ್ಭದಲ್ಲಿ ನಿರಪರಾಧಿಗಳ ಮೇಲೆ ಆರೋಪ ಅಥವಾ ಸಾಮಾಜಿಕ ಒತ್ತಡ ಉಂಟಾಗದಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ.
ಈ ಸಂದರ್ಭದಲ್ಲಿ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರ ಜವಾಬ್ದಾರಿಯೂ ಹೆಚ್ಚಿದೆ. ಭಾವನಾತ್ಮಕ ಹೇಳಿಕೆಗಳ ಬದಲಿಗೆ ಶಾಂತಿ, ಕಾನೂನು ಮತ್ತು ಪರಸ್ಪರ ನಂಬಿಕೆಯನ್ನು ಬಲಪಡಿಸುವ ಸಂದೇಶ ನೀಡಬೇಕಾಗಿದೆ.
ಕಲ್ಲಿಗೆ ಕಲ್ಲಿನಿಂದ ಉತ್ತರ ನೀಡುವುದು ಸಮಸ್ಯೆಗೆ ಪರಿಹಾರವಲ್ಲ. ತನಿಖೆ ಮತ್ತು ಕಾನೂನು ಪ್ರಕ್ರಿಯೆಯ ಮೂಲಕ ಸತ್ಯ ಹೊರಬರಬೇಕು. ಭಟ್ಕಳದ ಶಾಂತಿ ಮತ್ತು ಸೌಹಾರ್ದತೆ ಯಾವುದೇ ಕ್ಷಣಿಕ ಪ್ರಚೋದನೆಗಿಂತ ದೊಡ್ಡದು.
ಆದ್ದರಿಂದ ಈಗ ಅಗತ್ಯವಿರುವುದು ಆರೋಪ-ಪ್ರತ್ಯಾರೋಪಗಳ ವಿಸ್ತರಣೆ ಅಲ್ಲ; ಸತ್ಯಾಂಶದ ಆಧಾರದ ಮೇಲೆ ತನಿಖೆ, ಕಾನೂನುಬದ್ಧ ಕ್ರಮ ಮತ್ತು ಸಮಾಜದಲ್ಲಿ ಶಾಂತಿ ಕಾಪಾಡುವ ಸಾಮೂಹಿಕ ಪ್ರಯತ್ನ. ಭಟ್ಕಳದ ಜನತೆ ಇದೇ ಜವಾಬ್ದಾರಿಯುತ ನಿಲುವನ್ನು ನಿರೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ:
ಭಟ್ಕಳದಲ್ಲಿ ಹೆಚ್ಚುತ್ತಿರುವ ಭಿಕ್ಷಾಟನೆ: ಭಿಕ್ಷೆಯ ಹಿಂದೆ ನಡೆಯುತ್ತಿರುವುದೇನು?

